ವಾರದಿಂದ ಧಾರಾಕಾರ ಮಳೆ - ಅತಿವೃಷ್ಟಿಗೆ ನಡುಗಿದ ಜಿಲ್ಲೆ: ಬೆಳೆ, ರಸ್ತೆ ಜಲಾವೃತ- ಸಂಪರ್ಕ ಬಂದ್‌

| Published : Oct 22 2024, 01:17 AM IST / Updated: Oct 22 2024, 12:30 PM IST

mumbai rain news
ವಾರದಿಂದ ಧಾರಾಕಾರ ಮಳೆ - ಅತಿವೃಷ್ಟಿಗೆ ನಡುಗಿದ ಜಿಲ್ಲೆ: ಬೆಳೆ, ರಸ್ತೆ ಜಲಾವೃತ- ಸಂಪರ್ಕ ಬಂದ್‌
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದೊಂದು ವಾರದಿಂದ ನಗರ ಸೇರಿದಂತೆ ಜಿಲ್ಲಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಅನೇಕ ರಸ್ತೆಗಳು ಜಲಾವೃತವಾದರೆ, ಬೆಳೆಗಳು ಹಾಳಾಗುತ್ತಿದ್ದು, ಮನೆಗಳಿಗೆ ನೀರು ನುಗ್ಗುವುದು, ಅಲ್ಲಲ್ಲಿ ಮನೆಗಳು ಹಾನಿಗೀಡಾಗುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ.

ದಾವಣಗೆರೆ : ಕಳೆದೊಂದು ವಾರದಿಂದ ನಗರ ಸೇರಿದಂತೆ ಜಿಲ್ಲಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಅನೇಕ ರಸ್ತೆಗಳು ಜಲಾವೃತವಾದರೆ, ಬೆಳೆಗಳು ಹಾಳಾಗುತ್ತಿದ್ದು, ಮನೆಗಳಿಗೆ ನೀರು ನುಗ್ಗುವುದು, ಅಲ್ಲಲ್ಲಿ ಮನೆಗಳು ಹಾನಿಗೀಡಾಗುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ.

ಸತತ ಮಳೆಯಿಂದಾಗಿ ಜಿಲ್ಲೆಯಲ್ಲಿ 10 ಪಕ್ಕಾ ಮನೆಗಳು ತೀವ್ರ ಹಾನಿಗೀಡಾಗಿವೆ. 25 ಪಕ್ಕಾ ಮನೆಗಳು ಭಾಗಶಃ, 5 ಕಚ್ಚಾ ಮನೆಗಳು ತೀವ್ರ, 10 ಕಚ್ಚಾ ಮನೆಗಳು ಭಾಗಶಃ ಹಾನಿಗೀಡಾಗಿವೆ. ಸುಮಾರು ₹39.30 ಲಕ್ಷ ನಷ್ಟ ಸಂಭವಿಸಿದೆ.

ದಾವಣಗೆರೆಯಲ್ಲಿ 1 ಕಚ್ಚಾ ಮನೆ ತೀವ್ರ, 2 ಮನೆ ತೀವ್ರ ಹಾನಿಗೀಡಾಗಿವೆ. ಹರಿಹರದಲ್ಲಿ 1 ಪಕ್ಕಾ ಮನೆ ತೀವ್ರ, 1 ಪಕ್ಕಾ ಮನೆ ಭಾಗಶಃ, 1 ಕಚ್ಚಾ ಮನೆ ತೀವ್ರ, 3 ಕಚ್ಚಾ ಮನೆ ಭಾಗಶಃ ಹಾನಿಗೀಡಾಗಿವೆ. ಹೊನ್ನಾಳಿಯಲ್ಲಿ 11 ಪಕ್ಕಾ ಮನೆ ಭಾಗಶಃ ಹಾನಿಗೀಡಾಗಿವೆ.

ನ್ಯಾಮತಿಯಲ್ಲಿ 1 ಪಕ್ಕಾ ಮನೆ ತೀವ್ರ, 6 ಪಕ್ಕಾ ಮನೆ ಭಾಗಶಃ ಹಾನಿಗೊಳಗಾಗಿವೆ. ಚನ್ನಗಿರಿಯಲ್ಲಿ 8 ಪಕ್ಕಾ ಮನೆ ತೀವ್ರ, 7 ಪಕ್ಕಾ ಮನೆ ತೀವ್ರ ಹಾನಿಗೊಳಗಾಗಿವೆ. ಜಗಳೂರಿನಲ್ಲಿ 3 ಕಚ್ಚಾ ಮನೆ, 5 ಕಚ್ಚಾ ಮನೆ ಭಾಗಶಃ ಹಾನಿಗೊಳಗಾಗಿವೆ. ಮನೆ ಹಾನಿ ಸ್ಥಳಗಳಿಗೆ ತಹಸೀಲ್ದಾರರು, ಕಂದಾಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ಎಸ್‌ಡಿಆರ್‌ಎಫ್‌, ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಅನ್ವಯ ಪರಿಹಾರ ವಿತರಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.

ಚನ್ನಗಿರಿ ತಾಲೂಕಿನಲ್ಲಿ ಮಳೆಯಿಂದಾಗಿ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಹರನಹಳ್ಳಿ-ಕೆಂಗಾಪುರ ಗ್ರಾಮದ ಮಾರ್ಗದಲ್ಲಿ ಭಾರಿ ಮಳೆಯಾಗುತ್ತಿದೆ. ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹರಿದ್ರಾವತಿ ಹಳ್ಳಕ್ಕೆ ಅಪಾರ ನೀರು ಹರಿದುಬರುತ್ತಿದೆ. ಹಳ್ಳದ ನೀರು ರಸ್ತೆ ಮೇಲೆಲ್ಲಾ ಹರಿಯುತ್ತಿದ್ದು, ಕೆಂಗಾಪುರ-ಚನ್ನಗಿರಿ ಮುಖ್ಯ ರಸ್ತೆ ಸಂಪರ್ಕ ಕಡಿತಗೊಂಡಿದೆ. ಶಾಲಾ-ಕಾಲೇಜು ಮಕ್ಕಳು, ರೈತರು, ರೋಗಿಗಳು, ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.

ಪ್ರತಿ ಮಳೆಗಾಲದಲ್ಲೂ ಜೋರು ಮಳೆಯಾದಾಗ ಈ ಭಾಗದಲ್ಲಿ ಇದೇ ಪರಿಸ್ಥಿತಿ ಉಂಟಾಗುತ್ತದೆ. ಜೋರು ಮಳೆ ಆದಾಗಲೆಲ್ಲಾ ಹರಿದ್ರಾವತಿ ಹಳ್ಳದಿಂದ ರಸ್ತೆ ಸಂಪರ್ಕ ಕಡಿತವಾಗಿದೆ. ಜನರ ಪರದಾಟ ಮುಂದುವರಿದಿದೆ. ಗ್ರಾಮಸ್ಥರು, ಸ್ಥಳೀಯರು ಈ ಬಗ್ಗೆ ಹತ್ತಾರು ಮನವಿ ಮಾಡಿದರೂ ಹರಿದ್ರಾವತಿ ಹಳ್ಳದಿಂದ ಮಳೆಗಾಲದಲ್ಲಿ ಆಗುವ ಸಮಸ್ಯೆ ತಪ್ಪಿಸುವ ಕೆಲಸ ಆಗಿಲ್ಲ. ಹಳ್ಳದ ನೀರಿನಿಂದಾಗಿ ಸುತ್ತಮುತ್ತಲ ಜಮೀನುಗಳು ಜಲಾವೃತವಾಗಿವೆ. ಬತ್ತದ ಬೆಳೆ ಹಾಳಾಗುವ ಭೀತಿ ರೈತರನ್ನು ಕಾಡುತ್ತಿದೆ.

ಹೊನ್ನಾಳಿ ತಾಲೂಕು ಸಾಸ್ವೇಹಳ್ಳಿ ಭಾಗದಲ್ಲೂ ಮಳೆಯಿಂದಾಗಿ ತಗ್ಗುಪ್ರದೇಶದ ಮನೆಗಳಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಗ್ರಾಮದ ತಗ್ಗುಪ್ರದೇಶಗಳ ವಸತಿ ಪ್ರದೇಶಗಳಿಗೆ ಅಪಾರ ಪ್ರಮಾಣದಲ್ಲಿ ನೀರು ನುಗ್ಗಿದ್ದು, ಮನೆ ಮುಂದಿನ ರಸ್ತೆಗಳೆಲ್ಲಾ ಜಲಾವೃತವಾಗಿವೆ. 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದರಿಂದ ಮನೆ ಮಂದಿಗಳೆಲ್ಲಾ ಇಡೀ ರಾತ್ರಿಯಿಂದ ಸೋಮವಾರ ದಿನವಿಡೀ ಮಳೆ ನೀರು ಹೊರಗೆ ಚೆಲ್ಲುವಲ್ಲಿ ದಿನ ಕಳೆಯಬೇಕಾಯಿತು. ಹೊನ್ನಾಳಿ-ಸಾಸ್ವೇಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯೂ ಜಲಾವೃತವಾಗಿದೆ.

ಸಾಸ್ವೇಹಳ್ಳಿ ಪಕ್ಕದ ಜಮೀನುಗಳು ಜಲಾವೃತವಾಗಿದ್ದು, ಬತ್ತ, ಮೆಕ್ಕೇಜೋಳ ಇತರೆ ಬೆಳೆಗಳು ಮುಳುಗಡೆಯಾಗಿವೆ. ಬಿಡುವಿಲ್ಲದೇ ಸುರಿಯುತ್ತಿರುವ ಮಳೆಯು ಒಂದಲ್ಲ ಒಂದು ಅಪಾಯ, ಸಂಕಷ್ಟ, ಸಮಸ್ಯೆಗಳನ್ನು ತಂದೊಡ್ಡುತ್ತಿದೆ. ಅತಿವೃಷ್ಟಿಯಿಂದಾಗಿ ರೈತರು, ರೈತ ಕುಟುಂಬದವರು ಸಹ ತೀವ್ರ ಕಂಗಾಲಾಗಿದ್ದಾರೆ. ಕಟಾವಿಗೆ ಬಂದ ಮೆಕ್ಕೇಜೋಳ ಫಸಲನ್ನೇ ಕಳೆದುಕೊಳ್ಳುವ ಭೀತಿಗೆ ರೈತರು ಸಿಲುಕಿದ್ದಾರೆ.

ದಾವಣಗೆರೆ ಜಿಲ್ಲೆಯಲ್ಲಿ 3.4 ಮಿಮೀ ವಾಡಿಕೆ ಮಳೆಗೆ 43.9 ಮಿಮೀ ಮಳೆಯಾಗಿದೆ. ಚನ್ನಗಿರಿಯಲ್ಲಿ ವಾಡಿಕೆಯ 1.7 ಮಿಮೀಗೆ 50.1 ಮಿಮೀ ಮಳೆಯಾಗಿದೆ. ದಾವಣಗೆರೆಯಲ್ಲಿ 4.06 ಮಿ.ಮೀ.ಗೆ 43.1 ಮಿಮೀ, ಹರಿಹರ 4.06 ಮಿಮೀಗೆ 30.0 ಮಿಮೀ ಮಳೆಯಾಗಿದೆ. ಹೊನ್ನಾಳಿಯಲ್ಲಿ 4.4 ಮಿಮೀಗೆ 52.6 ಮಿಮೀ, ಜಗಳೂರಿನಲ್ಲಿ 1.7 ಮಿಮೀಗೆ 31.8 ಮಿಮೀ, ನ್ಯಾಮತಿಯಲ್ಲಿ 4.3 ಮಿಮೀಗೆ 63.4 ಮಿಮೀ ಮಳೆಯಾಗಿದೆ.

   ದಾವಣಗೆರೆ : ಸತತ ಮಳೆಯಿಂದಾಗಿ ಜಿಲ್ಲಾದ್ಯಂತ ನಗರ, ಗ್ರಾಮೀಣ ವಾಸಿಗಳು ತತ್ತರಿಸಿದ್ದು, ರೈತರಂತೂ ಕಟಾವಿಗೆ ಬಂದಿದ್ದ ಬೆಳೆಯನ್ನು ಕಳೆದುಕೊಳ್ಳುವ ಭೀತಿಗೆ ಸಿಲುಕಿದ್ದಾರೆ. ಹಗಲಿರುಳೆನ್ನದೇ ಸುರಿಯುತ್ತಿರುವ ಮಳೆಯಿಂದಾಗಿ ಇಡೀ ಜಿಲ್ಲೆ ಮಲೆನಾಡಿನಂತೆ ಭಾಸವಾಗುತ್ತಿದೆ. ಇದ್ದಕ್ಕಿದ್ದಂತೆ ಜೋರು, ತಕ್ಷಣ ನಿಲ್ಲುವುದು, ಮತ್ತೆ ಜೋರು ಮಳೆ ಸುರಿಯುವುದು ಸಾಮಾನ್ಯ ಎನ್ನುವಂತಾಗಿದೆ.

ವರುಣನ ಆರ್ಭಟದಿಂದಾಗಿ ಕೊಯ್ಲಿಗೆ ಬಂದಿದ್ದ ಬತ್ತ, ಮೆಕ್ಕೆಜೋಳ, ತರಕಾರಿ ಬೆಳೆಗಳು ಸಂಪೂರ್ಣ ನಾಶವಾಗುತ್ತಿವೆ. ನಾಲ್ಕೈದು ದಿನಗಳಲ್ಲಿ ಶುಕ್ರವಾರ ಮಾತ್ರ ಒಂದಿಷ್ಟು ವಿಶ್ರಾಂತಿ ಪಡೆದಿದ್ದ ವರುಣ, ನಂತರ ಮಳೆ ಸುರಿಸುತ್ತಿದ್ದಾನೆ. ದಸರಾ ರಜೆ ಮುಗಿಸಿಕೊಂಡು ಒಲ್ಲದ ಮನಸ್ಸಿನಿಂದಲೇ ಸೋಮವಾರದಿಂದ ಶಾಲೆಗೆ ಹೋಗಬೇಕಿದ್ದ ಮಕ್ಕಳ ಪೈಕಿ ಶಾಲೆಗೆ ಹೋದ ಮಕ್ಕಳು, ಶಿಕ್ಷಕರು ಮನೆಗೆ ಮರಳಲು ಜಿಲ್ಲೆಯ ವಿವಿಧೆಡೆ ಪರದಾಡಿದರು.

ಕಳೆದ ತಡರಾತ್ರಿ ಗುಡುಗು, ಮಿಂಚಿನ ಆರ್ಭಟದೊಂದಿಗೆ ಶುರುವಾದ ಮಳೆ ನಸುಕಿನವರೆಗೂ ಮುಂದುವರಿಯಿತು. ಸತತ ಮಳೆಯಿಂದ ಜಿಲ್ಲೆಯ ಬಹುತೇಕ ಕಡೆ ಕೆರೆ-ಕಟ್ಟೆಗಳು ಕೋಡಿ ಬಿದ್ದಿವೆ. ಹಳ್ಳಕೊಳ್ಳಗಳು ರಸ್ತೆ ಮೇಲೆಲ್ಲಾ ಹರಿದು, ಅನೇಕ ಗ್ರಾಮಗಳು, ಊರುಗಳಿಗೆ ಸಂಪರ್ಕ ಕಡಿತಗೊಳಿಸಿವೆ. ಇನ್ನೂ 3 ದಿನ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಸಿದೆ. ಅತಿವೃಷ್ಟಿ ಹೊಡೆತಕ್ಕೆ ಜನರು, ವಿಶೇಷವಾಗಿ ರೈತರು ಮತ್ತಷ್ಟು ಪರಿತಪಿಸುವಂತಹ ಸ್ಥಿತಿ ಬಂದೊದಗಿದೆ.

ದಾವಣಗೆರೆ ತಾಲೂಕಿನ ಮಾಯಕೊಂಡ, ಆನಗೋಡು ಹೋಬಳಿಗಳಲ್ಲಿ ಜೋರು ಮಳೆಯಾಗುತ್ತಿದೆ. ಹರಿಹರ ನಗರ, ತಾಲೂಕಿನಲ್ಲೂ ಗುಡುಗು, ಮಿಂಚು, ಸಿಡಿಲಿನ ಆರ್ಭಟದೊಂದಿಗೆ ಮಳೆಯಾಗುತ್ತಿದೆ. ಚನ್ನಗಿರಿ ತಾಲೂಕಿನ ಸಂತೇಬೆನ್ನೂರು, ಬಸವಾಪಟ್ಟಣ, ಹಿರೇಕೋಗಲೂರು ಭಾಗದಲ್ಲೂ ಎಡೆಬಿಡದೆ ಮಳೆಯಾಗುತ್ತಿದೆ. ಹಿರೇಕೋಗಲೂರು ಕೆರೆಗೆ ಅಪಾರ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ದಾವಣಗೆರೆ ತಾಲೂಕಿನ ಎಚ್‌.ರಾಪುರ ಕೆರೆ-ಕಟ್ಟೆಗಳು ಕೋಡಿ ಬಿದ್ದಿವೆ. ನ್ಯಾಮತಿ ತಾಲೂಕಿನಲ್ಲಿಯೂ ಮಳೆಯ ಆರ್ಭಟ ಜೋರಾಗಿದೆ.

ಇನ್ನು ದಾವಣಗೆರೆ ತಾಲೂಕಿನ ಜರೀಕಟ್ಟೆ ಗ್ರಾಮದಲ್ಲಿ ರೈತ ಬುದ್ಧಿವಂತಪ್ಪ, ಈರಪ್ಪ ಎಂಬವರಿಗೆ ಸೇರಿದ 8 ಎಕರೆ ಬತ್ತದ ಗದ್ದೆಯಲ್ಲಿ ಕಟಾವಿಗೆ ಬಂದಿದ್ದ ಬತ್ತದ ಬೆಳೆ ಮಳೆ, ಗಾಳಿ ಹೊಡೆತಕ್ಕೆ ನೆಲಕಚ್ಚಿದೆ. ಇನ್ನು 10-15 ದಿನಗಳಲ್ಲಿ ಬತ್ತ ಕೊಯ್ಲಿಗೆ ಮುಂದಾಗಿದ್ದ ಬುದ್ಧಿವಂತಪ್ಪ, ಈರಪ್ಪ ಈಗ ಮಳೆ ಕೈಸೇರುವ ಮುನ್ನವೇ ಮಣ್ಣು ಪಾಲಾಗುವ ಸ್ಥಿತಿ ಕಂಡು ಕಣ್ಣೀರು ಹಾಕುತ್ತಿದ್ದಾರೆ. ಮಳೆ ತಕ್ಷಣ ನಿಂತರೆ ನಮ್ಮಂತಹ ರೈತರು ಬದುಕುತ್ತೇವೆಂದು ಹೇಳುವಾಗ ರೈತರ ಮೊಗದಲ್ಲಿ ಆತಂಕ ಹೆಪ್ಪುಗಟ್ಟಿತ್ತು.

ಮಳೆಯಿಂದಾಗಿ ಸುಮಾರು ₹3 ಲಕ್ಷವರೆಗೆ ನಷ್ಟ ಅನುಭವಿಸಿರುವ ರೈತರು ದಿಕ್ಕೇ ತೋಚದಂತಾಗಿದ್ದಾರೆ. ಕಳೆದ ವರ್ಷ ಅನಾವೃಷ್ಟಿಯಿಂದಾಗಿ ಬತ್ತದ ಬೆಳೆ ಕೈ ಕೊಟ್ಟಿತ್ತು. ಈ ಸಲ ಅತಿವೃಷ್ಟಿ ಬಂದ ಬೆಳೆಯನ್ನೇ ಆಪೋಷನ ತೆಗೆದುಕೊಳ್ಳುವ ಆತಂಕ ತಂದೊಡ್ಡಿದೆ. ಈ ಹಿನ್ನೆಲೆ ಜಿಲ್ಲಾಡಳಿತ, ಸರ್ಕಾರಗಳು ರೈತರ ನೆರವಿಗೆ ಧಾವಿಸಬೇಕು ಎಂದು ರೈತ ಬುದ್ಧಿವಂತಪ್ಪ ಮನವಿ ಮಾಡುತ್ತಾರೆ. ಇದೇ ಪರಿಸ್ಥಿತಿ ಜಿಲ್ಲೆಯ ಬಹುತೇಕ ಕಡೆ ರೈತರು ಅನುಭವಿಸುತ್ತಿದ್ದಾರೆ.

ಇನ್ನು ದಾವಣಗೆರೆ, ಹರಿಹರ ನಗರ ಪ್ರದೇಶದಲ್ಲೂ ಜನರ ಬವಣೆ ತಪ್ಪಿಲ್ಲ. ನಗರದ ತಗ್ಗು ಪ್ರದೇಶಕ್ಕೆ, ಮನೆಗಳಿಗೆ ರಾತ್ರೋರಾತ್ರಿ ಜೋರು ಮಳೆಯಿಂದಾಗಿ ನೀರು ಹರಿದುಬರುತ್ತಿದೆ. ಹಗಲು, ರಾತ್ರಿ ಎನ್ನದೇ ಮಳೆನೀರು ನುಗ್ಗುತ್ತಿದೆ. ಇಡೀ ರಾತ್ರಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಚರಂಡಿಗಳು ತುಂಬಿ ಮನೆಯೊಳಗೆ ನೀರು ಬರುತ್ತಿದೆ. ಜನರು ನೀರು ಹೊರಹಾಕುತ್ತಲೇ ಮನೆ ಮಂದಿಯೆಲ್ಲಾ ಜಾಗರಣೆ ಮಾಡಬೇಕಾಯಿತು. ಕಳೆದ ರಾತ್ರಿ ಸುರಿದ ಮಳೆ ತಂದಿಟ್ಟ ಅವಾಂತರ ಸೋಮವಾರ ರಾತ್ರಿಯಿಂದ ಮತ್ತೇನೇನು ಸಂಕಷ್ಟ ತಂದೊಡ್ಡುತ್ತದೋ ಎಂಬ ಭಯ ಜಿಲ್ಲೆ ಜನರನ್ನು ಕಾಡುತ್ತಿದೆ.