ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವ ಮೌಲ್ಯ ಬೆಳೆಸುವ ಶಾಲಾ ಸಂಸತ್ತು ಪ್ರಮುಖ ಪಾತ್ರ

| Published : Jul 11 2024, 01:32 AM IST

ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವ ಮೌಲ್ಯ ಬೆಳೆಸುವ ಶಾಲಾ ಸಂಸತ್ತು ಪ್ರಮುಖ ಪಾತ್ರ
Share this Article
  • FB
  • TW
  • Linkdin
  • Email

ಸಾರಾಂಶ

ಶಾಲಾ ಸಂಸತ್ತಿನ ಚಟುವಟಿಕೆಗಳಿಂದ ವಿದ್ಯಾರ್ಥಿಗಳಲ್ಲಿ ಪರಸ್ಪರ ಒಗ್ಗಟ್ಟು ಮತ್ತು ಸಹಕಾರ ಮನೋಭಾವ ಮೈಗೂಡುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರು

ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳನ್ನು ಬೆಳೆಸುವ ನಿಟ್ಟಿಲ್ಲಿ ಶಾಲಾ ಸಂಸತ್ತು ಪ್ರಮುಖ ಪಾತ್ರ ವಹಿಸುತ್ತದೆ. ಪ್ರಾಯೋಗಿಕ ಶಿಕ್ಷಣಾನುಭವ ಒದಗಿಸಿ ಕಲಿಕಾ ಪ್ರಕ್ರಿಯೆಯಲ್ಲಿ ಆಸಕ್ತಿ ಬೆಳೆಸುತ್ತದೆ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಟಿ. ಸತೀಶ್ ಜವರೇಗೌಡ ಹೇಳಿದರು.

ತಾಲೂಕಿನ ಮೆಲ್ಲಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಶಾಲಾ ಸಂಸತ್ತಿನ ನೂತನ ಸರ್ಕಾರದ ವಿದ್ಯಾರ್ಥಿ ಮಂತ್ರಿಗಳಾಗಿ ನಿಯೋಜಿತರಾದ ಮಕ್ಕಳಿಗೆ ಪ್ರಮಾಣ ವಚನದ ಪ್ರತಿಜ್ಞಾ ವಿಧಿ ಬೋಧಿಸಿ ಅವರು ಮಾತನಾಡಿದರು.

ಶಾಲಾ ಸಂಸತ್ತಿನ ಚಟುವಟಿಕೆಗಳಿಂದ ವಿದ್ಯಾರ್ಥಿಗಳಲ್ಲಿ ಪರಸ್ಪರ ಒಗ್ಗಟ್ಟು ಮತ್ತು ಸಹಕಾರ ಮನೋಭಾವ ಮೈಗೂಡುತ್ತದೆ. ಶಿಸ್ತಿನಿಂದ ಕಾರ್ಯ ಹಂಚಿಕೆ ಮಾಡಿಕೊಂಡು ಚೈತನ್ಯಶೀಲತೆಯಿಂದ ಮುನ್ನಡೆಯುವುದರಿಂದ ನಾಯಕತ್ವದ ಗುಣಗಳನ್ನು ಕಲಿಯುತ್ತಾರೆ ಎಂದರು.

ಮುಖ್ಯ ಶಿಕ್ಷಕಿ ಪಿ.ಎನ್. ವೀಣಾ ಮಾತನಾಡಿ, ವಿದ್ಯಾರ್ಥಿ ಮಂತ್ರಿಗಳು ತಮಗೆ ವಹಿಸಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವ ಮೂಲಕ ಶಾಲೆಯ ಆಡಳಿತ ಸುಗಮವಾಗಿ ನಡೆಯಲು ಸಹಕರಿಸಬೇಕು ಎಂದರು.

ಅತ್ಯಧಿಕ ಮತಗಳ ಪಡೆದ ಎಸ್. ಜಯಲಕ್ಷ್ಮಿ (ಮುಖ್ಯಮಂತ್ರಿ), ಜಿ. ಚಿನ್ಮಯ್ (ಉಪ ಮುಖ್ಯಮಂತ್ರಿ), ಆರ್. ಮನ್ವಿತ (ವಾರ್ತಾ), ಸಿ. ಶ್ರೀನಿವಾಸ (ನೀರಾವರಿ), ಎಸ್. ವಿಸ್ಮಯ (ಆರೋಗ್ಯ), ಎಸ್. ಪ್ರದೀಪ (ಗೃಹ), ಎಂ. ನಂದಿನಿ (ಸಂಸ್ಕೃತಿ), ಉದಯ ಕುಮಾರ್ (ತೋಟಗಾರಿಕಾ), ಎಲ್. ಶ್ರೇಯಸ್ (ಆಹಾರ), ಎಸ್. ಜಯಶ್ರೀ (ಕಾನೂನು), ಜೆ. ಪ್ರಜ್ವಲ್ (ಸ್ವಚ್ಛತಾ), ಎಸ್. ಮಹಾಲಕ್ಷ್ಮಿ (ಶಿಕ್ಷಣ), ಎಸ್. ಶಿವಪ್ರಸಾದ್ (ಕ್ರೀಡಾ), ಹೇಮಾವತಿ (ಗ್ರಂಥಾಲಯ) ಮಂತ್ರಿಗಳಾಗಿ ಪ್ರಮಾಣ ಸ್ವೀಕರಿಸಿದರು.

ಶಿಕ್ಷಕರಾದ ಸುನಿಲ್ ಕುಮಾರ್, ರಂಗಸ್ವಾಮಿ, ಶಿಕ್ಷಕಿಯರಾದ ಪಿ.ಎಲ್. ಭಾಗ್ಯ, ಕೆ. ಕಲ್ಪನ, ಸರಸ್ವತಿ, ಕೆ.ವಿ. ಪುಷ್ಪಲತಾ, ವಸಂತಲಕ್ಷ್ಮಿ, ಸುಜಾತ ಇದ್ದರು.