ದೇಶದ ಕೃಷಿ, ರಕ್ಷಣಾ ಕ್ಷೇತ್ರದ ಬಲವರ್ಧನೆ ಅನಿವಾರ್ಯ

| Published : May 11 2025, 01:20 AM IST

ಸಾರಾಂಶ

ಭಾರತದ ಬಲಿಷ್ಟತೆಯನ್ನ ಮನಗಂಡ ನೆರೆಹೊರಿಯ ರಾಷ್ಟ್ರಗಳು ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ತುಳಿಯುವ ಸತ ಪ್ರಯತ್ನದಲ್ಲಿ ನಾವು ಎಲ್ಲರೂ ಒಟ್ಟಾಗಿರುವ ಅನಿವಾರ್ಯತೆ ಸೃಷ್ಟಿಯಾಗಿದೆ

ಕನ್ನಡಪ್ರಭ ವಾರ್ತೆ ಮೈಸೂರು

ಸದ್ಯದ ಭಾರತದ ಪರಿಸ್ಥಿತಿ ಹಾಗೂ ವಿಶ್ವದ ಇತ್ತೀಚಿನ ಸಾಮಾಜಿಕ ಹಾಗೂ ರಾಜಕೀಯ ತಲ್ಲಣಗಳನ್ನು ನೋಡಿದರೆ ಭಾರತ ತುರ್ತಾಗಿ ರಕ್ಷಣಾ ಕ್ಷೇತ್ರ ಹಾಗೂ ಕೃಷಿ ಕ್ಷೇತ್ರವನ್ನು ಅತ್ಯಂತ ಸಮರ್ಥವಾಗಿ ಬಲವರ್ಧನೆಗೊಳಿಸುವ ಅನಿವಾರ್ಯತೆ ಸರ್ಕಾರದ ಮುಂದಿದೆ ಎಂದು ಕೆಪಿಸಿಸಿ ರೈತ ವಿಭಾಗದ ರಾಜ್ಯಾಧ್ಯಕ್ಷ ಸಚಿನ್ ಮೀಗಾ ತಿಳಿಸಿದರು.

ನಗರದ ಇಂದಿರಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯು ಶನಿವಾರ ಆಯೋಜಿಸಿದ್ದ ಜಿಲ್ಲಾ ಕಿಸಾನ್ ಘಟಕದ ಜಿಲ್ಲಾ ಸಮ್ಮೇಳನ ಹಾಗೂ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದಲ್ಲಿ ದೇಶದಲ್ಲಿ ಕೃಷಿ ಕ್ಷೇತ್ರವನ್ನು ಮತ್ತು ರಕ್ಷಣಾ ಕ್ಷೇತ್ರವನ್ನು ಸಮರ್ಥವಾಗಿ ಬಲವರ್ಧನೆಗೆ ಹಲವಾರು ಸಂವಿಧಾನದ ತಿದ್ದುಪಡಿಗಳನ್ನು ತರಲು ಭಾರತ ರಾಷ್ಟ್ರೀಯ ಕಾಂಗ್ರೆಸ್ ಕಾರಣ. ಅದನ್ನ ಬೇರೆ ರಾಜಕೀಯ ಪಕ್ಷಗಳು ಮುಂದುವರಿಸಿಕೊಂಡು ಹೋಗುತ್ತಿವೆಯಷ್ಟೇ ಎಂದರು.

ಭಾರತದ ಬಲಿಷ್ಟತೆಯನ್ನ ಮನಗಂಡ ನೆರೆಹೊರಿಯ ರಾಷ್ಟ್ರಗಳು ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ತುಳಿಯುವ ಸತ ಪ್ರಯತ್ನದಲ್ಲಿ ನಾವು ಎಲ್ಲರೂ ಒಟ್ಟಾಗಿರುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಅವರು ಹೇಳಿದರು.

ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ಮಾತನಾಡಿ, ರೈತರು ಈ ದೇಶದ ಬೆನ್ನೆಲುಬಾಗಿ ನಿಂತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರೈತಾಪಿ ವರ್ಗಕ್ಕೆ ಅವಿರತವಾದ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಸ್ವತಂತ್ರ ನಂತರದಲ್ಲಿ 20 ಅಂಶದ ಕಾರ್ಯಕ್ರಮದಲ್ಲಿ ರೈತರಿಗೆ ಅತಿ ಹೆಚ್ಚು ಕೊಡುಗೆಗಳನ್ನು ನೀಡಿದಂತಹ ಹೆಗ್ಗಳಿಕೆ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ ಎಂದರು.

ವಿಧಾನಪರಿಷತ್ತು ಸದಸ್ಯ ಡಾ.ಡಿ. ತಿಮ್ಮಯ್ಯ ಮಾತನಾಡಿ, ನಾನು ಸಹ ರೈತ ಕುಟುಂಬದಿಂದ ಬಂದಿದ್ದೇನೆ. ಹಾಗಾಗಿ ರೈತರ ನೋವು, ಕಷ್ಟ ಸುಖ ನನಗೆ ಚೆನ್ನಾಗಿ ಅರಿವಿದೆ. ಜಿಲ್ಲಾ ಕಾಂಗ್ರೆಸ್ ಸಮಿತಿ ರೈತ ಘಟಕವು ರೈತರಿಗೆ ಅನುಕೂಲಕರವಾಗುವಂತಹ ವಾತಾವರಣವನ್ನು ಜಿಲ್ಲೆಯೊಳಗೆ ನಿರ್ಮಿಸಬೇಕು ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್ ಮಾತನಾಡಿ, ಕಳೆದ ವರ್ಷ ಪಂಜಾಬ್ ಗಡಿ ಭಾಗದಲ್ಲಿ ಬಿಜೆಪಿ ಸರ್ಕಾರ ರೈತರೊಂದಿಗೆ ನಡೆದುಕೊಂಡಂತಹ ರೀತಿಯನ್ನು ಖಂಡಿಸಿ, ರೈತ ವಿರೋಧಿ ಸರ್ಕಾರಕ್ಕೆ ಎಂದೂ ಮನ್ನಣೆ ಸಿಗಬಾರದು ಎಂದು ಹೇಳಿದರು.

ಮೈಸೂರು ಜಿಲ್ಲಾ ಕಾಂಗ್ರೆಸ್ ರೈತ ಘಟಕದ ನೂತನ ಅಧ್ಯಕ್ಷರಾಗಿ ನಿಯೋಜನೆಗೊಂಡಿರುವ ಜಿ. ಮಹದೇವ್ ಅವರಿಗೆ ಕಾಂಗ್ರೆಸ್ ಧ್ವಜ ನೀಡಿ ಅಧಿಕಾರ ವಹಿಸಲಾಯಿತು.

ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್, ಕಾರ್ಯದರ್ಶಿಗಳಾದ ಶಿವನಾಗಪ್ಪ, ಎನ್. ಭಾಸ್ಕರ್, ಲೋಕೇಶ್ ರಾವ್, ಮುಖಂಡರಾದ ಎಡತಲೆ ಮಂಜುನಾಥ್, ಉತ್ತನಹಳ್ಳಿ ಶಿವಣ್ಣ, ತಲಕಾಡು ಮಂಜುನಾಥ್, ತಿಮ್ಮಯ್ಯ, ಕಾಂತರಾಜ್, ನಾಗೇಶ್, ಚರಣ್ ರಾಜ್, ಚಂದ್ರಶೇಖರ್, ಪ್ರೇಮ್, ಮಹೇಶ್, ಸತೀಶ್, ಕೋಟೆ ಮಂಜು, ಮಲ್ಲೇಶ್ ಕೋಟೆ, ಲೇಖಾ ವೆಂಕಟೇಶ್ ಮೊದಲಾದಲರು ಇದ್ದರು.

----

ಬಾಕ್ಸ್...

ಒಗ್ಗಟ್ಟಿನ ಮಂತ್ರ ಜಪಿಸಲು ಶಪಥ

ಇದೇ ವೇಳೆ ಭಾರತ- ಪಾಕಿಸ್ತಾನದ ನಡುವಿನ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಒಂದು ನಿಮಿಷ ಮೌನಾಚರಣೆ ಮಾಡಿ, ಸಭಾಂಗಣದಲ್ಲಿ ನೆರೆದಿದ್ದ ಎಲ್ಲಾ ಪದಾಧಿಕಾರಿಗಳು ಎದ್ದು ನಿಂತು ಭಾರತೀಯ ಸೇನೆಯೊಂದಿಗೆ ನಾವಿದ್ದೇವೆ. ಅಳಿಯಲಿ ಅಳಿಯಲಿ ಭಯೋತ್ಪಾದನೆ ಅಳಿಯಲಿ, ಉಳಿಯಲಿ ಉಳಿಯಲಿ ಶಾಂತಿ ಉಳಿಯಲಿ ಎಂಬ ಘೋಷವಾಕ್ಯದೊಂದಿಗೆ ಭಾರತೀಯ ಸೇನೆಗೆ ನೈತಿಕ ಬೆಂಬಲ ಘೋಷಣೆ ಮಾಡಿ, ದೇಶ ಒಗ್ಗಟಿನ ಮಂತ್ರ ಜಪಿಸಲು ಶಪಥ ಮಾಡಿದರು.

----

ಕೋಟ್...

ಇಂದು ರೈತರ ಬದುಕು ಇಂದು ಶೋಚನೀಯವಾಗಿದೆ. ರೈತರನ್ನು ಹೊರತು ಪಡಿಸಿ ಇಂದು ಸಾಮಾನ್ಯವಾಗಿ ಎಲ್ಲರೂ ಅಭಿವೃದ್ಧಿ ಹೊಂದುತ್ತಿದ್ದಾರೆ. ಆದರೆ, ರೈತ ಸಾಲವಂತರಾಗಿ ಬದುಕುತ್ತಿದ್ದಾರೆ. ಸರಿಯಾದ ಬೆಲೆ ಸಿಗಲಿಲ್ಲ ಎಂದರೆ ರಸ್ತೆಗೆ ತಂದು ಸುರಿಯುತ್ತಾರೆ. ಹೀಗಾಗಿ, ರೈತರ ಬೆಳೆಗೆ ಬೆಲೆ ನಿರ್ಧಾರ ಮಾಡುವುದರ ಜೊತೆಗೆ ಬೆಂಬಲ ಬೆಲೆ ನಿಗದಿಪಡಿಸಿ ರೈತರ ಅಭಿವೃದ್ಧಿಗೆ ರಕ್ಷಣೆಗೆ ಯೋಜನೆಗಳನ್ನು ತರಬೇಕು.

- ಡಾ.ಡಿ. ತಿಮ್ಮಯ್ಯ, ವಿಧಾನ ಪರಿಷತ್ ಸದಸ್ಯ