ಮುಗಿದ ದೀಪಾವಳಿ : ಬಳಸಿ ಬಿಸಾಕಿರುವ ತ್ಯಾಜ್ಯ ವಿಲೇವಾರಿಯೇ ಮಹಾನಗರ ಪಾಲಿಕೆಗೆ ದೊಡ್ಡ ಸಮಸ್ಯೆ

| Published : Nov 04 2024, 12:46 AM IST / Updated: Nov 04 2024, 09:02 AM IST

ಮುಗಿದ ದೀಪಾವಳಿ : ಬಳಸಿ ಬಿಸಾಕಿರುವ ತ್ಯಾಜ್ಯ ವಿಲೇವಾರಿಯೇ ಮಹಾನಗರ ಪಾಲಿಕೆಗೆ ದೊಡ್ಡ ಸಮಸ್ಯೆ
Share this Article
  • FB
  • TW
  • Linkdin
  • Email

ಸಾರಾಂಶ

ದೀಪಾವಳಿ ಹಬ್ಬ ಮುಕ್ತಾಯಗೊಂಡಿದೆ. ಈಗ ಯಾವುದೇ ವಾರ್ಡ್‌ಗಳಿಗೆ, ಏರಿಯಾಗಳಿಗೆ ತೆರಳಿದರೂ ನಮಗೆ ಬರಮಾಡಿಕೊಳ್ಳುವುದು ಇದೇ ತ್ಯಾಜ್ಯ ತುಂಬಿದ ರಾಶಿ

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ: ಎಲ್ಲೆಡೆಯೂ ದೀಪಾವಳಿಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಆದರೆ, ಹಬ್ಬದ ನಂತರ ಬಳಸಿ ಬಿಸಾಕಿರುವ ತ್ಯಾಜ್ಯ ವಿಲೇವಾರಿಯೇ ಮಹಾನಗರ ಪಾಲಿಕೆಗೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಹಬ್ಬದ ಹಿನ್ನೆಲೆಯಲ್ಲಿ 2-3 ದಿನಗಳಲ್ಲಿ 1900 ಟನ್‌ಗೂ ಅಧಿಕ ತ್ಯಾಜ್ಯ ಸಂಗ್ರಹಗೊಂಡಿದ್ದು, ಇದರ ವಿಲೇವಾರಿಗೆ ಪೌರಕಾರ್ಮಿಕರು ಹರಸಾಹಸ ಪಡುವಂತಾಗಿದೆ.

ದೀಪಾವಳಿ ಹಬ್ಬ ಮುಕ್ತಾಯಗೊಂಡಿದೆ. ಈಗ ಯಾವುದೇ ವಾರ್ಡ್‌ಗಳಿಗೆ, ಏರಿಯಾಗಳಿಗೆ ತೆರಳಿದರೂ ನಮಗೆ ಬರಮಾಡಿಕೊಳ್ಳುವುದು ಇದೇ ತ್ಯಾಜ್ಯ ತುಂಬಿದ ರಾಶಿ. ಹಬ್ಬದ ಹಿನ್ನೆಲೆಯಲ್ಲಿ ಪೂಜೆಯ ಅಲಂಕಾರಕ್ಕೆ ಬಳಸಲಾಗಿದ್ದ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಕಿರುವುದರಿಂದಾಗಿ ಮಹಾನಗರವೇ ತ್ಯಾಜ್ಯಮಯವಾಗಿ ನಿರ್ಮಾಣವಾಗಿದೆ.

ಹಿಂದೂಗಳ ಪಾಲಿಗೆ ದೀಪಾವಳಿ ಬಹುದೊಡ್ಡ ಹಬ್ಬ. ಎಲ್ಲ ಮನೆ, ಅಂಗಡಿ, ಮುಂಗಟ್ಟುಗಳಲ್ಲಿ ಬಣ್ಣಬಣ್ಣದ ಹೂವು, ಬಾಳೆ ಗೊನೆ, ತಳಿರು-ತೋರಣಗಳಿಂದ ಶೃಂಗರಿಸಿ ಪೂಜೆ ಸಲ್ಲಿಸುವುದು ಮೊದಲಿನಿಂದ ನಡೆದುಕೊಂಡು ಬಂದಿರುವ ಪದ್ಧತಿ. ಅದರಂತೆ ಗುರುವಾರ, ಶುಕ್ರವಾರ ಮನೆಗಳಲ್ಲಿ ಪೂಜೆ ಸಲ್ಲಿಸಿದರೆ, ಶುಕ್ರವಾರ-ಶನಿವಾರ ಅಂಗಡಿಗಳಲ್ಲಿ ಪೂಜೆ ಸಲ್ಲಿಸಲಾಯಿತು. ಪೂಜೆಯ ಬಳಿಕ ತ್ಯಾಜ್ಯವನ್ನೆಲ್ಲ ಕಸದ ತೊಟ್ಟಿಗಳು, ಇನ್ನು ಕೆಲವೆಡೆ ರಸ್ತೆಯ ಪಕ್ಕದ ಪುಟ್‌ಪಾತ್‌ ಮೇಲೆ ಎಸೆಯಲಾಗಿದೆ. ಕಳೆದ 2-3 ದಿನಗಳಿಂದ ಬಿಡುವಿಲ್ಲದೇ ಕೆಲಸ ಮಾಡಿದ ಪೌರಕಾರ್ಮಿಕರು ಭಾನುವಾರವೂ ಬೆಳಗ್ಗೆ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಂಡರಾದರೂ ಪೂರ್ಣಪ್ರಮಾಣದ ತ್ಯಾಜ್ಯ ವಿಲೇವಾರಿಗೊಳಿಸಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಮಹಾನಗರದ ಬಹುತೇಕ ಕಡೆಗಳಲ್ಲಿ ತ್ಯಾಜ್ಯದ ರಾಶಿಯು ಕಣ್ಣಿಗೆ ರಾರಾಜಿಸುತ್ತಿದ್ದವು.

ಎಲ್ಲೆಲ್ಲಿ ತ್ಯಾಜ್ಯ?

ಇಲ್ಲಿನ ಜನನಿಬಿಡ ಪ್ರದೇಶಗಳಾದ ದಾಜಿಬಾನ್‌ ಪೇಟೆಯ ಮಾರುಕಟ್ಟೆ ಪ್ರದೇಶ, ರಾಣಿ ಚೆನ್ನಮ್ಮ ವೃತ್ತದ ಬಳಿ, ಸಾಯಿ ಮಂದಿರ, ಸಬ್‌ಅರ್ಬನ್‌ ಪೊಲೀಸ್ ಠಾಣೆ, ಕಮರಿಪೇಟೆ, ಚನ್ನಪೇಟ, ಬಿಎಸ್‌ಎನ್‌ಎಲ್‌ ಕಚೇರಿ ರಸ್ತೆ, ಸಿಬಿಟಿ ಅಕ್ಕಪಕ್ಕ, ಹೊಸೂರು, ಸಿದ್ದೇಶ್ವರ ರಸ್ತೆ, ಮ್ಯಾದಾರ ಓಣಿ, ಮೂರುಸಾವಿರ ಮಠದ ಅಕ್ಕಪಕ್ಕ, ಉಣಕಲ್ಲ ಕ್ರಾಸ್, ವಿದ್ಯಾನಗರ, ನವನಗರ, ಧಾರವಾಡದ ಹಲವು ಕಡೆಗಳಲ್ಲಿ ಸಮರ್ಪಕ ತ್ಯಾಜ್ಯ ವಿಲೇವಾರಿಯಾಗದಿರುವುದು ಭಾನುವಾರ ಕಂಡುಬಂದಿತು.

200 ಟನ್‌ ಹೆಚ್ಚುವರಿ ಕಸ

ಹಬ್ಬ ಹೊರತುಪಡಿಸಿ ನಿತ್ಯವೂ ಹುಬ್ಬಳ್ಳಿಯಲ್ಲಿ 250-300 ಟನ್‌ ಹಾಗೂ ಧಾರವಾಡದಲ್ಲಿ 120-150 ಟನ್‌ ತ್ಯಾಜ್ಯ ಸೇರಿ ಹು-ಧಾ ಮಹಾನಗರದಲ್ಲಿ 400ರಿಂದ 450 ಟನ್‌ ತ್ಯಾಜ್ಯ ಸಂಗ್ರಹವಾಗುತ್ತದೆ. ಇನ್ನು ಹಬ್ಬದ ವೇಳೆ ಹುಬ್ಬಳ್ಳಿಯಲ್ಲಿ 100ರಿಂದ 150 ಟನ್‌ ಹಾಗೂ ಧಾರವಾಡದಲ್ಲಿ 50ರಿಂದ 70 ಟನ್‌ ತ್ಯಾಜ್ಯ ಸಂಗ್ರಹಗೊಳ್ಳುತ್ತದೆ. ಹಬ್ಬದ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 200 ಟನ್‌ಗೂ ಅಧಿಕ ತ್ಯಾಜ್ಯ ಸಂಗ್ರಹಗೊಂಡಿದೆ. ಒಟ್ಟಾರೆ ಮೂರು ದಿನಗಳಲ್ಲಿ 1900 ಟನ್‌ಗೂ ಅಧಿಕ ತ್ಯಾಜ್ಯ ಸಂಗ್ರಹಗೊಂಡಿದೆ.

ಸಮರ್ಪಕ ತ್ಯಾಜ್ಯ ವಿಲೇವಾರಿಗೆ ಕ್ರಮ

ದೀಪಾವಳಿ ಹಿನ್ನೆಲೆಯಲ್ಲಿ ಹು-ಧಾ ಮಹಾನಗರದಲ್ಲಿ ನಿತ್ಯದ ತ್ಯಾಜ್ಯದೊಂದಿಗೆ 200 ಟನ್‌ಗೂ ಅಧಿಕ ಹೆಚ್ಚುವರಿ ತ್ಯಾಜ್ಯ ಸಂಗ್ರಹಗೊಂಡಿದೆ. ಇದರಿಂದಾಗಿ ಕೆಲವು ಕಡೆಗಳಲ್ಲಿ ಸಮರ್ಪಕ ತ್ಯಾಜ್ಯ ವಿಲೇವಾರಿಯಲ್ಲಿ ಕೊಂಚ ವಿಳಂಬವಾಗಿದೆ. ಸೋಮವಾರ ಮಧ್ಯಾಹ್ನದೊಳಗೆ ಮಹಾನಗರದಲ್ಲಿ ಸಂಗ್ರಹಗೊಂಡಿರುವ ಎಲ್ಲ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಮಲ್ಲಿಕಾರ್ಜುನ್ ಬಿ.ಎಂ. ಅವರು ''''ಕನ್ನಡಪ್ರಭ''''ಕ್ಕೆ ತಿಳಿಸಿದರು.

ಅಂದವೇ ಹಾಳು

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ವಾರ್ಡ್‌ನಲ್ಲಿ ಎಲ್ಲೆಂದರಲ್ಲಿ ಬಾಳೆಯ ಗೊನೆ, ಕಬ್ಬಿನ ಸಿಪ್ಪೆ, ಬಗೆಬಗೆಯ ಹೂವಿನ ತ್ಯಾಜ್ಯ ಎಸೆದಿರುವುದರಿಂದ ನಗರದ ಅಂದವೇ ಹಾಳಾಗಿದೆ. ಆದಷ್ಟು ಬೇಗನೇ ತ್ಯಾಜ್ಯ ವಿಲೇವಾರಿಗೆ ಪಾಲಿಕೆ ಕ್ರಮ ಕೈಗೊಳ್ಳಲಿ.

ಸಂಯುಕ್ತಾ ಮಡಗಿ ಹುಬ್ಬಳ್ಳಿ ನಿವಾಸಿ

ಹೆಚ್ಚುವರಿ ಕೆಲಸ

ಕಳೆದ ಮೂರು ದಿನಗಳಿಂದ ನಮಗೆ ಸ್ವಲ್ಪವೂ ಬಿಡುವಿಲ್ಲದಂತಾಗಿದೆ. ಹಬ್ಬಗಳು ಬಂದರೆ ಯಾಕಾಗಿ ಬರುತ್ತವೆಯೋ ಎನ್ನುವಂತಾಗಿದೆ. ಎಲ್ಲರೂ ಹಬ್ಬದಲ್ಲಿ ಕುಟುಂಬದೊಂದಿಗೆ ಕಾಲ ಕಳೆದರೆ ನಾವು ಹೆಚ್ಚುವರಿ ತ್ಯಾಜ್ಯ ವಿಲೇವಾರಿಗೆ ಕಾಲ ಕಳೆಯುವಂತಾಗಿದೆ.

ದುರ್ಗವ್ವ, ಸುಮಿತ್ರಾ, ಪೌರಕಾರ್ಮಿಕರು