ಗೃಹ ಜ್ಯೋತಿ ಯೋಜನೆಯಲ್ಲಿ ಜಿಲ್ಲೆಯಲ್ಲಿ ಶೇ.98.81 ರಷ್ಟು ಪ್ರಗತಿ

| Published : Jan 27 2024, 01:16 AM IST

ಗೃಹ ಜ್ಯೋತಿ ಯೋಜನೆಯಲ್ಲಿ ಜಿಲ್ಲೆಯಲ್ಲಿ ಶೇ.98.81 ರಷ್ಟು ಪ್ರಗತಿ
Share this Article
  • FB
  • TW
  • Linkdin
  • Email

ಸಾರಾಂಶ

ಶಕ್ತಿ ಯೋಜನೆಯ ಸೌಲಭ್ಯವನ್ನು ಪ್ರತಿನಿತ್ಯ ಮೈಸೂರು ಜಿಲ್ಲೆಯಲ್ಲಿ ಸರಾಸರಿ 3.59 ಲಕ್ಷ ಮಹಿಳೆಯರು ಪ್ರಯಾಣಿಸುತ್ತಿದ್ದಾರೆ ಹಾಗೂ ಮಹಿಳಾ ಪ್ರಯಾಣಿಕರ ಪ್ರತಿ ನಿತ್ಯದ ಸಾರಿಗೆ ಆದಾಯ 80 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಯೋಜನೆಯಡಿ ರಾಜ್ಯದೊಳಗಿನ ಪ್ರಯಾಣಕ್ಕೆ ಮಾತ್ರ ಅನ್ವಯ. ಅಂತರ ರಾಜ್ಯ ಪ್ರಯಾಣಕ್ಕೆ ಅವಕಾಶವಿಲ್ಲ. ಆದಾಗ್ಯೂ ಅಂತರ ರಾಜ್ಯ ಮಾರ್ಗಗಳಲ್ಲಿ ಆಚರಣೆ ಆಗುತ್ತಿರುವ ಸಾರಿಗೆಗಳಲ್ಲಿ ಮೈಸೂರು ಜಿಲ್ಲೆಯಲ್ಲಿ ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣ ಸೌಲಭ್ಯ ಒದಗಿಸಲಾಗಿದೆ

ಕನ್ನಡಪ್ರಭ ವಾರ್ತೆ ಮೈಸೂರು

ಗೃಹ ಜ್ಯೋತಿ ಯೋಜನೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ಶೇ.98.81 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು.

ನಗರದ ಬನ್ನಿಮಂಟಪ ಪಂಜಿನ ಕವಾಯತು ಮೈದಾನದಲ್ಲಿ ಜಿಲ್ಲಾಡಳಿತವು ಶುಕ್ರವಾರ ಆಯೋಜಿಸಿದ್ದ 75ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಗೃಹ ಜ್ಯೋತಿ ಯೋಜನೆಯಲ್ಲಿ ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 9,83,026 ಗ್ರಾಹಕರಿದ್ದು, 9,00,724 ಗ್ರಾಹಕರು ಈ ಯೋಜನೆಗೆ ಅರ್ಹರಾಗಿರುತ್ತಾರೆ. ಈ ಪೈಕಿ 8,89,986 ಗ್ರಾಹಕರು ಈಗಾಗಲೇ ನೋಂದಣಿಯಾಗಿ ಯೋಜನೆಯ ಫಲಾನುಭವಿಗಳಾಗಿದ್ದು, ಶೇ.98.81 ರಷ್ಟು ಪ್ರಗತಿಯನ್ನು ಸಾಧಿಸಲಾಗಿದೆ. ಉಳಿದ ಗ್ರಾಹಕರನ್ನು ಯೋಜನೆಗೆ ನೋಂದಣಿ ಮಾಡಲು ಎಲ್ಲಾ ಕ್ರಮ ಕೈಗೊಳ್ಳಲಾಗಿದ್ದು ಮುಂದಿನ ದಿನಗಳಲ್ಲಿ ಶೇ.100 ಪ್ರಗತಿಯನ್ನು ಸಾಧಿಸಲಾಗುವುದು ಎಂದರು.

ಶಕ್ತಿ ಯೋಜನೆಯ ಸೌಲಭ್ಯವನ್ನು ಪ್ರತಿನಿತ್ಯ ಮೈಸೂರು ಜಿಲ್ಲೆಯಲ್ಲಿ ಸರಾಸರಿ 3.59 ಲಕ್ಷ ಮಹಿಳೆಯರು ಪ್ರಯಾಣಿಸುತ್ತಿದ್ದಾರೆ ಹಾಗೂ ಮಹಿಳಾ ಪ್ರಯಾಣಿಕರ ಪ್ರತಿ ನಿತ್ಯದ ಸಾರಿಗೆ ಆದಾಯ 80 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಯೋಜನೆಯಡಿ ರಾಜ್ಯದೊಳಗಿನ ಪ್ರಯಾಣಕ್ಕೆ ಮಾತ್ರ ಅನ್ವಯ. ಅಂತರ ರಾಜ್ಯ ಪ್ರಯಾಣಕ್ಕೆ ಅವಕಾಶವಿಲ್ಲ. ಆದಾಗ್ಯೂ ಅಂತರ ರಾಜ್ಯ ಮಾರ್ಗಗಳಲ್ಲಿ ಆಚರಣೆ ಆಗುತ್ತಿರುವ ಸಾರಿಗೆಗಳಲ್ಲಿ ಮೈಸೂರು ಜಿಲ್ಲೆಯಲ್ಲಿ ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣ ಸೌಲಭ್ಯ ಒದಗಿಸಲಾಗಿದೆ ಎಂದು ಅವರು ಹೇಳಿದರು.

ಜ.15 ರವರೆಗೆ ಕೆಎಸ್ಆರ್ ಟಿಸಿ ಮೈಸೂರು ವಿಭಾಗದ ಶಕ್ತಿ ಯೋಜನೆಯಡಿ ಮಹಿಳಾ ಪ್ರಯಾಣಿಕರು ಶೇ.65 ರಷ್ಟು ಪ್ರಯಾಣಿಸಿದ್ದು, ಒಟ್ಟು ಮಹಿಳಾ ಪ್ರಯಾಣಿಕರ ಸಂಖ್ಯೆ 7.68 ಕೋಟಿ ಆಗಿದ್ದು, ಸರಾಸರಿ 3.59 ಲಕ್ಷ ಮಹಿಳೆಯರು ಪ್ರತಿದಿನ ಪ್ರಯಾಣಿಸುತ್ತಿದ್ದಾರೆ ಎಂದರು.

ಅಂಬೇಡ್ಕರ್ ಭವನ ಪೂರ್ಣಗೊಳಿಸಲು 19 ಕೋಟಿ

ನಗರದ ದೇವರಾಜ ಪೊಲೀಸ್ ಠಾಣೆ ಪಕ್ಕದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭವನದ ಸಿವಿಲ್ ಕಾಮಗಾರಿಯನ್ನು 20.66 ಕೋಟಿಗಳಲ್ಲಿ ಕೈಗೊಂಡಿದ್ದು, ಬಾಕಿ ಉಳಿಕೆ ಕಾಮಗಾರಿಗಳು ಹಲವು ವರ್ಷಗಳಿಂದ ಕುಂಠಿತಗೊಂಡಿದೆ. ಹೀಗಾಗಿ, ಭವನದ ಕಾಮಗಾರಿಯನ್ನು 19 ಕೋಟಿ ರು. ವೆಚ್ಚದಲ್ಲಿ ಪೂರ್ಣಗೊಳಿಸಲು ಸಚಿವ ಸಂಪುಟ ಅನುಮೋದನೆ ದೊರತಿದ್ದು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಕಾಮಗಾರಿಯನ್ನು ಶೀಘ್ರವಾಗಿ ಆರಂಭಿಸಲು ಕ್ರಮ ವಹಿಸಲಾಗಿದೆ ಎಂದು ಅವರು ತಿಳಿಸಿದರು.

ಮೈಸೂರಿನ ಕೆ.ಆರ್.ಎಸ್. ರಸ್ತೆ ಬೃಂದಾವನ ಬಡಾವಣೆಯಲ್ಲಿರುವ ಶ್ರೀ ಗುರುಸಿಂಗ್ ಸಭಾ ಗುರುದ್ವಾರದ ಅಭಿವೃದ್ಧಿಗಾಗಿ 1 ಕೋಟಿ ರೂ. ಮಂಜೂರಾಗಿದ್ದು. ಪ್ರಸ್ತುತ ಸಾಲಿನಲ್ಲಿ 50 ಲಕ್ಷ ರು. ಬಿಡುಗಡೆಯಾಗಿದೆ. ಸ್ಥಗಿತಗೊಂಡಿರುವ ಶಾದಿಮಹಲ್ ಮತ್ತು ಸಮುದಾಯ ಭವನದ ಕಾಮಗಾರಿ ಪೂರ್ಣಗೊಳಿಸಲು ಮೈಸೂರಿನ ಮಸ್ಕೋ ಸಂಸ್ಥೆಗೆ 2 ಕೋಟಿ ರೂ. ಬಿಡುಗಡೆಯಾಗಿದೆ ಎಂದರು.

ಜಿಲ್ಲೆಯಲ್ಲಿ ಚರ್ಮಗಂಟು ರೋಗದಿಂದ ಮರಣ ಹೊಂದಿದ ಜಾನುವಾರುಗಳಿಗೆ ಪರಿಹಾರ ಧನ ವಿತರಣೆಗಾಗಿ ಬಾಕಿ ಉಳಿದ 124 ಜಾನುವಾರುಗಳ ಮಾಲೀಕರಿಗೆ 26.25 ಲಕ್ಷ ಪರಿಹಾರ ಧನವನ್ನು ವಿತರಿಸಲಾಗಿದೆ. ರಾಸುಗಳು ಆಕಸ್ಮಿಕ ಮರಣ ಹೊಂದಿದಾಗ ರೈತರಿಗೆ ಉಂಟಾಗುವ ಆರ್ಥಿಕ ನಷ್ಟವನ್ನು ಭರಿಸಲು 347 ಫಲಾನುಭವಿಗಳಿಗೆ 34.70 ಲಕ್ಷ ಅನುದಾನ ವಿತರಿಸಲಾಗಿದೆ ಎಂದು ಅವರು ಹೇಳಿದರು.

ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಯಾವುದೇ ರಸಗೊಬ್ಬರದ ಕೊರತೆಯಾಗದಂತೆ ಕ್ರಮ ವಹಿಸಲಾಗಿದೆ. ಮೈಸೂರು ಜಿಲ್ಲೆಯನ್ನು ಈ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು 1 ರಿಂದ 5ನೇ ಸ್ಥಾನದೊಳಗೆ ತರಲು ಶ್ರಮಿಸಲಾಗುತ್ತಿದೆ ಎಂದು ಅವರು ತಿಳಿಸಿದರು.