ಇತ್ತೀಚೆಗೆ ಹಾಲು, ಬಸ್ ದರ, ಜೋಳ, ಅಕ್ಕಿ, ಹೀಗೆ ಇನ್ನೂ ನಿತ್ಯದ ದಿನಬಳಕೆ ವಸ್ತುಗಳ ಬೆಲೆ ಏರಿಸಿದ ಪರಿಣಾಮವಾಗಿ ಈ ಬಾರಿ ದೀಪಾವಳಿ ಬಡವರ ಪಾಲಿಗೆ ಖುಷಿ ಕೊಡಲಿಲ್ಲ. ಹಬ್ಬದ ಕಾರಣ ಅನಿವಾರ್ಯವಾಗಿ ಕಡಿಮೆ ಪ್ರಮಾಣದಲ್ಲಿ ಪೂಜೆಗೆ ವಸ್ತುಗಳ ಖರೀದಿ ಮಾಡಿದ್ದು ಕಂಡು ಬಂತು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಇತ್ತೀಚೆಗೆ ಹಾಲು, ಬಸ್ ದರ, ಜೋಳ, ಅಕ್ಕಿ, ಹೀಗೆ ಇನ್ನೂ ನಿತ್ಯದ ದಿನಬಳಕೆ ವಸ್ತುಗಳ ಬೆಲೆ ಏರಿಸಿದ ಪರಿಣಾಮವಾಗಿ ಈ ಬಾರಿ ದೀಪಾವಳಿ ಬಡವರ ಪಾಲಿಗೆ ಖುಷಿ ಕೊಡಲಿಲ್ಲ. ಹಬ್ಬದ ಕಾರಣ ಅನಿವಾರ್ಯವಾಗಿ ಕಡಿಮೆ ಪ್ರಮಾಣದಲ್ಲಿ ಪೂಜೆಗೆ ವಸ್ತುಗಳ ಖರೀದಿ ಮಾಡಿದ್ದು ಕಂಡು ಬಂತು.

ಇದರ ಪರಿಣಾಮವಾಗಿ ದೀಪಾವಳಿಗೆ ಪ್ರತಿವರ್ಷ ದೀಪಾವಳಿ ದಿನ ಕಬ್ಬು, ಹಣ್ಣು, ಹೂ ಇತ್ಯಾದಿ ಪೂಜಾ ವಸ್ತುಗಳ ಖರೀದಿಗೆ ಸಾವಿರಾರು ಸಂಖ್ಯೆಯಲ್ಲಿ ಸೇರುತ್ತಿದ್ದ ಜನ ಈ ಬಾರಿ ಭಾರತ್ ಮಾರುಕಟ್ಟೆ, ಹಾದಿ ಬಸವೇಶ್ವರ ಗುಡಿ ಹತ್ತಿರ, ಬಾಲಕರ ಸರ್ಕಾರಿ ಹೈಸ್ಕೂಲ್ ಗ್ರೌಂಡ್ ಬಣಬಣ ಎನ್ನುತ್ತಿದ್ದವು. ಕಬ್ಬು 20 ಗಳಗಳಿಗೆ ₹400, ಹಣ್ಣು ₹100 ಕ್ಕೆ 4, ಹೂ ₹120-150 ಕೆ.ಜಿ.ಗೆ ಮಾರಾಟ ನಡೆದಿತ್ತು.

ಕಳೆದ ವರ್ಷದ ಬೆಲೆಗಿಂತ ಈ ವರ್ಷ ಎರಡು ಪಟ್ಟು ಹೆಚ್ಚಾಗಿತ್ತು. ಹಬ್ಬದ ಮುಂಚಿನ ದಿನ ರೈತರು ಬೇಳೆ ದಿಂಡು, ಕಬ್ಬು, ಚಂಡು ಹೂ, ಮುಂತಾದ ಪೂಜಾ ಸಾಮಗ್ರಿಗಳನ್ನು ರಾಶಿ-ರಾಶಿಯಾಗಿ ತರುತ್ತಿದ್ದರು. ಆದರೆ ಈ ಬಾರಿ ಮುಂಗಾರು ಮಳೆ ಕೈಕೊಟ್ಟ ಕಾರಣ ಬೆಳೆ ಬರದೇ ರೈತರೂ ಕಂಗಾಲಾಗಿದ್ದರಿಂದ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು, ಬಾಳೆ ದಿಂಡು, ಹಣ್ಣು, ಹೂ ತಂದಿರಲಿಲ್ಲ. ಕಡಿಮೆ ಪ್ರಮಾಣದಲ್ಲಿ ತಂದ ಕಾರಣ ಎಲ್ಲ ವಸ್ತುಗಳ ಬೆಲೆ ಎರಡು ಪಟ್ಟು ಕಂಡು ಬಂತು. ----

ಈ ಬಾರಿ ದೀಪಾವಳಿ ಹಬ್ಬ ಸರಿಯಾಗಿಲ್ಲ. ಮುಂಗಾರು ಬರಕ್ಕೆ ತುತ್ತಾಯ್ತು. ಬರ ಪರಿಹಾರದ ಹಣ ಸಹ ಸರ್ಕಾರ ಹಾಕಲಿಲ್ಲ. ಹಬ್ಬ ಹೇಗೆ ಮಾಡುವುದು. ರೈತರ ಗೋಳು ಕೇಳುವವರಿಲ್ಲ.

-ಹೂವು ಮಾರಲು ಬಂದ ಆಸಂಗಿ ಗ್ರಾಮದ ರೈತ