ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ದೆಹಲಿ ಗಡಿಯಲ್ಲಿ ಪಂಜಾಬ್ ಮತ್ತು ಹರಿಯಾಣ ರೈತರು ನಡೆಸುತ್ತಿರುವ ಅಹೋರಾತ್ರಿ ಹೋರಾಟವನ್ನು ಬೆಂಬಲಿಸಿ ಫೆ.27ರಂದು ಗ್ರಾಮ ಮತ್ತು ತಾಲೂಕು ಕೇಂದ್ರಗಳ ಬಂದ್ ಆಚರಿಸುವಂತೆ ರಾಜ್ಯ ರೈತ ಸಂಘ ಕರೆ ಕೊಟ್ಟಿದೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ರೈತ ನಾಯಕ ಕೆ.ಟಿ.ಗಂಗಾಧರ್ ಅವರು, ಈ ಬಂದ್ ಅನ್ನು ಎಲ್ಲ ರೈತರು, ವಿವಿಧ ವ್ಯಾಪಾರ- ವಹಿವಾಟುದಾರರು, ವಿವಿಧ ಸಂಘ-ಸಂಸ್ಥೆಗಳು, ಮಹಿಳಾ ಸಂಘಟನೆಗಳು, ದಲಿತ ಕಾರ್ಮಿಕ ಸಂಘಟನೆಗಳು ಮತ್ತು ಲಾರಿ, ಟ್ಯಾಕ್ಸಿ, ಆಟೋ ಮಾಲೀಕರು, ಚಾಲಕರ ಸಂಸ್ಥೆಗಳು ಮತ್ತು ವಾಣಿಜ್ಯ ಸಂಸ್ಥೆಗಳ ಎಲ್ಲ ಮುಖ್ಯಸ್ಥರು ಬೆಂಬಲಿಸಿ ಸಹಕರಿಸಬೇಕು ಎಂದು ಹೇಳಿದರು.ಫೆ.27ರ ಬೆಳಗ್ಗೆ 11 ಗಂಟೆಗೆ ಅರಹತೊಳಲು ಗ್ರಾಮದ ಎನ್.ಡಿ. ಸುಂದರೇಶ್ ವೃತ್ತದ ಬಳಿ ಪ್ರತಿಭಟನಾ ಸಭೆ ನಡೆಯಲಿದೆ. ಕನಿಷ್ಠ ಬೆಂಬಲ ಬೆಲೆಗೆ ಕಾನೂನಾತ್ಮಕ ಮಾನ್ಯತೆ ನೀಡುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಈ ಪ್ರತಿಭಟನೆ ನಡೆಯುತ್ತಿದೆ. ಎಪಿಎಂಸಿ ಕಾಯಿದೆಗೆ ತಂದ ತಿದ್ದುಪಡಿಯಿಂದ ಎಲ್ಲ ವರ್ಗಗಳೂ ಸಂಕಷ್ಟಕ್ಕೆ ಒಳಗಾಗಿವೆ. ಅಗತ್ಯ ವಸ್ತುಗಳ ಕಾಯಿದೆ ತಿದ್ದುಪಡಿ ಕೂಡ ಮಾಡಬಾರದು ಎಂಬುದು ಒತ್ತಾಯವಾಗಿದೆ. ಇದರಿಂದ ರೈತ ಸಮುದಾಯದ ಆರ್ಥಿಕ ಯೋಗಕ್ಷೇಮ ಕಾಪಾಡಿಕೊಳ್ಳಲು ಮತ್ತು ಅವರ ಶ್ರಮ ಶೋಷಿಸುವವರನ್ನು ಹೊಣೆಗಾರರನ್ನಾಗಿಸಲು ಬಹು ನಿರ್ಣಾಯಕ ಆಗಿರುವಂತ ಅಂಶವಾಗಿದೆ. ಹೀಗಾಗಿ, ಕನಿಷ್ಠ ಬೆಂಬಲ ಯೋಜನೆ ಅಧಿಕೃತ ಪಟ್ಟಿಯಿಂದ ಈಗಾಗಲೇ ಕೈ ಬಿಟ್ಟಿರುವ ಎಲ್ಲ ದವಸ- ಧಾನ್ಯಗಳು ಮತ್ತು ತೋಟಗಾರಿಕೆ ಬೆಳೆಗಳನ್ನು ಎಂಎಸ್‌ಪಿಗೆ ಸೇರಿಸಬೇಕು ಎಂದರು.
ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗಳನ್ನು ವಿರೋಧಿಸುವುದು, ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕಾಗಿ ಒತ್ತಾಯಿಸುವುದು, ಕಬ್ಬು ಬೆಳೆಗೆ ನ್ಯಾಯಯುತ ಬೆಲೆ ನಿಗದಿಪಡಿಸುವುದು ನಮ್ಮ ಬೇಡಿಕೆಯಲ್ಲಿ ಮುಖ್ಯವಾಗಿದೆ. ಭೂಸುಧಾರಣೆ ಕಾಯ್ದೆಗೆ ತಂದ ತಿದ್ದುಪಡಿಗಳಿಂದ ರಿಯಲ್ ಎಸ್ಟೇಟ್ ಸಂಸ್ಥೆಗಳು ಹೆಚ್ಚು ಹೆಚ್ಚು ಕೃಷಿ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಹೀಗಾಗಿ ಇಂತಹ ಕ್ರಮಗಳ ವಿರುದ್ಧ ನಾವು ಒಂದಾಗಬೇಕು ಮತ್ತು ನಮ್ಮ ಕೃಷಿ ಮಾರುಕಟ್ಟೆಯ ಸಮಗ್ರತೆಯನ್ನು ರಕ್ಷಿಸಬೇಕು ಎಂದರು.ಮೇಕೆದಾಟು ಅಣೆಕಟ್ಟು ನಿರ್ಮಾಣ ವಿಳಂಬದಿಂದ ಪ್ರಾದೇಶಿಕ ಅಭಿವೃದ್ಧಿಗೆ ಅಡ್ಡಿಯಾಗುವುದು. ನೀರಿನ ಕೊರತೆಯೂ ಸಮಸ್ಯೆಗಳನ್ನು ಶಾಶ್ವತಗೊಳಿಸುತ್ತದೆ. ಹೀಗಾಗಿ, ಮೇಕೆದಾಟು ಯೋಜನೆಗೆ ತಕ್ಷಣ ಅನುಮತಿ ನೀಡುವಂತೆ ಒತ್ತಾಯಿಸಲಾಗುತ್ತಿದೆ ಎಂದು ಹೇಳಿದರು. ಸುದ್ದಿಗೋಷ್ಟಿಯಲ್ಲಿ ರೈತ ಮುಖಂಡರಾದ ಯಶವಂತ ರಾವ್ ಘೋರ್ಪಡೆ, ಎಚ್.ಎಸ್. ಮಂಜುನಾಥೇಶ್ವರ, ಜಗದೀಶ ನಾಯ್ಕ್, ಸಣ್ಣರಂಗಪ್ಪ, ಮಂಜು ಮೊದಲಾದವರಿದ್ದರು.- - - -ಫೋಟೋ:
ಶಿವಮೊಗ್ಗದಲ್ಲಿ ರೈತ ನಾಯಕ ಕೆ.ಟಿ.ಗಂಗಾಧರ್ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.