ಸಾರಾಂಶ
ಸಮಾವೇಶದಲ್ಲಿ ಕೃಷಿ ಮಾಹಿತಿ -ಮಾರ್ಗದರ್ಶನಗಳ ಜೊತೆಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಆಧುನಿಕ ಕೃಷಿ ಪರಿಕರಗಳು, ಹೊಸ ಆವಿಷ್ಕೃತ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು, ವಿವಿಧ ಬೆಳೆಗಳ ಸುಧಾರಿತ ತಂತ್ರಜ್ಞಾನದಿಂದ ಬೆಳೆಸಿದ ಗಿಡಗಳು, ಬೀಜ, ಕೃಷಿ ಸಂಬಂಧಿ ಪುಸ್ತಕ ಮಳಿಗೆಗಳು ಇರುತ್ತವೆ.
ಕನ್ನಡಪ್ರಭ ವಾರ್ತೆ ಉಡುಪಿ
ನಗರಗಳಲ್ಲದೆ ಹಳ್ಳಿಗಳಲ್ಲಿ ಕೂಡಾ ಕೃಷಿಯಿಂದ ವಿಮುಖವಾಗುತ್ತಿರುವ ಕೃಷಿಕರಿಗೆ ಹಾಗೂ ಕೃಷಿ ಆಸಕ್ತರಿಗೆ ಕಡಿಮೆ ಖರ್ಚಿನಲ್ಲಿ ಸುಲಭದ ಕೃಷಿ, ಹೈನುಗಾರಿಕೆ, ವಿಭಿನ್ನ ಕೃಷಿ ಬೆಳೆಗಳು, ಯಾಂತ್ರೀಕರಣ ವಿಷಯಗಳನ್ನು, ಜಿಲ್ಲೆಯಲ್ಲಿ ಗ್ರಾಮ ಸಮಿತಿಗಳ ಮೂಲಕ ಕೃಷಿ ತಜ್ಞರು- ವಿಜ್ಞಾನಿಗಳಿಂದ ಪ್ರಾತ್ಯಕ್ಷಿಕೆ ಸಹಿತ ಮಾಹಿತಿ ಮಾರ್ಗದರ್ಶನ ನೀಡುತ್ತಿರುವ ಉಡುಪಿ ಜಿಲ್ಲಾ ಕೃಷಿಕ ಸಂಘವು ಆಯೋಜಿಸಿರುವ ಜಿಲ್ಲಾ ರೈತ ಸಮಾವೇಶ -೨೦೨೪, ಫೆ.೧೭ರಂದು ಬೆಳಗ್ಗೆ ೯.೩೦ರಿಂದ ಸಂಜೆ ೩ ಗಂಟೆಯವರೆಗೆ ನಗರದ ಕುಂಜಿಬೆಟ್ಟು ಶ್ರೀ ಶಾರದಾ ಮಂಟಪ ಆವರಣದಲ್ಲಿ ನಡೆಯಲಿದೆ.ಬ್ಯಾಂಕ್ ಆಫ್ ಬರೋಡಾ ಮಂಗಳೂರು ವಲಯ ಮುಖ್ಯಸ್ಥೆ ಗಾಯತ್ರಿ ಆರ್. ಉದ್ಘಾಟಿಸಲಿರುವ ಈ ಸಮಾವೇಶ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಕರ್ಣಾಟಕ ಬ್ಯಾಂಕ್ ಉಡುಪಿ ಪ್ರಾದೇಶಿಕ ಎ.ಜಿ.ಎಂ. ಬಿ. ರಾಜಗೋಪಾಲ್ ಭಾಗವಹಿಸಲಿದ್ದಾರೆ.
ಕೃಷಿ ವಿಚಾರ ತಾಂತ್ರಿಕ ಸಮಾವೇಶದಲ್ಲಿ ತೋಟಗಾರಿಕಾ ಬೆಳೆಗಳಲ್ಲಿ ಕೀಟ ರೋಗಗಳ ನಿಯಂತ್ರಣ ಬಗ್ಗೆ ಕಾಸರಗೋಡು ಸಿ.ಪಿ.ಸಿ.ಆರ್.ಐ ವಿಜ್ಞಾನಿ ಡಾ. ರವಿ ಭಟ್, ತೋಟಗಾರಿಕಾ ಬೆಳೆಗಳಲ್ಲಿ ಪೋಷಕಾಂಶಗಳ ನಿರ್ವಹಣೆ ಬಗ್ಗೆ ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರದ ಡಾ. ಎಚ್.ಎಸ್. ಚೈತನ್ಯ, ಉತ್ತಮ ಗೇರು ತಳಿಗಳು ಮತ್ತು ಬೆಳೆ ತಾಂತ್ರಿಕತೆ ಬಗ್ಗೆ ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಡಾ. ಲಕ್ಷ್ಮಣ್, ಮಲ್ಲಿಗೆ ಬೆಳೆಯ ನಿರ್ವಹಣಾ ತಾಂತ್ರಿಕತೆ ಬಗ್ಗೆ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಡಾ. ಧನಂಜಯ, ಹೈನುಗಾರಿಕೆಯಲ್ಲಿ ಮುಂಜಾಗೃತ ಕ್ರಮಗಳ ಬಗ್ಗೆ ಮಣಿಪಾಲದ ಮುಖ್ಯ ಪಶು ವೈದ್ಯಾಧಿಕಾರಿ ಡಾ. ಪ್ರಶಾಂತ ಶೆಟ್ಟಿ, ಕೃಷಿ ಪದವಿಯ ಅಗತ್ಯತೆ ಬಗ್ಗೆ ಬ್ರಹ್ಮಾವರ ಡಿಪ್ಲೋಮೋ ಕೃಷಿ ಮಹಾ ವಿದ್ಯಾಲಯದ ಡಾ. ಸುಧೀರ್ ಕಾಮತ್, ಕೃಷಿ ಇಲಾಖೆಯಿಂದ ಸಿಗುವ ಸರ್ಕಾರಿ ಸೌಲಭ್ಯಗಳ ಬಗ್ಗೆ ಉಡುಪಿಯ ಜಂಟಿ ಕೃಷಿ ನಿರ್ದೇಶಕಿ ಎಂ. ಸೀತಾ; ತೋಟಗಾರಿಕೆ ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಉಡುಪಿ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಭುವನೇಶ್ವರಿ ಮತ್ತು ವಿದ್ಯುತ್ ಗ್ರಾಹಕರಿಗೆ ಅಗತ್ಯ ಮಾಹಿತಿಗಳನ್ನು ಉಡುಪಿ ಮೆಸ್ಕಾಂ ಅಧೀಕ್ಷಕ ಎಂಜಿನಿಯರ್ ದಿನೇಶ್ ಉಪಾಧ್ಯ ಮಾಹಿತಿ ನೀಡಲಿದ್ದಾರೆ.ಕೃಷಿ ಮಾಹಿತಿ -ಮಾರ್ಗದರ್ಶನಗಳ ಜೊತೆಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಆಧುನಿಕ ಕೃಷಿ ಪರಿಕರಗಳು, ಹೊಸ ಆವಿಷ್ಕೃತ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು, ವಿವಿಧ ಬೆಳೆಗಳ ಸುಧಾರಿತ ತಂತ್ರಜ್ಞಾನದಿಂದ ಬೆಳೆಸಿದ ಗಿಡಗಳು, ಬೀಜ, ಕೃಷಿ ಸಂಬಂಧಿ ಪುಸ್ತಕ ಮಳಿಗೆಗಳು ಇರುತ್ತವೆ.