ಗಣಿತ ಶಿಕ್ಷಕ ಮೋಹನ್‌ಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

| Published : Sep 27 2024, 01:27 AM IST

ಗಣಿತ ಶಿಕ್ಷಕ ಮೋಹನ್‌ಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಕರ ದಿನಾಚರಣೆಯ ಅಂಗವಾಗಿ ಪ್ರತಿ ವರ್ಷ ಹಾಸನ ಜಿಲ್ಲೆಯಲ್ಲಿ ಶೈಕ್ಷಣಿಕವಾಗಿ ಸಾಧನೆ ಮಾಡಿದ ಶಿಕ್ಷಕರನ್ನು ಗುರುತಿಸಿ ಜಿಲ್ಲಾಡಳಿತದಿಂದ ಅತ್ಯುತ್ತಮ ಶಿಕ್ಷಕರನ್ನು ಆಯ್ಕೆ ಮಾಡಿ ಗೌರವಿಸಲಾಗುತ್ತಿದ್ದು, ಈ ಬಾರಿ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಬೆಳವಾಡಿ ಶಾಲೆಯ ಗಣಿತ ಶಿಕ್ಷಕರಾದ ಎಂ ಮೋಹನ್ ಇವರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬಸವಾಪಟ್ಟಣ

ಇಲ್ಲಿಗೆ ಸಮೀಪದ ಬೆಳವಾಡಿ ಗ್ರಾಮದ ಶಿಕ್ಷರಾದ ಎಂ ಮೋಹನ್ ಅವರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.

ಶಿಕ್ಷಕರ ದಿನಾಚರಣೆಯ ಅಂಗವಾಗಿ ಪ್ರತಿ ವರ್ಷ ಹಾಸನ ಜಿಲ್ಲೆಯಲ್ಲಿ ಶೈಕ್ಷಣಿಕವಾಗಿ ಸಾಧನೆ ಮಾಡಿದ ಶಿಕ್ಷಕರನ್ನು ಗುರುತಿಸಿ ಜಿಲ್ಲಾಡಳಿತದಿಂದ ಅತ್ಯುತ್ತಮ ಶಿಕ್ಷಕರನ್ನು ಆಯ್ಕೆ ಮಾಡಿ ಗೌರವಿಸಲಾಗುತ್ತಿದ್ದು, ಈ ಬಾರಿ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಬೆಳವಾಡಿ ಶಾಲೆಯ ಗಣಿತ ಶಿಕ್ಷಕರಾದ ಎಂ ಮೋಹನ್ ಇವರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಎಂ ಮೋಹನ್ ಇವರು ಗಣಿತ ವಿಷಯ ಸಂಪನ್ಮೂಲ ವ್ಯಕ್ತಿಯಾಗಿದ್ದು, ಗಣಿತ ಶಿಕ್ಷಕರ ಬಳಕೆಗಾಗಿ ಶಾಲಾ ಅವಶ್ಯಕ ದಾಖಲೆಗಳನ್ನು ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಲಿಕಾ ದೃಢೀಕರಣ ಖಾತ್ರಿಗೊಳಿಸುವ ಅಭ್ಯಾಸದ ಹಾಳೆಗಳನ್ನು ತಯಾರಿಸಿ ರಾಜ್ಯಾದ್ಯಂತ ಶಿಕ್ಷಕರಿಂದ ಹಾಗೂ ವಿದ್ಯಾರ್ಥಿಗಳಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಕ್ರಿಯಾಯೋಜನೆ ತಯಾರಿಸಿ ಪರೀಕ್ಷೆಯ ಫಲಿತಾಂಶವನ್ನು ಉತ್ತಮ ಪಡಿಸುವ ನಿಟ್ಟಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಶಾಲೆಯಲ್ಲಿ ಉತ್ತಮ ಫಲಿತಾಂಶವನ್ನು ನೀಡುತ್ತಾ ಬರುತ್ತಿದ್ದಾರೆ. ಹಾಸನ ಜಿಲ್ಲೆ ಅಷ್ಟೇ ಅಲ್ಲದೇ ಇತರೆ ಜಿಲ್ಲೆಯ ತಾಲೂಕಿನಲ್ಲೂ ಕೂಡ ಗಣಿತ ಸಂಪನ್ಮೂಲ ವ್ಯಕ್ತಿಯಾಗಿ ಗಣಿತ ಶಿಕ್ಷಕರಿಗೆ ಹಲವು ಬಾರಿ ತರಬೇತಿಯನ್ನು ನೀಡಿದ್ದಾರೆ.

ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ರಾಜ್ಯದಲ್ಲಿನ ಎಲ್ಲಾ ಆದರ್ಶ ವಿದ್ಯಾಲಯದ ಗಣಿತ ಶಿಕ್ಷಕರಿಗೆ ತರಬೇತಿಯನ್ನು ನೀಡಿರುವುದರ ಜೊತೆಗೆ "ಕಲಿಕಾ ಚೇತರಿಕೆ " ಎಂಬ ಶಾಲಾ ಶಿಕ್ಷಣ ಇಲಾಖೆಯ ವಿನೂತನ ಶೈಕ್ಷಣಿಕ ಕಾರ್ಯದಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಹಾಸನ ಜಿಲ್ಲೆಯ ಗಣಿತ ಶಿಕ್ಷಕರಿಗೆ ಶಾಲೆಗಳಲ್ಲಿ ಕಲಿಕಾ ಚೇತರಿಕೆಯ ಅನುಷ್ಠಾನದ ಕುರಿತು ತರಬೇತಿಯನ್ನು ನೀಡಿರುತ್ತಾರೆ. ಶಾಲಾ ಶಿಕ್ಷಣ ಇಲಾಖೆಯು ವಹಿಸಿಕೊಡುವ ಪ್ರತಿಯೊಂದು ಕೆಲಸ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಿ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಿರುವ ಇವರಿಗೆ ೨೦೨೪-೨೫ ನೇ ಸಾಲಿನಲ್ಲಿ ಹಾಸನ ಜಿಲ್ಲಾಡಳಿತ ಮತ್ತು ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನೀಡುವ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದು, ಪ್ರಸ್ತುತ ಇವರು ಪ್ರಭಾರ ಮುಖ್ಯೋಪಾಧ್ಯಾಯರಾಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ದೊರಕಿದ ಎಂ ಮೋಹನ್ ಅವರಿಗೆ ಬೆಳವಾಡಿ ಪ್ರೌಢಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು ಸಂತಸ ವ್ಯಕ್ತಪಡಿಸಿದ್ದಾರೆ. ಅರಕಲಗೂಡಿನ ಎಲ್ಲಾ ಶಾಲೆಯ ಮುಖ್ಯೋಪಾಧ್ಯಾಯರು, ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಎಲ್ಲಾ ಪದಾಧಿಕಾರಿಗಳು, ವಿದ್ಯಾರ್ಥಿಗಳ ಪಾಲಕ-ಪೋಷಕರು, ಊರ ಮುಖಂಡರು ಹಾಗೂ ಹಳೆಯ ವಿದ್ಯಾರ್ಥಿಗಳು ಇವರಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ್ದಾರೆ.