ನಾಡಿನ ದೊಡ್ಡ ಹಬ್ಬ ದೀಪಾವಳಿ. ಸಡಗರ, ಸಂಭ್ರಮದಿಂದ ಎಲ್ಲೆಡೆ ಬೆಳಕನ್ನು ಚೆಲ್ಲುತ್ತ ಆಚರಣೆ ಮಾಡುವ ದೀಪಾವಳಿ ಹಬ್ಬದ ಸಂತಸಕ್ಕೆ ಈ ಬಾರಿ ತಾಳಿಕೋಟೆಯಲ್ಲಿ ತಣ್ಣೀರು ಎರಚಿದಂತಾಗಿದೆ. ಪಟ್ಟಣದಲ್ಲಿ ಹಿಂದಿನ ವರ್ಷಗಳಂತೆ ಹಬ್ಬದ ಕಳೆಗಟ್ಟಿಲ್ಲ. ಮಳೆ-ಬೆಳೆ ಇಲ್ಲದೆ ಬರಗಾಲದ ಭವಣೆಯಿಂದ ತತ್ತರಿಸಿರುವ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದ ಜನರ ಮೇಲೆ ಬರ ಪರಿಣಾಮ ಬೀರಿದೆ. ಹೀಗಾಗಿ ಇದರ ಪರಿಣಾಮ ಹಬ್ಬದ ಖರೀದಿ ಹಾಗೂ ವ್ಯಾಪಾರದ ಮೇಲೂ ಕರಿನೆರಳು ಬೀರಿದೆ.

ಪ್ರವೀಣ್ ಘೋರ್ಪಡೆ

ಕನ್ನಡಪ್ರಭ ವಾರ್ತೆ ತಾಳಿಕೋಟೆ

ನಾಡಿನ ದೊಡ್ಡ ಹಬ್ಬ ದೀಪಾವಳಿ. ಸಡಗರ, ಸಂಭ್ರಮದಿಂದ ಎಲ್ಲೆಡೆ ಬೆಳಕನ್ನು ಚೆಲ್ಲುತ್ತ ಆಚರಣೆ ಮಾಡುವ ದೀಪಾವಳಿ ಹಬ್ಬದ ಸಂತಸಕ್ಕೆ ಈ ಬಾರಿ ತಾಳಿಕೋಟೆಯಲ್ಲಿ ತಣ್ಣೀರು ಎರಚಿದಂತಾಗಿದೆ. ಪಟ್ಟಣದಲ್ಲಿ ಹಿಂದಿನ ವರ್ಷಗಳಂತೆ ಹಬ್ಬದ ಕಳೆಗಟ್ಟಿಲ್ಲ. ಮಳೆ-ಬೆಳೆ ಇಲ್ಲದೆ ಬರಗಾಲದ ಭವಣೆಯಿಂದ ತತ್ತರಿಸಿರುವ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದ ಜನರ ಮೇಲೆ ಬರ ಪರಿಣಾಮ ಬೀರಿದೆ. ಹೀಗಾಗಿ ಇದರ ಪರಿಣಾಮ ಹಬ್ಬದ ಖರೀದಿ ಹಾಗೂ ವ್ಯಾಪಾರದ ಮೇಲೂ ಕರಿನೆರಳು ಬೀರಿದೆ.

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪಟ್ಟಣದ ಮಾರುಕಟ್ಟೆಯಲ್ಲಿ ಪೂಜಾ ಸಾಮಗ್ರಿಗಳು, ಹೂವು, ಹಣ್ಣು, ಮಣ್ಣಿನ ಹಣತೆ, ಬಾಳೆಕಂಬ ಸೇರಿದಂತೆ ವಿವಿಧ ವಸ್ತುಗಳ ಮಾರಾಟಕ್ಕೆ ಅಂಗಡಿಗಳು ಸಜ್ಜಾಗಿದ್ದವು. ಬೆಲೆಗಳು ಕಳೆದ ವರ್ಷದಷ್ಟೇ ಇದ್ದರೂ ಗ್ರಾಹಕರ ಖರೀದಿ ಉತ್ಸಾಹ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಕಂಡುಬರಲಿಲ್ಲ. ಅಲ್ಲಲ್ಲಿ ಜನರು ಹಬ್ಬದ ಸಾಮಗ್ರಿಗಳನ್ನು ಖರೀದಿಸುತ್ತಿರುವುದು ಕಂಡುಬಂದರೂ ನಿಯಮಕ್ಕೆ ಮಾತ್ರ ಆಚರಣೆ ಮಾಡಲಾಗುತ್ತಿದೆ. ಆದರೆ, ವ್ಯಾಪಾರಸ್ಥರ ಮುಖದಲ್ಲಿ ಅಷ್ಟೊಂದು ಕಳೆ ಇಲ್ಲ. ತಮ್ಮ ಶಕ್ತಿಗನುಸಾರ ಪೂಜಾ ಸಾಮಗ್ರಿಗಳನ್ನು ಖರೀದಿಸುತ್ತಿರುವುದು ನಡೆಯುತ್ತಿದೆ. ಮಾರುಕಟ್ಟೆಯಲ್ಲಿ ಮುತ್ತಿನ ಹಾಗೂ ರೇಷ್ಮೆ ಹಾರಗಳು ಒಂದಕ್ಕೆ ₹೫೦ರಿಂದ ₹೧೫೦ರವರೆಗೆ, ಮಿತಿಗಟ್ಟಿಗಳು ₹ ೨೫ರಿಂದ ₹ ೫೦ರವರೆಗೆ ಮಾರಾಟವಾಗುತ್ತಿವೆ. ಚೆಂಡು ಹೂವು ಕೆಜಿ.ಗೆ ₹ ೧೦೦, ಶಾವಂತಿಗೆ ಹೂವು ಕೆಜಿ.ಗೆ ₹ ೧೫೦ರಿಂದ ₹ ೨೦೦, ಹೂವಿನ ಹಾರ ₹ ೫೦ರಿಂದ ₹ ೧೦೦ ಹಾಗೂ ಸಾಮಾನ್ಯ ಹೂವಿನ ಹಾರ ₹ ೩೦ರಿಂದ ೪೦ರವರೆಗೆ ಮಾರಾಟ ಮಾಡಲಾಗುತ್ತಿದೆ. ಕುಂಬಳಕಾಯಿ ಗಾತ್ರಕ್ಕೆ ಅನುಗುಣವಾಗಿ ಒಂದಕ್ಕೆ ₹ ೧೦೦ರಿಂದ ₹ ೨೫೦ರವರೆಗೆ ಬೆಲೆ ಇದೆ.

ಮಣ್ಣಿನ ಹಣತೆಗಳಿಗೂ ಬೇಡಿಕೆಯಿದ್ದರೂ ಖರೀದಿ ಪ್ರಮಾಣ ಎಂದಿನಂತೆ ಕಾಣುತ್ತಿಲ್ಲ. ಹಣತೆಗಳ ಡಜನ್‌ಗೆ ₹ ೧೦೦, ನಾಲ್ಕು ನಂಬರ್ ಹಣತೆ ನಾಲ್ಕಕ್ಕೆ ₹ ೫೦, ಐದು ನಂಬರ್ ಹಣತೆ ನಾಲ್ಕಕ್ಕೆ ₹ ೩೦, ಎರಡು ನಂಬರ್ ಹಣತೆ ನಾಲ್ಕಕ್ಕೆ ₹ ೨೦ ಹಾಗೂ ಒಂದು ನಂಬರ್ ಹಣತೆ ಐದಕ್ಕೆ ₹ ೧೦ರಂತೆ ಮಾರಾಟವಾಗುತ್ತಿವೆ. ಹಣ್ಣುಗಳ ಮಾರುಕಟ್ಟೆಯಲ್ಲಿ ಬಾಳೆಹಣ್ಣು ಡಜನ್‌ಗೆ ₹ ೫೦, ಸೇಬು ಐದಕ್ಕೆ ₹ ೧೦೦, ಸೀತಾಫಲ ಐದಕ್ಕೆ ₹ ೧೦೦, ಕಿತ್ತಳೆ ಐದಕ್ಕೆ ₹ ೧೦೦, ದಾಳಿಂಬೆ ಐದಕ್ಕೆ ₹ ೫೦, ಮೋಸಂಬಿ ಐದಕ್ಕೆ ₹ ೧೦೦ ಹಾಗೂ ನಿಂಬೆಹಣ್ಣು ಐದಕ್ಕೆ₹ ೨೦ರಂತೆ ಮಾರಾಟವಾದವು. ಬಾಳೆಕಂಬ ಜೋಡಿಗೆ ₹ ೫೦ರಿಂದ ₹ ೧೦೦, ತೆಂಗಿನ ಪರಿಕಿ ಜೋಡಿಗೆ ₹೧೦೦ ಹಾಗೂ ಚೆಂಡು ಹೂವಿನ ಗಿಡ ಜೋಡಿಗೆ ₹ ೫೦ರಂತೆ ಮಾರಾಟ ಮಾಡಲಾಗುತ್ತಿದೆ.

ಹಬ್ಬದ ವಹಿವಾಟಿನ ಮೇಲೆ ಹೊಡೆತ

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹಬ್ಬದ ವ್ಯಾಪಾರದಲ್ಲಿ ಸುಮಾರು ಶೇ.50ರಷ್ಟು ಕುಸಿತ ಉಂಟಾಗಿದೆ ಎಂದು ವ್ಯಾಪಾರಸ್ಥರು ಅಳಲು ತೋಡಿಕೊಂಡಿದ್ದಾರೆ. ಸಾಮಗ್ರಿಗಳ ಬೆಲೆಯಲ್ಲಿ ಹೆಚ್ಚಿನ ಏರಿಕೆ ಇಲ್ಲದಿದ್ದರೂ ಜನರ ಕೈಯಲ್ಲಿ ಹಣವಿಲ್ಲದ್ದರಿಂದ ಖರೀದಿ ಭರಾಟೆ ಗಣನೀಯ ಇಳಿಕೆಯಾಗಿದೆ ಎಂಬುದು ಅವರ ಅಭಿಪ್ರಾಯವಾಗಿದೆ.

ಒಟ್ಟಿನಲ್ಲಿ ದೀಪಾವಳಿ ಹಬ್ಬವು ಸಂಪ್ರದಾಯದಂತೆ ಆಚರಣೆಯಾಗುತ್ತಿದ್ದರೂ ಹಿಂದಿನಂತೆ ಮಾರುಕಟ್ಟೆಯಲ್ಲಿ ಸಂಭ್ರಮವಿಲ್ಲ. ಮಳೆ ಇಲ್ಲದೆ ಬೆಳೆ ನಷ್ಟ ಅನುಭವಿಸಿರುವ ರೈತರು ಹಾಗೂ ಗ್ರಾಮೀಣ ಜನರ ಆರ್ಥಿಕ ಸಂಕಷ್ಟಕ್ಕೆ ಈ ಬಾರಿ ಬರ ತಣ್ಣೀರೆರಚಿದಂತಾಗಿದೆ.

--------------

ಕೋಟ್‌

ಪ್ರತಿ ವರ್ಷ ಸಾಮಗ್ರಿಗಳ ಖರೀದಿಯಲ್ಲಿ ದರಗಳು ವ್ಯತ್ಯಾಸವಾಗುವುದು ಸಹಜವಾಗಿತ್ತು. ಆದರೆ, ಈ ಬಾರಿ ದರಗಳು ಕಡಿಮೆ ಮಾಡಿದರೂ ಕೊಂಡುಕೊಳ್ಳುವವರ ಸಂಖ್ಯೆ ಶೇ.೫೦ ರಷ್ಟು ಗಣನೀಯ ಇಳಿಕೆಯಾಗಿದೆ. ಮಳೆ-ಬೆಳೆ ಇಲ್ಲದೇ ಬರಗಾಲದ ಭವಣೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಬಳಿ ದುಡ್ಡಿದ್ದರೆ ಪಟ್ಟಣದ ವ್ಯಾಪಾರಸ್ಥರಿಗೆ ಮೊಗದಲ್ಲಿ ಸಂತಸ ಕಾಣಲು ಸಾಧ್ಯ.

- ಅಲ್ತಾಫ್ ಹುಲ್ಲೂರ, ಹಣ್ಣಿನ ವ್ಯಾಪಾರಿ.-----------೮ಟಿಎಲ್‌ಕೆ ೨ ಚಿತ್ರ ವಿವರಣೆ: ತಾಳಿಕೋಟೆ : ಪಟ್ಟಣದ ಬಸ್ ನಿಲ್ದಾಣ ಮುಂಭಾಗದ ಹಣ್ಣಿನ ಅಂಗಡಿಯಲ್ಲಿ ಪೂಜೆಗೆ ಅವಶ್ಯವಿರುವ ಹಣ್ಣುಗಳ ಖರಿದಿಯಲ್ಲಿ ಜನರು ತೊಡಗಿರುವದು.