ಸಾರಾಂಶ
ಚುನಾವಣಾ ಪ್ರಚಾರ ವಿಷಯಕ್ಕೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಜಿಲ್ಲಾ ಚುನಾವಣಾಧಿಕಾರಿ ಕಚೇರಿ ಹಾಗೂ ಸಹಾಯಕ ಚುನಾವಣಾ ಅಧಿಕಾರಿಗಳ ಕಚೇರಿಯಿಂದ ಅನುಮತಿ ಪಡೆಯಬೇಕಿದ್ದು, ಇದಕ್ಕಾಗಿ ಸಿಂಗಲ್ ವಿಂಡೋ ವ್ಯವಸ್ಥೆ ಮಾಡಲಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಚುನಾವಣಾ ಆಯೋಗ ನೀಡುವ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
ಕನ್ನಡಪ್ರಭ ವಾರ್ತೆ ಮದ್ದೂರು
ಲೋಕಸಭಾ ಚುನಾವಣೆ ವೇಳೆ ಅಕ್ರಮ ತಡೆಗಟ್ಟಲು ಕ್ಷೇತ್ರ ವ್ಯಾಪ್ತಿ ತೆರೆದಿರುವ ಚೆಕ್ ಪೋಸ್ಟ್‌ಗಳಿಗೆ ಜಿಲ್ಲಾಧಿಕಾರಿ ಡಾ. ಕುಮಾರ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.ರಾಮನಗರ ಜಿಲ್ಲೆ ಸಂಪರ್ಕ ಹೊಂದಿರುವ ತಾಲೂಕು ಕೊಂಗಬೋರನ ದೊಡ್ಡಿ, ನಿಡಘಟ್ಟದ ಬೆಂಗಳೂರು - ಮೈಸೂರು ಎಕ್ಸ್ ಪ್ರೆಸ್ ವೇ ಬಳಿಯ ಕೂಳಗೆರೆ ಹಾಗೂ ತುಮಕೂರು ಜಿಲ್ಲೆ ಸಂಪರ್ಕಿಸುವ ಆತಗೂರು ಹೋಬಳಿಯ ಮಲ್ಲನಕುಪ್ಪೆ ಗೇಟ್ ಚೆಕ್ ಪೋಸ್ಟ್‌ಗಳಿಗೆ ಭೇಟಿ ನೀಡಿ ವ್ಯವಸ್ಥೆ ಕುರಿತಂತೆ ಪರಿಶೀಲನೆ ನಡೆಸಿದರು.
ಚೆಕ್ ಪೋಸ್ಟ್‌ಗಳಿಗೆ ಸಿಬ್ಬಂದಿ ನಿಯೋಜನೆ, ಸಿಸಿ ಕ್ಯಾಮೆರಾ ಹಾಗೂ ಹೆದ್ದಾರಿ ವಾಹನಗಳ ತಪಾಸಣೆ ಕುರಿತು ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡರು. ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ಅಕ್ರಮ ತಡೆಗಟ್ಟಲು ಈಗಾಗಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದರು.ಪ್ರತಿ ಚೆಕ್ ಪೋಸ್ಟ್‌ಗಳಲ್ಲಿ ಅಧಿಕಾರಿ, ಪೊಲೀಸರು ಮತ್ತು ಸಿಬ್ಬಂದಿ ಮೂರು ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಾರೆ. ಚೆಕ್ ಪೋಸ್ಟ್‌ಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿ ಹೆದ್ದಾರಿಯಲಿ ಸಂಚರಿಸುವ ವಾಹನಗಳ ಮೇಲೆ ತೀವ್ರ ನಿಗಾವಹಿಸಿ ತಪಾಸಣೆಗೆ ಒಳಪಡಿಸಬೇಕು ಎಂದು ಸೂಚನೆ ನೀಡಲಾಗಿದೆ ಎಂದರು.
ವಾಹನಗಳ ತಪಾಸಣೆ ವೇಳೆ ಹಣ, ಮದ್ಯ ಹಾಗೂ ದಾಖಲೆಯಿಲ್ಲದ ವಸ್ತುಗಳು ಕಂಡುಬಂದಲ್ಲಿ ಅವುಗಳನ್ನು ತಕ್ಷಣ ಜಪ್ತಿ ಮಾಡಿ ಪ್ರಕರಣ ದಾಖಲಿಸಲಾಗುವುದು ಎಂದರು.ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಕ್ ತನ್ವೀರ್ ಆಸಿಫ್ ಹಾಗೂ ಮದ್ದೂರು ಸರ್ಕಲ್ ಇನ್ಸ್ ಪೆಕ್ಟರ್ ಕೆ .ಆರ್. ಪ್ರಸಾದ್ ಇದ್ದರು.
ಚುನಾವಣಾ ಆಯೋಗದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ: ಡಾ.ಕುಮಾರಕನ್ನಡಪ್ರಭ ವಾರ್ತೆ ಮಂಡ್ಯರಾಜಕೀಯ ಪಕ್ಷಗಳು ಹಾಗೂ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಚುನಾವಣಾ ಆಯೋಗ ನೀಡುವ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಜಕೀಯ ಮುಖಂಡರ ಸಭೆ ನಡೆಸಿ ಮಾತನಾಡಿ, ಚುನಾವಣಾ ಪ್ರಚಾರ ವಿಷಯಕ್ಕೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಜಿಲ್ಲಾ ಚುನಾವಣಾಧಿಕಾರಿ ಕಚೇರಿ ಹಾಗೂ ಸಹಾಯಕ ಚುನಾವಣಾ ಅಧಿಕಾರಿಗಳ ಕಚೇರಿಯಿಂದ ಅನುಮತಿ ಪಡೆಯಬೇಕಿದ್ದು, ಇದಕ್ಕಾಗಿ ಸಿಂಗಲ್ ವಿಂಡೋ ವ್ಯವಸ್ಥೆ ಮಾಡಲಾಗಿದೆ ಎಂದರು.ಚುನಾವಣೆಯ ಕೆಲಸಗಳಿಗೆ ನಿಯೋಜಿಸಿರುವ ಸಿಬ್ಬಂದಿ ವಿವರ, ಮತದಾರರ ವಿವರ, ಸುವಿಧಾ, ಸಿ-ವಿಜಿಲ್, ಸಕ್ಷಮ, ವೋಟರ್ ಹೆಲ್ಪ್‌ಲೈನ್, ಕೆವೈಸಿ ಆ್ಯಪ್‌ಗಳ ಬಗ್ಗೆ ವಿವರಿಸಿದರು.ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸೀಫ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಚುನಾವಣಾ ತಹಸೀಲ್ದಾರ್ ವೆಂಕಟಾಚಲಪತಿ, ವಿವಿಧ ಪಕ್ಷದ ಮುಖಂಡರಾದ ನವೀನ್ ಟಿ.ಆರ್.ದಿನೇಶ್, ಬೂದನೂರು ಬೊಮ್ಮಯ್ಯ ಸೇರಿದಂತೆ ಇತರರಿದ್ದರು.