ಸಾರಾಂಶ
ಹೂವಿನಹಡಗಲಿ: ಕೆಲ ಏಜೆಂಟರು ರೈತರಿಂದ ಅಗತ್ಯ ದಾಖಲೆ ಪಡೆದು ಅವರೇ ಹಣ ಪಾವತಿ ಮಾಡಿ, ಬಂದ ಪರಿಹಾರ ಹಣದಲ್ಲಿ ರೈತರಿಗೆ ಅಲ್ಪಸ್ವಲ್ಪ ಹಣ ನೀಡಿ ಉಳಿದ ಮೊತ್ತವನ್ನು ಲೂಟಿ ಮಾಡುವ ಮಾಫಿಯಾ ನಡೆಯುತ್ತಿದೆ. ಕೂಡಲೇ ಪೊಲೀಸರು ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿ ಅವರ ವಿರುದ್ಧ ಪ್ರಕರಣ ದಾಖಲು ಮಾಡಬೇಕು ಎಂದು ಶಾಸಕ ಕೃಷ್ಣನಾಯ್ಕ ಅಧಿಕಾರಿಗಳಿಗೆ ತಾಕೀತು ಮಾಡಿದರು.ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೇಂದ್ರ ಸರ್ಕಾರ ರೈತರ ಅನುಕೂಲಕ್ಕಾಗಿ ಬೆಳೆ ವಿಮೆ ಯೋಜನೆ ಜಾರಿ ಮಾಡಿದೆ. ಆದರೆ, ಕೆಲ ವ್ಯಕ್ತಿಗಳು ಬೆಳೆ ವಿಮೆ ಯೋಜನೆ ದುರ್ಬಳಕೆ ಮಾಡಿಕೊಳ್ಳಲು ಮುಂದಾಗಿರುವ ಪ್ರಕರಣಗಳು ಪತ್ತೆಯಾಗುತ್ತಿವೆ. ರೈತರ ಹೆಸರಿನಲ್ಲಿ ಮಂಜೂರಾಗುವ ಲಕ್ಷಾಂತರ ಪರಿಹಾರ ಮೊತ್ತ ಮಧ್ಯವರ್ತಿಗಳ ಪಾಲಾಗುತ್ತಿದೆ. ಆದರೆ, ರೈತರಿಗೆ ಅಲ್ಪ ಪ್ರಮಾಣದಲ್ಲಿ ನೀಡುತ್ತಿದ್ದಾರೆ. ಅಂತಹ ವ್ಯಕ್ತಿಗಳ ಮಾಹಿತಿ ಸಂಗ್ರಹಿಸಿ, ಅವರ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ತನಿಖೆ ಮಾಡಿ, ಅಂತಹ ಜಾಲವನ್ನು ಪತ್ತೆ ಮಾಡಬೇಕು ಎಂದು ಸಿಪಿಐ ದೀಪಕ್ ಬೂಸರೆಡ್ಡಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಕಿರಣಕುಮಾರ ಅವರಿಗೆ ಸೂಚಿಸಿದರು.ತಾಲೂಕಿನಲ್ಲಿ ವಾಡಿಕೆಗಿಂತ ಶೇ. 60ರಷ್ಟು ಹೆಚ್ಚು ಮಳೆಯಾಗಿದೆ. ಇದರಿಂದ 215 ಹೆಕ್ಟೇರ್ ಭತ್ತ ಮತ್ತು 220 ಹೆಕ್ಟೇರ್‌ಗೂ ಅಧಿಕ ಮೆಕ್ಕೆಜೋಳ ಬೆಳೆ ಹಾನಿಯಾಗಿದೆ. ಈ ಬಾರಿ 10800 ರೈತರು ಬೆಳೆ ವಿಮೆ ಮಾಡಿಸಿದ್ದಾರೆ ಎಂದು ಕೃಷಿ ಸಹಾಯಕ ಅಧಿಕಾರಿ ಕಿರಣಕುಮಾರ್ ಸಭೆಗೆ ಮಾಹಿತಿ ನೀಡಿದರು.
ನಿಮ್ಮ ಇಲಾಖೆ ಯೋಜನೆಗಳು ರೈತರಿಗೆ ತಲುಪುವಂತೆ ಜಾಗೃತಿ ಮೂಡಿಸಬೇಕಿದೆ. ಇಲಾಖೆ ಯೋಜನೆಗಳು ಸರಿಯಾಗಿ ಅನುಷ್ಠಾನವಾಗಿಲ್ಲ. ಕೃಷಿ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಶಾಸಕ ಕೃಷ್ಣನಾಯ್ಕ ಬೇಸರ ವ್ಯಕ್ತಪಡಿಸಿದರು.ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯ ನಡುವೆ ಕೆಲಸ ಮಾಡುತ್ತಿದ್ದೇವೆ. ರೈತರ ಜಮೀನಿಗೆ ಭೇಟಿ ನೀಡಿದರೆ ಕಚೇರಿಯೇ ಖಾಲಿಯಾಗುತ್ತದೆ ಎಂದು ಕೃಷಿ ಇಲಾಖೆ ಅಧಿಕಾರಿ ಹೇಳಿದಾಗ, ನಿಮ್ಮ ಸಿಬ್ಬಂದಿ ಕೊರತೆಯಿಂದ ಅನುದಾನ ಸರಿಯಾಗಿ ಬಳಕೆ ಮಾಡದಿದ್ದರೆ ಯೋಜನೆ ಇದ್ದು ಏನು ಪ್ರಯೋಜನ ಎಂದು ಶಾಸಕರು ಪ್ರಶ್ನಿಸಿದರು.
ತೋಟಗಾರಿಕೆ ಇಲಾಖೆಯ ಕೇಂದ್ರ ಮತ್ತು ರಾಜ್ಯ ಸರ್ಕಾಗಳ ಯೋಜನೆಗಳ ಕುರಿತು ರೈತರಿಗೆ ಮಾಹಿತಿ ಕೊಡಿ, ಅವರಲ್ಲಿ ಜಾಗೃತಿ ಮೂಡಿಸಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಉತ್ತೇಜನ ನೀಡಬೇಕು ಎಂದು ಶಾಸಕರು ಹೇಳಿದರು.ಮೀನುಗಾರಿಕೆ ಇಲಾಖೆಯ ಅಡಿಯಲ್ಲಿ 8 ಕೆರೆಗಳಿವೆ. ಈ ಹಿಂದೆ ಮೀನುಗಾರ ಸಹಕಾರ ಸಂಘಗಳಿಗೆ ಟೆಂಡರ್ ನೀಡಲಾಗುತ್ತಿತ್ತು. ಆದರೆ, ಸರ್ಕಾರ ಪ್ರತಿ ಹೆಕ್ಟೇರ್ ಪ್ರದೇಶಕ್ಕೆ ₹300 ದರ ನಿಗದಿ ಮಾಡಿತ್ತು. ಕಳೆದ 3 ವರ್ಷಗಳಿಂದ ಕೆರೆಗಳ ಟೆಂಡರ್ ಪ್ರಕ್ರಿಯೆಯನ್ನು ನಿಲ್ಲಿಸಿದೆ. ತಾಲೂಕಿನಲ್ಲಿ 4 ಮೀನುಗಾರ ಸಹಕಾರ ಸಂಘಗಳಿವೆ. 2 ಸಾವಿರಕ್ಕೂ ಅಧಿಕ ಸದಸ್ಯರಿದ್ದಾರೆ ಎಂದು ಮೀನುಗಾರ ಇಲಾಖೆ ಅಧಿಕಾರಿ ಖಾಜಾ ಹುಸೇನ್ ಸಭೆಗೆ ಮಾಹಿತಿ ನೀಡಿದರು.
ಈಗ ಕೆರೆಗಳು ಏತ ನೀರಾವರಿ ಯೋಜನೆ ಹಾಗೂ ಮಳೆಯಿಂದ ಸಂಪೂರ್ಣ ತುಂಬಿವೆ. ಸರ್ಕಾರ ಯಾಕೆ ಟೆಂಡರ್ ತಡೆ ಹಿಡಿದಿಗೆ ಎನ್ನುವ ಮಾಹಿತಿ ಇಲ್ಲ. ಈ ಕುರಿತು ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸುವೆ. ಈ ಕುರಿತು ಸಂಪೂರ್ಣ ಮಾಹಿತಿ ಕೊಡಬೇಕೆಂದು ಶಾಸಕರು ಹೇಳಿದರು.ಪಟ್ಟಣದಲ್ಲಿ ಕುರಿ, ಕೋಳಿ ಮತ್ತು ಮೀನು ಮಾರಾಟಕ್ಕೆ ಪ್ರತ್ಯೇಕ ಸ್ಥಳಗಳಲ್ಲಿ ಮಾರುಕಟ್ಟೆ ಸ್ಥಾಪನೆ ಮಾಡಬೇಕಿದೆ. ಜತೆಗೆ ಮೀನು ಸಂಗ್ರಹಗಾರ, ಮೀನು ಮರಿ ಉತ್ಪಾದನೆ ಸೇರಿದಂತೆ ಇನ್ನಿತರ ಇಲಾಖೆಯ ಯೋಜನೆಗಳನ್ನು ಶೀಘ್ರದಲ್ಲೇ ಜಾರಿ ಮಾಡಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಶೋಕಾಸ್ ನೋಟಿಸ್ತಹಸೀಲ್ದಾರ್, ಕೆಆರ್‌ಐಡಿಎಲ್, ಕೈಗಾರಿಕೆ ಸೇರಿದಂತೆ ತ್ರೈಮಾಸಿಕ ಸಭೆಗೆ ಗೈರಾಗಿರುವ, ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಬೇಕು. ಅವರಿಂದ ಉತ್ತರ ಬಂದ ನಂತರದಲ್ಲಿ ಸೂಕ್ತ ಕ್ರಮಕ್ಕೆ ಶಿಫಾರಸು ಮಾಡಬೇಕು ಎಂದು ಶಾಸಕರು, ಸಭೆಯಲ್ಲಿ ಗೈರಾದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಜರುಗಿತು. ಈ ಸಭೆಯಲ್ಲಿ ತಾಪಂ ಆಡಳಿತಾಧಿಕಾರಿ, ಜಿಪಂ ಯೋಜನಾಧಿಕಾರಿ ಅಶೋಕ ತೋಟದ, ತಾಪಂ ಇಒ ಉಮೇಶ ಉಪಸ್ಥಿತರಿದ್ದರು.