ಸಾರಾಂಶ
-ಪ್ರಾಂತ್ಯ ರೈತ ಸಂಘದ ಪದಾಧಿಕಾರಿಗಳು ತಹಸೀಲ್ದಾರರಿಗೆ ಮನವಿ
--------ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಪ್ರಾಂತ್ಯ ರೈತ ಸಂಘದ ಪದಾಧಿಕಾರಿಗಳು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.ತಾಲೂಕು ಆಡಳಿತ ಸೌಧದ ಆವರಣದಲ್ಲಿ ಮನವಿ ಸಲ್ಲಿಸಿರುವ ಅವರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆ ಮಹತ್ತರ ಪಾತ್ರವಹಿಸಿದೆ. ಹೀಗಿದ್ದರೂ ಸರ್ಕಾರ ಪೊಲೀಸ್ ಇಲಾಖೆಗೆ ಮೂಲ ಸೌಲಭ್ಯ ಕಲ್ಪಿಸುವಲ್ಲಿ ನಿರ್ಲಕ್ಷ ವಹಿಸಿದೆ. ರಾಜಕೀಯ ಹಸ್ತ ಕ್ಷೇಪದಿಂದಾಗಿ ಪೊಲೀಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ಮಿತಿ ಮೀರಿದ ಭ್ರಷ್ಟಾಚಾರಕ್ಕೆ ಕಾರಣವಾಗುತ್ತಿದೆ. ಇದರಿಂದಾಗಿ ದಕ್ಷತೆಯಿಂದಾಗಿ ಜನ ಸೇವೆ ಮಾಡಲು ಸಾಧ್ಯವಿಲ್ಲದಂತಾಗಿದೆ ಎಂದು ಆರೋಪಿಸಿದ್ದಾರೆ.
ಪೊಲೀಸ್ ಅಧಿಕಾರಿಗಳ ಬೇಡಿಕೆಗೆ ಅನುಗುಣವಾಗಿ ವರ್ಗಾವಣೆ ಮಾಡುವ ಮೂಲಕ ಸರ್ಕಾರ ಅವರಿಗೆ ಪೂರ್ಣ ಅಧಿಕಾರ ನೀಡಬೇಕು. ಎಲ್ಲಾ ಪೋಲಿಸ್ ಅಧಿಕಾರಿಗಳಿಗೆ ಸುಸಜ್ಜಿತ ವಸತಿ ಸೌಲಭ್ಯ ಕಲ್ಪಿಸುವ ಮೂಲಕ ಕುಟುಂಬಸ್ಥರಿಗೆ ಮೂಲ ಸೌಲಭ್ಯ ಒದಗಿಸಬೇಕು. ಜೀವದ ಹಂಗು ತೊರೆದು ಕೆಲಸ ಮಾಡುವ ಇವರಿಗೆ ಆಧುನಿಕ ಸಶಸ್ತ್ರಗಳನ್ನು ನೀಡಿ ಗುಣಮಟ್ಟದ ವಾಹನಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.ಮಂತ್ರಿಗಳಿಗೆ ಹಾಗೂ ಸಂಸದರಿಗೆ ನೀಡಿರುವ ಹೊಸ ವಾಹನಗಳನ್ನು ಹಿಂಪಡೆದು. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುತ್ತಿರುವ ಪೋಲಿಸ್ ಅಧಿಕಾರಿಗಳಿಗೆ ನೀಡಬೇಕು. ರಾಜ್ಯದಲ್ಲಿ ಪೊಲೀಸ್ ಠಾಣೆಯ ಮೇಲೆ ಪೊಲೀಸ್ ಅಧಿಕಾರಿಗಳ ಮೇಲೆ ಕಲ್ಲು ತೂರಾಟ ಮಾಡಿ ಕಾನೂನು ಸುವ್ಯವಸ್ಥೆ ಗೆ ಭಂಗ ತರುವ ಕಿಡಿಗೇಡಿಗಳಿಗೆ ಸೂಕ್ತ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಬೇಡ ರೆಡ್ಡಿಹಳ್ಳಿ ಬಸವರೆಡ್ಡಿ, ತಾಲೂಕು ಅಧ್ಯಕ್ಷ ಕೋನ ಸಾಗರ ಮಂಜಣ್ಣ, ಪ್ರಾಂತ್ಯ ರೈತ ಸಂಘದ ಪ್ರದಾನ ಸೂರಯ್ಯ, ಎಸ್.ಟಿ.ಚಂದ್ರಣ್ಣ, ಎಚ್.ವಿ.ವೀರಣ್ಣ, ಮೇಸ್ತ್ರಿ ಪಾಪಯ್ಯ, ಸಣ್ಣಪ್ಪ, ಡಿ.ಬಿ.ಕೃಷ್ಣ ಮೂರ್ತಿ, ತಿಪ್ಪಿರಣ ಹಟ್ಟಿ ಚಂದ್ರಣ್ಣ ಇದ್ದರು.