ನೀರು ಬಳಕೆ ನಿಷೇಧ ವಿರೋಧಿಸಿ ಜಿಲ್ಲಾ ರೈತ ಸಂಘ ಪ್ರತಿಭಟನೆ

| Published : Mar 16 2024, 01:45 AM IST

ಸಾರಾಂಶ

ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ರೈತರು ಜಿಲ್ಲಾಕಾರಿ ಕಚೇರಿ ಮುಂಭಾಗ ಜಮಾಯಿಸಿ ಪ್ರತಿಭಟಿಸಿ, ವರ್ಷಕ್ಕೆ ೨ ತಿಂಗಳು ತಮ್ಮ ಬೆಳೆಗಳಿಗೆ ನೀರು ಬಳಸುವ ರೈತರಿಗೆ ನದಿ ಮತ್ತು ಇತರೆ ಮೂಲಗಳಿಂದ ನೀರನ್ನು ಬಳಸಲು ಅವಕಾಶ ನೀಡಬೇಕೆಂದು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ನದಿ ಮತ್ತು ನದಿ ಮೂಲಗಳಿಂದ ಕೃಷಿ ಸೇರಿದಂತೆ ಇತರೆ ಚಟುವಟಿಕೆಗಳಿಗೆ ನೀರು ಬಳಸುವುದಕ್ಕೆ ನಿಷೇಧ ಹೇರಿರುವುದನ್ನು ವಿರೋಧಿಸಿ ಜಿಲ್ಲಾ ರೈತ ಸಂಘದಿಂದ ಜಿಲ್ಲಾಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ರೈತರು ಜಿಲ್ಲಾಕಾರಿ ಕಚೇರಿ ಮುಂಭಾಗ ಜಮಾಯಿಸಿ ಪ್ರತಿಭಟಿಸಿ, ವರ್ಷಕ್ಕೆ ೨ ತಿಂಗಳು ತಮ್ಮ ಬೆಳೆಗಳಿಗೆ ನೀರು ಬಳಸುವ ರೈತರಿಗೆ ನದಿ ಮತ್ತು ಇತರೆ ಮೂಲಗಳಿಂದ ನೀರನ್ನು ಬಳಸಲು ಅವಕಾಶ ನೀಡಬೇಕೆಂದು ಆಗ್ರಹಿಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಮನು ಸೋಮಯ್ಯ ಮಾತನಾಡಿ, ಕೋಟ್ಯಂತರ ಜನರಿಗೆ ನೀರುಣಿಸುವ ಕಾವೇರಿ ನಾಡಿನಲ್ಲಿ ರೈತರ ಬೆಳೆಗೆ ನೀರಿಲ್ಲದಂತಾಗಿದೆ. ವರ್ಷದಲ್ಲಿ ೨ ತಿಂಗಳು ಮಾತ್ರ ರೈತರು ತಮ್ಮ ಬೆಳೆಗಳಿಗೆ ನೀರನ್ನು ಬೆಳೆಸುತ್ತಾರೆ. ಈಗ ಜಿಲ್ಲಾಕಾರಿ ಹೊರಡಿಸಿರುವ ನಿಷೇಧಾಜ್ಞೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.ಜಿಲ್ಲೆಯಲ್ಲಿ ವರ್ಷವಿಡೀ ಕಾರ್ಯ ನಿರ್ವಹಿಸುವ ದೊಡ್ಡ ದೊಡ್ಡ ರೆಸಾರ್ಟ್ ಗಳಲ್ಲಿ ಲಕ್ಷಾಂತರ ಪ್ರವಾಸಿಗರು ಬಂದು ನೀರು ಪೋಲುಮಾಡಿ ಮೋಜು ಮಸ್ತಿ ಮಾಡಿ ಹೋಗುತ್ತಾರೆ. ಜಿಲ್ಲೆಯ ಬೆಡ್ಡಗುಡ್ಡಗಳನ್ನು, ಗದ್ದೆಗಳನ್ನು ಭೂಪತಿವರ್ತನೆ ಮಾಡಿ ರೆಸಾರ್ಟ್‌ಗಳನ್ನು ನಿರ್ಮಿಸಲು ಅನುಮತಿ ನೀಡಿರುವುದರಿಂದ ಇಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಬಗ್ಗೆ ಚಿಂತನೆಯಾಗಬೇಕಿದೆ ಎಂದರು. ಈ ವರ್ಷ ಮಳೆ ಕಡಿಮೆಯಾಗಿದ್ದು, ನೀರಿಗೆ ಸಮಸ್ಯೆಯಾಗಲಿದೆ ಎಂಬುದು ಮೊದಲೇ ತಿಳಿದಿತ್ತು. ಮೊದಲೇ ಈ ಬಗ್ಗೆ ಎಚ್ಚೆತ್ತುಕೊಂಡು ಚೆಕ್‌ಡ್ಯಾಂ ನಿರ್ಮಾಣಮುಂತಾದ ಕ್ರಮಗಳನ್ನು ಕೈಗೊಳ್ಳುವ ಮೂಲಕ ಜಲ ಸಂರಕ್ಷಣೆಗೆ ಮುಂದಾಗಬೇಕಿದ್ದ ಜಿಲ್ಲಾಡಳಿತ ಅಂದು ಸುಮ್ಮನಿದ್ದು ಇಂದು ರೈತರು ನೀರನ್ನು ಬಳಸಬಾರದು ಎಂಬ ಆದೇಶ ಹೊರಡಿಸಿರುವುದು ಸರಿಯಲ್ಲ ಎಂದರು.ರೈತ ಸಂಘದಿಂದ ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಜಿಲ್ಲಾಕಾರಿ ವೆಂಕಟ್ ರಾಜಾ ಅವರಿಗೆ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಕಾರಿ, ಇಡೀ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ತೊಂದರೆಯುಂಟಾಗಿದ್ದು, ನೀರಿನ ದುರ್ಬಳಕೆಯಾಗುತ್ತಿದೆ ಎಂಬ ಅಧಿಕಾರಿಗಳು, ಮಾಧ್ಯಮಗಳು ಮತ್ತು ಸಾರ್ವಜನಿಕರ ದೂರಿನ ಮೇರೆಗೆ ಸಭೆ ನಡೆಸಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಕಾನೂನಿನಂತೆ ಕುಡಿಯುವ ಉದ್ದೇಶಕ್ಕೆ ಹೊರತು ನೀರನ್ನು ಬಳಸಬಾರದು ಎಂದು ಆದೇಶಿಸಲಾಗಿದ್ದು, ಇದು ಎಲ್ಲಾ ಕಾಲಕ್ಕೂ ಅನ್ವಯಿಸುತ್ತದೆ. ರೈತರಿಗೆ ತೊಂದರೆ ನೀಡಬೇಕೆಂಬ ಉದ್ದೇಶ ಜಿಲ್ಲಾಡಳಿತಕ್ಕೆ ಇಲ್ಲ ಎಂದು ಸ್ಪಷ್ಟಪಡಿಸಿದರು.