ಸಾರಾಂಶ
ಯಲ್ಲಾಪುರ: ನಾಡಿನ ಪತ್ರಿಕೋದ್ಯಮ ಕ್ಷೇತ್ರಕ್ಕೆ ಉತ್ತರ ಕನ್ನಡ ನೀಡಿದ ಕೊಡುಗೆಯ ದಾಖಲೆಯನ್ನು ಯಾರೂ ಎಂದೂ ಹಿಂದಿಕ್ಕಲು ಸಾಧ್ಯವಾಗದು ಮತ್ತು ಅವರು ಒತ್ತಿದ ಛಾಪನ್ನು ಅಳಿಸಲಾಗದು ಎಂದು ಪತ್ರಕರ್ತ ಕೆ.ಎನ್. ಚನ್ನೇಗೌಡ ತಿಳಿಸಿದರು.ಅ. ೭ರಂದು ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಡಾ. ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಮತ್ತು ಕ್ಯಾಂಪಸ್ ಸಿಲೆಕ್ಷನ್ ಕಾರ್ಯಕ್ರಮದಲ್ಲಿ ಮಾತನಾಡಿದರು.ಉಳ್ಳವರು ಮತ್ತು ಪ್ರತಿಷ್ಠಿತರೇ ಮಾತ್ರ ಪತ್ರಿಕೆಯನ್ನು ತರಿಸುವರೆಂದು ನಂಬಿದ ಕಾಲವೊಂದಿತ್ತು. ಆದರೆ ಕಳೆದ ಕಾಲು ಶತಮಾನದಲ್ಲಿ ಆದನ್ನು ಮೀರಿ ಪತ್ರಿಕೋದ್ಯಮ ಬೆಳೆದಿದೆ. ಪ್ರತಿ ಮನೆ ಮನೆಗೆ ಪತ್ರಿಕೆ ತಲುಪಿದೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅವಕಾಶಗಳು ಹೇರಳವಾಗಿದ್ದರೂ, ಈ ಕ್ಷೇತ್ರವನ್ನು ನೆಚ್ಚಿಕೊಂಡು ಬರುವ ಪ್ರತಿಭಾವಂತರ ಕೊರತೆ ಇದೆ. ಆದ್ದರಿಂದ ಇದನ್ನು ಪ್ರತಿಯೋರ್ವ ಆಸಕ್ತ ವಿದ್ಯಾರ್ಥಿಗಳೂ ಗಮನವಿರಿಸಿ, ಪತ್ರಿಕೋದ್ಯಮದ ಕುರಿತಾಗಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೇಮನೆ ಮಾತನಾಡಿ, ಪತ್ರಿಕೋದ್ಯಮ ಕಷ್ಟದ ಮತ್ತು ಸವಾಲಿನ ಕಾರ್ಯವಾಗಿದ್ದು, ವಿಜಯ ಸಂಕೇಶ್ವರರ ಅಪೂರ್ವ ಸ್ವರೂಪದ ಇಚ್ಛಾಶಕ್ತಿಯಿಂದಾಗಿ ಮುದ್ರಣ ಮತ್ತು ದೂರದರ್ಶನ ಮಾಧ್ಯಮದಲ್ಲಿ ಬೃಹತ್ ಬದಲಾವಣೆ ತಂದಿದ್ದಾರೆ ಎಂದರು.
ನಿವೃತ್ತ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟಾ ವೇದಿಕೆಯಲ್ಲಿದ್ದರು. ಪತ್ರಕರ್ತರಾದ ನವೀನಕುಮಾರ, ಪ್ರಕಾಶ, ಸಾಮಾಜಿಕ ಕಾರ್ಯಕರ್ತರಾದ ಎಂ.ಆರ್. ಹೆಗಡೆ ಕುಂಬ್ರೀಗುಡ್ಡೆ, ಸಂಸ್ಥೆಯ ಕಾರ್ಯದರ್ಶಿ ನರಸಿಂಹ ಕೋಣೆಮನೆ ಪಾಲ್ಗೊಂಡಿದ್ದರು. ಶೋಭಾ ಗೌಡ ಪ್ರಾರ್ಥಿಸಿದರು. ಪ್ರಾಂಶುಪಾಲ ನಾಗರಾಜ ಇಳೇಗುಂಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ನಾಗರಾಜ ಪಟಗಾರ ನಿರ್ವಹಿಸಿದರು.