ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಈ ಬಾರಿ ಎಐಸಿಸಿ ಹಾಗೂ ಕೆಪಿಸಿಸಿಯಿಂದಲೇ ಪ್ರಚಾರ ಸಮಿತಿಯನ್ನು ರಚನೆ ಮಾಡಲಾಗಿದೆ. ರಾಜ್ಯಮಟ್ಟದ ಉಪಾಧ್ಯಕ್ಷರ, ಕೋ-ಆರ್ಡಿನೇಟರ್ ಮಾಡಿಕೊಳ್ಳಲಾಗಿದೆ. ಇದೀಗ ಜಿಲ್ಲಾ ಸಮಿತಿ ರಚನೆ, ಬ್ಲಾಕ್ ಸಮಿತಿ ರಚನೆ, ಬೂತ್ ಮಟ್ಟದ ಸಮಿತಿ ರಚನೆ ಮಾಡಲಿದ್ದೇವೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ವಿನಯಕುಮಾರ ಸೊರಕೆ ಹೇಳಿದರು.ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು ರಾಜ್ಯದೆಲ್ಲೆಡೆ ಸಂಚರಿಸಿ ಜಿಲ್ಲಾವಾರು ಪ್ರಚಾರ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ಪ್ರಚಾರ ಸಮಿತಿ ಎಂದರೆ ಪಕ್ಷದ ಬಗ್ಗೆ, ಸಿದ್ಧಾಂತಗಳ ಬಗ್ಗೆ, ನಾಯಕತ್ವದ ಬಗ್ಗೆ, ಪಕ್ಷದ ಕಾರ್ಯಕ್ರಮಗಳ ಬಗ್ಗೆ ಪ್ರಚುರಪಡಿಸುವುದಾಗಿದೆ. ಇದೀಗ ರಾಜ್ಯಮಟ್ಟದ ತರಬೇತಿಯನ್ನು ನಡೆಸಿ, ಜಿಲ್ಲಾ ಮಟ್ಟದಲ್ಲಿಯೂ ಮುಂದೆ ನಡೆಸಲಾಗುವುದು. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮತ ಕಳ್ಳತನ ಬಗ್ಗೆ ದೇಶದಲ್ಲಿ ಆಂದೋಲನ ಮಾಡಿದ್ದಾರೆ. ಅದರ ಬಗ್ಗೆಯೂ ಸಮಿತಿಯಿಂದ ಜನರ ಗಮನ ಸೆಳೆಯುವ ಕೆಲಸ ಮಾಡಲಾಗುವುದು. ಮಹದೇವಪುರ ಕ್ಷೇತ್ರ, ಮಹಾರಾಷ್ಟ್ರದ ಸತಾರ ಹಾಗೂ ಬಿಹಾರ ಸೇರಿದಂತೆ ಹಲವೆಡೆ ಹೆಚ್ಚುವರಿ ಮತ ಸೇರಿಸಲಾಗಿದೆ ಎಂದು ಆರೋಪಿಸಿದರು.
ಜನರಿಗೆ ಕೊಟ್ಟ ಭರವಸೆಯನ್ನು ಅಧಿಕಾರಕ್ಕೆ ಬಂದು ಕೇವಲ ಆರು ತಿಂಗಳಲ್ಲಿ ಈಡೇರಿಸುವುದು ಕಾಂಗ್ರೆಸ್ ಮಾತ್ರ. ಎಲ್ಲ ಗ್ಯಾರಂಟಿಗಳನ್ನು ಈಡೇರಿಸಿದ್ದು, ಕಾಂಗ್ರೆಸ್. ಆದರೆ, ಬಿಜೆಪಿಯವರು ಬಿಟ್ಟಿ ಗ್ಯಾರಂಟಿ ಎಂದರು. ಆದರೆ ಒಂದು ಲಕ್ಷ ಕೋಟಿ ಹಣ ಜನರಿಗೆ ತಲುಪಿದೆ. ಕೇವಲ ರಸ್ತೆ, ಸೇತುವೆಗಳು ಮಾತ್ರ ಅಭಿವೃದ್ಧಿಯಲ್ಲ. ಮಾನವ ಸಂಪನ್ಮೂಲ ಅಭಿವೃದ್ಧಿಗೊಳಿಸುವುದು ಕೂಡ ಅಭಿವೃದ್ಧಿ ಎಂಬುದಾಗಿ ಸ್ಪಷ್ಟನೆ ನೀಡಿದರು.ಬಿಜೆಪಿ ಪ್ರಜಾಪ್ರಭುತ್ವದ ಎಲ್ಲ ಅಸ್ತ್ರಗಳನ್ನು ಶಿಥಿಲಗೊಳಿಸುವ ಕೆಲಸ ಮಾಡುತ್ತಿದೆ. ಇದೀಗ ಅಘೋಷಿತ ತುರ್ತು ಪರಿಸ್ಥಿತಿಯನ್ನು ಮಾಡಿದ್ದಾರೆ. ಇದೆಲ್ಲದರ ಬಗ್ಗೆ ಬೆಳಕು ಚೆಲ್ಲುವ ಕೆಲಸ ನಮ್ಮ ಪ್ರಚಾರ ಸಮಿತಿ ಮಾಡಲಿದೆ. ಜಿಪಂ, ತಾಪಂ ಚುನಾವಣೆ ವಿಚಾರದ ಬಗ್ಗೆ ಗ್ರಾಮೀಣ ಅಭಿವೃದ್ಧಿ ಸಚಿವರು ಎರಡು ತಿಂಗಳಲ್ಲಿ ಚುನಾವಣೆ ಮಾಡುವುದಾಗಿ ಹೇಳಿದ್ಧಾರೆ. ಇದು ಕಾರ್ಯಕರ್ತರ ಚುನಾವಣೆ ಇರುವುದರಿಂದ ಅದರ ಬಗ್ಗೆಯೂ ಪ್ರಚಾರ ಮಾಡಲಾಗುವುದು ಎಂದರು.
ಸಮಾಜವನ್ನು ಕೂಡಿಸುವುದು ನಮ್ಮ ಸಿದ್ಧಾಂತ, ಸಮಾಜ ಒಡೆಯುವುದು ಬಿಜೆಪಿ ಸಿದ್ಧಾಂತ. ಧರ್ಮ ಒಡೆಯುವುದು, ಸಮಾಜ ಒಡೆದು ಅಧಿಕಾರಕ್ಕೆ ಬರುವುದು ಅವರ ಸಿದ್ಧಾಂತ ಎಂಬುದನ್ನು ತಿಳಿಸಿದರು.ಶಾಸಕ ಬಸನಗೌಡ ಪಾಟೀಲ ಯತ್ನಾಳ ಕುರಿತು ಮಾತನಾಡಿದ ಅವರು, ಇನ್ನೊಬ್ಬ ಮುತಾಲಿಕ ಆಗಲು ಹೊರಟಿದ್ದಾರೆ. ಅವರು ತಮ್ಮ ಅಸ್ತಿತ್ವಕ್ಕಾಗಿ ಮಾತನಾಡುತ್ತಾರೆ. ಅವರ ಬಗ್ಗೆ ನಾವು ಮಾತನಾಡುವುದೇನಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಸರ್ಫರಾಜ, ಟಪಾಲ್, ಶರಣಪ್ಪ, ಸಲೀಂ ಉಪಸ್ಥಿತರಿದ್ದರು.