ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಕೆ.ಎಸ್. ಪುಟ್ಟಣ್ಣಯ್ಯ ಬಣದ ರೈತಸಂಘದ ಕಾರ್ಯಕರ್ತರು ಕಳೆದ ೩೯ ದಿನಗಳಿಂದ ಪಟ್ಟಣದಲ್ಲಿ ನಡೆಯುತ್ತಿದ್ದ ಅಹೋ ರಾತ್ರಿ ಧರಣಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಭರವಸೆ ಹಿನ್ನಲೆ ಅಂತ್ಯಗೊಂಡಿದೆ. ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಅಕ್ಟೋಬರ್ ೧೩ರಂದು ತಾಲೂಕು ರೈತಸಂಘದ ಆಶ್ರಯದಲ್ಲಿ ಅಹೋ ರಾತ್ರಿ ಧರಣಿಗೆ ಮೇಲು ಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಚಾಲನೆ ನೀಡಿದ್ದರು. ಧರಣಿ ಸ್ಥಳಕ್ಕೆ ಬುಧವಾರ ಬೆಳಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅವರು ಸ್ಥಳೀಯ ಶಾಸಕ ಎಚ್.ಎಂ. ಗಣೇಶ್ ಪ್ರಸಾದ್, ಜಿಲ್ಲಾಧಿಕಾರಿ ಟಿ.ಸಿ. ಶಿಲ್ಪನಾಗ್ ಜೊತೆ ಭೇಟಿ ನೀಡಿ ಧರಣಿ ಸ್ಥಳದಲ್ಲಿ ಕುಳಿತು ರೈತಸಂಘದ ಮನವಿ ಆಲಿಸಿದರು.ಕೆರೆಗಳಿಗೆ ನೀರು ತುಂಬಿಸಬೇಕು, ಸಾಗುವಳಿ ಚೀಟಿ ನೀಡಬೇಕು, ಕಾಡು ಪ್ರಾಣಿಗಳ ಹಾವಳಿ ನಿಲ್ಲಬೇಕು ಸೇರಿ ಇನ್ನಿತರ ಪ್ರಮುಖ ಐದು ಬೇಡಿಕೆಗಳನ್ನು ರಾಜ್ಯ ರೈತಸಂಘದ ಕಾರ್ಯಾಧ್ಯಕ್ಷ ಎ.ಎಂ. ಮಹೇಶ್ ಪ್ರಭು, ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ ಸಚಿವರು, ಶಾಸಕರು ಹಾಗೂ ಜಿಲ್ಲಾಧಿಕಾರಿ ಗಮನಕ್ಕೆ ತಂದರು.
ಬಳಿಕ ಮಾತನಾಡಿದ ಸಚಿವ ಕೆ. ವೆಂಕಟೇಶ್ ಬರುವ ಡಿಸೆಂಬರ್ ಮೊದಲ ವಾರದಲ್ಲಿ ಕೆರೆಗಳಿಗೆ ನೀರು ತುಂಬಿಸಲು ಎಲ್ಲಾ ಪ್ರಯತ್ನ ಜಿಲ್ಲಾಡಳಿತ ಮಾಡುತ್ತಿದೆ. ಖಂಡಿತ ಡಿಸೆಂಬರ್ ಮೊದಲ ವಾರದಲ್ಲಿ ನೀರು ಹರಿಯಲಿದೆ. ರೈತರು ಸಹಕರಿಸಿ ಎಂದರು.ಕಾಡು ಪ್ರಾಣಿಗಳ ಹಾವಳಿ ತಡೆ ಹಾಗೂ ಸಾಗುವಳಿ ಚೀಟಿ ನೀಡಲು ಇರುವ ಕಾನೂನು ತೊಡಕು ಬಗೆಹರಿಸಲು ಪ್ರಯತ್ನಿಸಲಾಗುವುದು. ಇನ್ನಿತರ ಬೇಡಿಕೆ ಜಿಲ್ಲಾಡಳಿತ ಈಡೇರಿಸುತ್ತದೆ. ಪ್ರತಿಭಟನೆ ಕೈ ಬಿಡಿ, ಜಿಲ್ಲಾಡಳಿತದೊಂದಿಗೆ ಸಹಕರಿಸಿ ಎಂದರು.
ಸರ್ಕಾರದ ನಿರ್ಧಾರ:ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ತಾತ್ಕಾಲಿಕ ಅರಣ್ಯ ಇಲಾಖೆ ನಿಲ್ಲಿಸಿದೆ. ಸಂಪೂರ್ಣ ನಿಲ್ಲಿಸಬೇಕು ಎಂದು ರೈತ ಮುಖಂಡರು ಸಚಿವರನ್ನು ಒತ್ತಾಯಿಸಿದಾಗ ಸಚಿವ ಕೆ.ವೆಂಕಟೇಶ್ ಪ್ರತಿಕ್ರಿಯಿಸಿ, ಸಫಾರಿ ಬಂದ್ ಮಾಡಲು ಆಗುವುದಿಲ್ಲ. ಪ್ರವಾಸೋದ್ಯಮ ನಡೆಯಬೇಕಲ್ಲ. ಸಫಾರಿ ನಿಲ್ಲಿಸೋದು ಸರ್ಕಾರ ನಿರ್ಧರಿಸಬೇಕು ಎಂದರು.
ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಮಾತನಾಡಿ ತಾಲೂಕಿನ 110 ಕೆರೆ, ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಗೆ ಟೆಂಡರ್ ಆಗಿದೆ. ಕಾವೇರಿ ನೀರಾವರಿ ನಿಗಮದ ಸಲಹಾ ಸಮಿತಿ ಒಪ್ಪಿದೆ. ಹೊಸ ವರ್ಷದಲ್ಲಿ ಗುದ್ದಲಿ ಪೂಜೆ ಮಾಡಿಸಲಾಗುವುದು ಎಂದು ರೈತರ ಮನವಿಗೆ ಉತ್ತರಿಸಿದರು.ಜಿಲ್ಲಾಧಿಕಾರಿ ಟಿ.ಸಿ.ಶಿಲ್ಪ ನಾಗ್, ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ಎಸ್. ಪ್ರಭಾಕರನ್, ಕಾವೇರಿ ನೀರಾವರಿ ನಿಗಮದ ಎಇಇ ಮಾತನಾಡಿ ರೈತರ ಪ್ರಶ್ನೆಗಳಿಗೆ ಉತ್ತರಿಸಿದರು.
ಈ ಸಮಯದಲ್ಲಿ ಕಾಡಆ ಮಾಜಿ ಅಧ್ಯಕ್ಷ ಎಚ್.ಎಸ್. ನಂಜಪ್ಪ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಬಿ. ರಾಜಶೇಖರ್, ಬಿ.ಎಂ. ಮುನಿರಾಜು, ಟಿಎಪಿಸಿಎಂಎಸ್ ಅಧ್ಯಕ್ಷ ಜಿ.ಮಡಿವಾಳಪ್ಪ, ಎಪಿಎಂಸಿ ಅಧ್ಯಕ್ಷ ಆರ್.ಎಸ್. ನಾಗರಾಜು,ಪುರಸಭೆ ಮಾಜಿ ಅಧ್ಯಕ್ಷ ಶಶಿಧರ್ ಪಿ.ದೀಪು, ತಾಪಂ ಮಾಜಿ ಉಪಾಧ್ಯಕ್ಷ ಬಂಗಾರ ನಾಯಕ, ತಹಸೀಲ್ದಾರ್ ಎಂ.ಎಸ್. ತನ್ಮಯ್, ರೈತ ಸಂಘದ ಜಿಲ್ಲಾ ಮುಖಂಡ ಹೆಗ್ಗವಾಡಿ ಮಹೇಶ್ ಕುಮಾರ್, ತಾಲೂಕು ಅಧ್ಯಕ್ಷ ಹಂಗಳ ದಿಲೀಪ್, ಮುಖಂಡರಾದ ಹಂಗಳಮಾದು, ಶಿವಣ್ಣ, ನಾಗರಾಜು, ಪುರಸಭೆ ಸದಸ್ಯರಾದ ಇಲಿಯಾಸ್, ಎನ್. ಕುಮಾರ್ ಸೇರಿ ರೈತಸಂಘದ ಕಾರ್ಯಕರ್ತರು ಇದ್ದರು.-----
ತಾತ್ಕಾಲಿಕವಾಗಿ ಮಾತ್ರ ಧರಣಿ ವಾಪಸ್ಗುಂಡ್ಲುಪೇಟೆ: ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹಾಗೂ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಅವರ ಭರವಸೆ ಮೇರೆಗೆ ಅಹೋ ರಾತ್ರಿ ಧರಣಿಯನ್ನು ತಾತ್ಕಾಲಿಕವಾಗಿ ವಾಪಸ್ ಪಡೆಯಲಾಗಿದೆ ಎಂದು ಜಿಲ್ಲಾ ರೈತಸಂಘದ ಅಧ್ಯಕ್ಷ ಶಿವಪುರ ಮಹದೇವಪ್ಪ ಸ್ಪಷ್ಟಪಡಿಸಿದ್ದಾರೆ.
ಕನ್ನಡಪ್ರಭದೊಂದಿಗೆ ಮಾತನಾಡಿ, ಡಿಸೆಂಬರ್ ಮೊದಲ ವಾರದ ತನಕ ಗಡುವು ನೀಡಿ ಧರಣಿ ಸ್ಥಗಿತಗೊಳಿಸಿದ್ದೇವೆ.ಡಿಸೆಂಬರ್ ಮೊದಲ ವಾರದಲ್ಲಿ ಕೆರೆಗಳಿಗೆ ನೀರು ಬರದಿದ್ದಲ್ಲಿ ಮತ್ತೆ ಹೋರಾಟ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.
;Resize=(128,128))
;Resize=(128,128))
;Resize=(128,128))
;Resize=(128,128))