ಸಾರಾಂಶ
ಸ್ವಚ್ಛತೆಗೆ ಆದ್ಯತೆ ನೀಡಿ ಹಾಗೂ ಇನ್ನುಮುಂದೆ ಇಲ್ಲಿ ಸಮಸ್ಯೆ ಉದ್ಭವಿಸದಂತೆ ನೋಡಿಕೊಳ್ಳಿ ಎಂದು ಅಡುಗೆ ಸಿಬ್ಬಂದಿ ವರ್ಗಕ್ಕೆ ನ್ಯಾಯಾಧೀಶರು ಸಲಹೆ,
ಹೊನ್ನಾವರ:
ತಾಲೂಕಿನ ಪುರಾಣ ಪ್ರಸಿದ್ಧ ಶ್ರೀ ಇಡಗುಂಜಿ ದೇವಾಲಯದ ಭೋಜನ ಶಾಲೆಯಲ್ಲಿ ಪಂಕ್ತಿಭೇದ ವಿಚಾರ ಮುನ್ನೆಲೆಗೆ ಬಂದಿದ್ದರಿಂದ ದೇವಾಲಯದ ರಿಸಿವರ್ ಹಾಗೂ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಧೀಶ ಡಿ.ಎಸ್. ವಿಜಯಕುಮಾರ ಗುರುವಾರ ಭೇಟಿ ಅಲ್ಲಿನ ಪರಿಸ್ಥಿತಿ ಅವಲೋಕಿಸಿದರು.ಅಡುಗೆ ಸಿಬ್ಬಂದಿಗಳೊಂದಿಗೆ ಮಾತನಾಡಿ ಘಟನೆ ಕುರಿತು ವಿವರ ಪಡೆದರು. ಇಲ್ಲಿ ಪಂಕ್ತಿಭೇದ ನಡೆದಿಲ್ಲ, ಅಡುಗೆ ಮಾಡುವ ಯಂತ್ರ ಪರಿಕರಗಳು ದುರುಸ್ಥಿಯಲ್ಲಿದೆ. ಇದರಿಂದ ಸಮಸ್ಯೆ ಉದ್ಭವಿಸಿದೆ. ಪ್ರವಾಸಿಗರು ಸಮಯ ಇದಾಗಿದೆ. ಏಕಕಾಲಕ್ಕೆ ಇಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು, ಭಕ್ತರು ಆಗಮಿಸುತ್ತಿದ್ದರಿಂದ ಊಟಕ್ಕೆ ತಯಾರಿ ಮಾಡಲು ಕಷ್ಟಕರವಾಗಿದೆ. ಹೀಗಾಗಿ ಭಕ್ತರಿಗೆ ಊಟ ನೀಡುವಲ್ಲಿ ಸಮಯ ವ್ಯತ್ಯಾಸವಾಯಿತು ಎಂದು ನ್ಯಾಯಾಧೀಶರಲ್ಲಿ ಅಲ್ಲಿನ ಸಮಸ್ಯೆ ಬಗ್ಗೆ ಹೇಳಿಕೊಂಡರು.ಸ್ವಚ್ಛತೆಗೆ ಆದ್ಯತೆ ನೀಡಿ ಹಾಗೂ ಇನ್ನುಮುಂದೆ ಇಲ್ಲಿ ಸಮಸ್ಯೆ ಉದ್ಭವಿಸದಂತೆ ನೋಡಿಕೊಳ್ಳಿ ಎಂದು ಅಡುಗೆ ಸಿಬ್ಬಂದಿ ವರ್ಗಕ್ಕೆ ನ್ಯಾಯಾಧೀಶರು ಸಲಹೆ, ಸೂಚನೆ ನೀಡಿದರು. ನಂತರ ದೇವಾಲಯಕ್ಕೆ ಭೇಟಿ ಶ್ರೀ ಮಹಾಗಣಪತಿ ದೇವರ ದರ್ಶನ ಪಡೆದು, ಅಲ್ಲಿನ ಕಚೇರಿ ಸಿಬ್ಬಂದಿಗಳೊಂದಿಗೆ ದೇವಸ್ಥಾನದ ವಿಚಾರವಾಗಿ ಕೆಲಕಾಲ ಮಾತನಾಡಿದರು.ಘಟನೆ ಹಿನ್ನೆಲೆ:ಶ್ರೀ ಇಡಗುಂಜಿ ಮಹಾಗಣಪತಿ ದೇವಸ್ಥಾನದಲ್ಲಿ ಅನ್ನದಾನ ನಡೆಯುವ ವೇಳೆ ಭಕ್ತರು ಹಾಗೂ ದಾಸೋಹ ಸಿಬ್ಬಂದಿ ನಡುವೆ ಪಂಕ್ತಿ ವಿಚಾರವಾಗಿ ಮಾತಿಗೆ ಮಾತು ಬೆಳೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ದೇವಸ್ಥಾನದಲ್ಲಿ ಈ ಹಿಂದಿನಿಂದಲ್ಲೂ ಪ್ರತಿನಿತ್ಯ ಅನ್ನದಾಸೋಹ ನಡೆದುಕೊಂಡು ಬಂದಿದೆ. ಭಕ್ತರೊಬ್ಬರು ದೇವಸ್ಥಾನದ ಭೋಜನಶಾಲೆಗೆ ಹೋಗಿದ್ದ ವೇಳೆ ಅನ್ನದಾಸೋಹದಲ್ಲಿ ಪಂಕ್ತಿ ಬೇಧ ಮಾಡಿದ ಆರೋಪ ಕೇಳಿಬಂದಿತ್ತು.