ಕೃಷಿಯಲ್ಲಿ ಕರ್ನಾಟಕ ಮಾದರಿಗೆ ಹಕ್ಕೊತ್ತಾಯಗಳನ್ನು ಮುಖ್ಯಮಂತ್ರಿಗೆ ರೈತ ಸಂಘ ಸಲ್ಲಿಕೆ

| Published : Feb 13 2024, 12:48 AM IST / Updated: Feb 13 2024, 04:24 PM IST

ಕೃಷಿಯಲ್ಲಿ ಕರ್ನಾಟಕ ಮಾದರಿಗೆ ಹಕ್ಕೊತ್ತಾಯಗಳನ್ನು ಮುಖ್ಯಮಂತ್ರಿಗೆ ರೈತ ಸಂಘ ಸಲ್ಲಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ನಿರೀಕ್ಷೆ ನೂರೆಂಟು ಇರಬಹುದು, ಆದರೆ ರಾಜ್ಯ ಸರ್ಕಾರ ತನ್ನ ಆರ್ಥಿಕ ಇತಿಮಿತಿಯೊಳಗೆ ಕೃಷಿ ಕ್ಷೇತ್ರಕ್ಕೆ ಏನೇನು ಮಾಡಬಹುದು ಎಂಬ ಸಲಹೆ ಇದೆ. ಜೊತೆಗೆ ಬರಮುಕ್ತ ಕರ್ನಾಟಕವಾಗಿಸಲು ಏನು ಮಾಡಬೇಕೆಂದು ವಿವರಿಸಲಾಗಿದೆ

ಕನ್ನಡಪ್ರಭ ವಾರ್ತೆ ಮೈಸೂರು

ಈ ಬಾರಿಯ ರಾಜ್ಯ ಬಜೆಟ್ ರೈತ ಪರವಾಗಿರಬೇಕೆಂಬ ನಿಟ್ಟಿನಲ್ಲಿ ಕೃಷಿಯಲ್ಲಿ ಕರ್ನಾಟಕ ಮಾದರಿಗೆ ರೈತ ಸಮುದಾಯದ ಹಕ್ಕೊತ್ತಾಯಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹಕ್ಕೊತ್ತಾಯದ ಕಿರು ಹೊತ್ತಿಗೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರದ 10 ವರ್ಷಗಳ ಕೃಷಿ ನೀತಿ ಹೇಗಿರಬೇಕು ಎಂಬ ಪರಿಕಲ್ಪನೆಯೊಡನೆ ಅಲ್ಪಕಾಲೀನ ಹಾಗೂ ದೀರ್ಘಕಾಲೀನ ಹಕ್ಕೊತ್ತಾಯಗಳು ಇವಾಗಿವೆ ಎಂದರು.

ನಮ್ಮ ನಿರೀಕ್ಷೆ ನೂರೆಂಟು ಇರಬಹುದು, ಆದರೆ ರಾಜ್ಯ ಸರ್ಕಾರ ತನ್ನ ಆರ್ಥಿಕ ಇತಿಮಿತಿಯೊಳಗೆ ಕೃಷಿ ಕ್ಷೇತ್ರಕ್ಕೆ ಏನೇನು ಮಾಡಬಹುದು ಎಂಬ ಸಲಹೆ ಇದೆ. ಜೊತೆಗೆ ಬರಮುಕ್ತ ಕರ್ನಾಟಕವಾಗಿಸಲು ಏನು ಮಾಡಬೇಕೆಂದು ವಿವರಿಸಲಾಗಿದೆ ಎಂದು ಅವರು ಹೇಳಿದರು.

ಕೃಷಿ ವ್ಯವಸ್ಥೆ ದಿಕ್ಕು ತಪ್ಪಿರುವುದರಿಂದಾಗಿ ರೈತ ಸಮುದಾಯದ ಮೇಲೆ ಹಲವಾರು ಪರಿಣಾಮವುಂಟಾಗುತ್ತಿವೆ. ರೈತರ ಆತ್ಮಹತ್ಯೆ ಹೆಚ್ಚುತ್ತಿದೆ. ಖಿನ್ನತೆ ಕಾಡುತ್ತಿದೆ. ರೈತರು ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ. ಹೀಗಾಗಿ, ಕೃಷಿ ಲಾಭದಾಯಕವಾಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಕೃಷಿ ಪಂಪ್ ಸೆಟ್ ವಿದ್ಯುತ್ ಸಂಪರ್ಕ ಉಚಿತವಾಗಿರಬೇಕು, ತೋಟದ ಮನೆಯಲ್ಲಿ ಇರುವವರಿಗೆ ಗೃಹ ಬಳಕೆಯ ಅಗತ್ಯವಿರುವಷ್ಟು ವಿದ್ಯುತ್ ಪೂರೈಸಬೇಕು. ಸಣ್ಣ ಕಾಫಿ ಬೆಳೆಗಾರರಿಗೆ ವಿದ್ಯುತ್ ಸಬ್ಸಿಡಿ ಇರಬೇಕು. ಹದ್ದುಬಸ್ತು, ಪೋಡಿ ದುಸ್ತಿ, ಸ್ಕೆಚ್, ಹೌಸಿಂಗ್ ಇ- ಸ್ವತ್ತು ದರ ಮೊದಲಿನಷ್ಟೇ ಇರಬೇಕು. 

ಬರ ಇರುವ ಕಾರಣದಿಂದ ರೈತರಿಂದ ಬಲವಂತವಾಗಿ ಸಾಲ ವಸೂಲಾತಿ ಮಾಡುವುದನ್ನು ನಿಲ್ಲಿಸಬೇಕು. 2018ರಲ್ಲಿ ಘೋಷಿಸಿದ ಸಾಲ ಮನ್ನಾ ಪ್ರಯೋಜನ ಎಲ್ಲಾ ರೈತರಿಗೂ ಸಿಗುವಂತೆ ನೋಡಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಬಿಸಿಯೂಟ, ಅಂಗನವಾಡಿ, ಹಾಸ್ಟೆಲ್, ಜೈಲು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೊದಲಾದವಕ್ಕೆ ಎಲ್ಲಾ ಬಗೆಯ ಕೃಷಿ ಉತ್ಪನ್ನಗಳು ಮತ್ತು ಸಂಸ್ಕರಿತ ಆಹಾರ ಪದಾರ್ಥಗಳನ್ನು ಕಡ್ಡಾಯವಾಗಿ ರೈತ ಸಹಕಾರಿಗಳು, ನೋಂದಾಯಿತ ಸ್ವಸಹಾಯ ಸಂಘಗಳು, ಎಫ್‌ಟಿಒ ಮೂಲಕವೇ ಖರೀದಿಸುವ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಮುಖಂಡರಾದ ಪ್ರಸನ್ನ ಎನ್. ಗೌಡ, ನಾಗನಹಳ್ಳಿ ವಿಜೇಂದ್ರ, ಮಂಡಕಳ್ಳಿ ಮಹೇಶ್, ಪಿ. ಮರಂಕಯ್ಯ ಇದ್ದರು.