ಸಾರಾಂಶ
ಸಿದ್ದಾಪುರದ ಕರಡಿಗೋಡುವಿಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್. ಎಸ್. ಭೋಸರಾಜು ಭೇಟಿ ನೀಡಿಪರಿಶೀಲನೆ ನಡೆಸಿದರು. ಹೊಳೆ ಕರೆ ನಿವಾಸಿಗಳ ಸಮಸ್ಯೆ ಆಲಿಸಿದರು. ಈ ಸಂದರ್ಭ ಶಾಸಕ ಎ.ಎಸ್. ಪೊನ್ನಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಸಿದ್ದಾಪುರ
ಕಳೆದ ಒಂದು ವಾರದಿಂದ ಎಡಬಿಡದೆ ಸುರಿದ ಮಳೆಗೆ ಪ್ರವಾಹ ಭೀತಿ ಎದುರಿಸಿದ್ದ ಸಿದ್ದಾಪುರದ ಕರಡಿಗೋಡುವಿಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್. ಎಸ್. ಭೋಸರಾಜು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ. ಎಸ್. ಪೊನ್ನಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿ ಹೊಳೆ ಕರೆ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದರು.ಕರಡಿಗೋಡು ಹೊಳೆ ಕರೆ ಭಾಗದಲ್ಲಿ ಸುಮಾರು 70 ಕ್ಕೂ ಅಧಿಕ ಕುಟುಂಬಗಳು ವಾಸ ಮಾಡಿಕೊಂಡಿದ್ದು ಪ್ರತಿ ವರ್ಷ ಪ್ರವಾಹದ ಭೀತಿ ಎದುರಿಸುತ್ತಿರುವುದಾಗಿ ಕರಡಿಗೋಡು ನದಿ ದಡ ಸಂತ್ರಸ್ತರು ಸಚಿವರ ಗಮನಕ್ಕೆ ತಂದರು ಹಾಗೂ ವಸತಿ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಿದರು. ನಂತರ ಸಚಿವರು ಸಿದ್ದಾಪುರದ ಸ್ವರ್ಣಮಾಲಾ ಕಲ್ಯಾಣ ಮಂಟಪದಲ್ಲಿ ಸ್ಥಾಪಿಸಿರುವ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಕಾಳಜಿ ಕೇಂದ್ರದಲ್ಲಿರುವ ವ್ಯವಸ್ಥೆಯ ಬಗ್ಗೆ ಪರಿಶೀಲಿಸಿ ಕಾಳಜಿ ಕೇಂದ್ರದಲ್ಲಿರುವ ಸಂತ್ರಸ್ತರಿಗೆ ಧೈರ್ಯ ತುಂಬಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಈಗಾಗಲೇ ಈ ಭಾಗದ ನಿವಾಸಿಗಳು ಸ್ಥಳಾಂತರಕ್ಕೆ ಸಮ್ಮತಿಸಿದ್ದು ಮಾಲ್ದಾರೆ ವ್ಯಾಪ್ತಿಯಲ್ಲಿ ಸಂತ್ರಸ್ತರಿಗೆ ನಿವೇಶನ ನೀಡಲು 10 ಎಕರೆ ಜಾಗ ಗುರುತಿಸಿದ್ದು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸದ್ಯದಲ್ಲೇ ನಿವೇಶನ ಹಂಚಿಕೆ ಮಾಡಲು ಶ್ರಮಿಸುವುದಾಗಿ ತಿಳಿಸಿದರು.ಈ ಭೇಟಿ ಸಂದರ್ಭ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ತಹಸೀಲ್ದಾರ್ ರಾಮಚಂದ್ರ ಸೇರಿದಂತೆ ಕಂದಾಯ ಅಧಿಕಾರಿಗಳು , ಗ್ರಾ.ಪಂ. ಆಡಳಿತ ಮಂಡಳಿ ಪಿಡಿಓ, ಗ್ರಾಮಸ್ಥರು ಇದ್ದರು.