ದೀಪಾವಳಿ ಜೂಜಾಟ; ₹17.31 ಲಕ್ಷ ನಗದು ವಶ

| Published : Oct 24 2025, 01:00 AM IST

ಸಾರಾಂಶ

1136 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ, 17,31,140 ರು. ನಗದು ವಶಪಡಿಸಿಕೊಂಡಿದ್ದಾರೆ.

ಬಳ್ಳಾರಿ: ದೀಪಾವಳಿ ಹಬ್ಬದಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ನಡೆಸಿರುವ ಜಿಲ್ಲಾ ಪೊಲೀಸರು 1136 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ, 17,31,140 ರು. ನಗದು ವಶಪಡಿಸಿಕೊಂಡಿದ್ದಾರೆ.ಬೆಳಕಿನ ಹಬ್ಬದಲ್ಲಿ ಜೂಜಾಟಕ್ಕೆ ಅವಕಾಶವಿಲ್ಲ ಎಂದು ತಿಳಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ, ಎಲ್ಲ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಜಾಗೃತಿ ಮೂಡಿಸಿದ್ದರಲ್ಲದೆ, ಇಸ್ಪೀಟ್ ಜೂಜಾಟದಲ್ಲಿ ತೊಡಗಿಸಿಕೊಂಡಲ್ಲಿ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.

ಆದಾಗ್ಯೂ ಜಿಲ್ಲೆಯ ನಾನಾ ಕಡೆ ಪೊಲೀಸರಿಗೆ ಕಣ್ತಪ್ಪಿಸಿ ಇಸ್ಪೀಟ್ ಆಟದಲ್ಲಿ ತೊಡಗಿಸಿಕೊಂಡಿದ್ದವರನ್ನು ಹುಡುಕಾಡಿದ ಖಾಕಿ ಪಡೆ ಈ ಸಂಬಂಧ 178 ಪ್ರಕರಣಗಳನ್ನು 1136 ಆರೋಪಿಗಳ ವಿರುದ್ಧ ದಾಖಲಿಸಿದ್ದಾರೆ. ಕಳೆದ ವರ್ಷ 836 ಆರೋಪಿಗಳ ವಿರುದ್ಧ 137 ಪ್ರಕರಣಗಳನ್ನು ದಾಖಲಿಸಿ, 16,44,665 ರು. ನಗದು ವಶಪಡಿಸಿಕೊಳ್ಳಲಾಗಿತ್ತು. 2023ರಲ್ಲಿ 660 ಆರೋಪಿಗಳ ವಿರುದ್ಧ 101 ಪ್ರಕರಣ ದಾಖಲಿಸಿಕೊಂಡು, 10,83,800 ರು. ನಗದು ವಶಪಡಿಸಿಕೊಳ್ಳಲಾಗಿತ್ತು.

ದೀಪಾವಳಿಯಲ್ಲಿ ಜೂಜಾಟಕ್ಕೆ ಆಸ್ಪದ ನೀಡುವುದಿಲ್ಲ ಎಂದು ಕಟ್ಟುನಿಟ್ಟಾಗಿ ಎಲ್ಲೆಡೆ ಸೂಚನೆ ನೀಡಲಾಗಿತ್ತು. ಇಷ್ಟಾಗಿಯೂ ಅನೇಕ ಕಡೆಗಳಲ್ಲಿ ಜೂಜಾಟ ನಡೆಯುತ್ತಿರುವುದು ಗಮನಕ್ಕೆ ಬರುತ್ತಿದ್ದಂತೆಯೇ ದಾಳಿ ನಡೆಸಿ, ಆರೋಪಿಗಳನ್ನು ವಶಪಡಿಸಿಕೊಂಡು ಕಾನೂನು ಕ್ರಮ ಜರುಗಿಸಲಾಗಿದೆ. ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಹೆಚ್ಚಿನ ಸಂಖ್ಯೆಯ ಆರೋಪಿಗಳನ್ನು ವಶಕ್ಕೆ ಪಡೆದು, ₹17.31 ಲಕ್ಷ ರು. ನಗದು ವಶಪಡಿದಿದ್ದೇವೆ. ಕಳೆದ ಬಾರಿಗಿಂತ ಹೆಚ್ಚಿನ ನಗದು ಹಾಗೂ ಪ್ರಕರಣ ಸಂಖ್ಯೆ ಹೆಚ್ಚಾಗಿದೆ ಎಂದು ಎಸ್ಪಿ ಡಾ.ಶೋಭಾರಾಣಿ ತಿಳಿಸಿದರು.