ಸಾರಾಂಶ
ಗುರು ರುದ್ರಸ್ವಾಮಿ, ಅನ್ನದಾನಯ್ಯ ಕರ್ತೃ ಗದ್ದುಗೆಗೆ ಮಹಾ ರುದ್ರಾಭಿಷೇಕ
ಕನ್ನಡಪ್ರಭ ವಾರ್ತೆ ನ್ಯಾಮತಿ
ಪಟ್ಟಣ ಸೇರದಂತೆ ತಾಲೂಕಿನ ವಿವಿದೆಡೆ ಹಾಗೂ ಚಿನ್ನಿಕಟ್ಟೆಯ ಗುರು ರುದ್ರಸ್ವಾಮಿ ಕಲ್ಮಠದಲ್ಲಿ ದೀಪಾವಳಿ ಹಬ್ಬದ ನಿಮಿತ್ತ ಅಮವಾಸ್ಯೆಯಂದು ಲಕ್ಷ್ಮೀಪೂಜೆ, ಬಲಿಪಾಡ್ಯಮಿಯಂದು ಗೋಪೂಜೆ ಸಂಭ್ರಮದಿಂದ ಆಚರಿಸಲಾಯಿತು.ತಾಲೂಕಿನ ಚಿನ್ನಿಕಟ್ಟೆ ಗುರು ರುದ್ರಸ್ವಾಮಿ ಕಲ್ಮಠದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಶುಕ್ರವಾರ ಬೆಳಗ್ಗೆ ದೀಪಾವಳಿ ಅಮಾವಾಸ್ಯೆಯ ಲಕ್ಷ್ಮೀಪೂಜೆಯನ್ನು ಶ್ರದ್ಧಾಭಕ್ತಿಯಿಂದ ನಡೆಸಲಾಯಿತು,
ಶನಿವಾರ ಬೆಳಗ್ಗೆ ಗೋ ಪೂಜೆಯನ್ನು ಸೋಗಿಲು ಗ್ರಾಮದ ಶೃತಿ ನಾಗರಾಜ್ ನೆರವೇರಿಸಿದರು.ಸಂಜೆ ಮಣ್ಣಿನ ಹಣತೆಯ ದೀಪೋತ್ಸವವನ್ನು ಆಚರಿಸಲಾಯಿತು. ನಂತರ ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಗುರು ರುದ್ರಸ್ವಾಮಿ ಕಲ್ಲಿನ ಮಠವು 987ವರ್ಷಗಳ ನಿಮಿತ್ತ ಶರೀ ಗುರು ರುದ್ರಸ್ವಾಮಿಗೆ ಮತ್ತು ಅನ್ನದಾನಯ್ಯ ಕರ್ತೃ ಗದ್ದುಗೆಗೆ ಮಹಾ ರುದ್ರಾಭಿಷೇಕ, ಪಂಚಾಮೃತಾಭಿಷೇಕದಿಂದ ಪೂಜೆ ಕೈಂಕರ್ಯಗಳು ನೆರವೇರಿದವು.
ಶುಕ್ರವಾರ ಹಾಗೂ ಶನಿವಾರದ ಎಲ್ಲಾ ಪೂಜಾ ಕೈಂಕರ್ಯಗಳು ಮಠದ ಗುರುಗಳಾದ ಶರೀ ನಿರಂಜನಸ್ವಾಮಿ ಇವರ ದಿವ್ಯ ಸಾನ್ನಿಧ್ಯದಲ್ಲಿ ಹಾಗೂ ಸೋಗಿಲು ಗ್ರಾಮದ ಶಂಕರಯ್ಯ ಶಾಸ್ತ್ರಿ ಅವರ ಪೌರೋಹಿತ್ಯದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.ಪಟ್ಟಣದ ಅಂಗಡಿ, ಮನೆ ಮನೆಗಳಲ್ಲಿ ದೀಪಾವಳಿಯ ಪೂಜಾ ಕಾರ್ಯಕ್ರಮವು ಸಂಭ್ರಮದಿಂದ ಆಚರಣೆ ಮಾಡಲಾಯಿತು. ಹಬ್ಬದ ಪ್ರಯುಕ್ತ ಪೂಜಾ ಸಾಮಾಗ್ರಿಗಳು ಸೇರಿದಂತೆ ಇತರೆ ವಸ್ತುಗಳ ಬೆಲೆ ದುಭಾರಿಯಾಗಿದ್ದರೂ ಪಟ್ಟಣದಲ್ಲಿ ಲಕ್ಷ್ಮೀ ಪೂಜೆ ಮತ್ತು ಗೋಪೂಜೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ದೀಪಾವಳಿ ಹಬ್ಬಕ್ಕೆ ಕಳೆಗಟ್ಟಿದ ಚಿಣ್ಣರ ಅಂಟಿಕೆ, ಪಿಂಟಿಕೆ ಜಾನಪದ ಹಾಡು....ದೀಪಾವಳಿ ಹಬ್ಬದಲ್ಲಿ ವಿವಿಧ ಜಾನಪದ ಕಲೆಗಳು ಅನಾವರಣಗೊಳ್ಳುತ್ತವೆ. ದೀಪಾವಳಿ ಹಬ್ಬದ ಸಮಯದಲ್ಲಿ ಚಿಕ್ಕಮಕ್ಕಳು ಹೊಸ ಬಟ್ಟೆ ಧರಿಸಿ ಕೈಯಲ್ಲಿ ತಟ್ಟೆಯನ್ನಿಡಿದು ಅದರಲ್ಲಿ ಮಣ್ಣಿನ ದೀಪವನ್ನು ಹಚ್ಚಿಕೊಂಡು ಸಂಜೆ ಮನೆಗಳಿಗೆ ತರಳಿ ‘ಅಂಟಿಕೆ ಪಿಂಟಿಕೆ ಎಂಟಗಾಳ ಜೀರಿಗೆ ಎಣ್ಣೆಬೀಡೆ ದ್ಯಾಮಾವ್ವ ದ್ಯಾಮವ್ವ’ ಎಂಬ ಜಾನಪದ ಹಾಡು ಹೇಳುತ್ತಾ ಮನೆ ಮನೆಗೆ ತರಳುವ ದೃಶ್ಯ ಹಬ್ಬಕ್ಕೆ ಸೊಗಸಾಗಿತ್ತಲ್ಲದೇ ಹಬ್ಬಕ್ಕೆ ಕಳೆ ಬಂದಿತ್ತು.