ಬಮೂಲ್ ಚುನಾವಣಾ ಅಖಾಡಕ್ಕೆ ಡಿಕೆಸು ಎಂಟ್ರಿ!

| N/A | Published : May 18 2025, 01:24 AM IST / Updated: May 18 2025, 05:46 AM IST

ಸಾರಾಂಶ

  ಬಮೂಲ್ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಇದೇ ಮೊದಲ ಬಾರಿ ಡಿಸಿಎಂ ಡಿ.ಕೆ.ಶಿವಕುಮಾರ್ ಸಹೋದರ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಸಿದ್ದು, ಜಿಲ್ಲೆಯಲ್ಲಿ ಹಾಲಿನ ರಾಜಕಾರಣ ರಂಗೇರುವಂತೆ ಮಾಡಿದೆ.

ಚನ್ನಪಟ್ಟಣ: ಬಮೂಲ್ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಇದೇ ಮೊದಲ ಬಾರಿ ಡಿಸಿಎಂ ಡಿ.ಕೆ.ಶಿವಕುಮಾರ್ ಸಹೋದರ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಸಿದ್ದು, ಜಿಲ್ಲೆಯಲ್ಲಿ ಹಾಲಿನ ರಾಜಕಾರಣ ರಂಗೇರುವಂತೆ ಮಾಡಿದೆ.

ಕಳೆದ ಲೋಕಸಭಾ ಚುನಾವಣೆ ಸೋಲಿನ ಬಳಿಕ ಚುನಾವಣಾ ರಾಜಕೀಯದಿಂದ ವಿಶ್ರಾಂತಿ ತೆಗೆದುಕೊಂಡಿದ್ದ ಡಿ.ಕೆ.ಸುರೇಶ್ ಬಮೂಲ್ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಬಮೂಲ್ ಅಖಾಡಕ್ಕೆ ಡಿಕೆಎಸ್ ಕುಟುಂಬದ ಎಂಟ್ರಿಯೊಂದಿಗೆ ಜಿಲ್ಲೆಯ ಹಾಲಿನ ರಾಜಕಾರಣ ಈಗ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.

ಅವಿರೋಧ ಆಯ್ಕೆ ಬಹುತೇಕ ಖಚಿತ:

ಕನಕಪುರ ತಾಲೂಕಿನಿಂದ ಬಮೂಲ್ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧೆ ಬಯಸಿ ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಸಿದ್ದಾರೆ. ತಾಲೂಕಿನ ಎಲ್ಲ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಡಿಕೆಎಸ್ ಕುಟುಂಬದ ತೀರ್ಮಾನವೇ ಅಂತಿಮ. ಡೈರಿ ಆಡಳಿತ ಮಂಡಳಿಗಳು ಕಾಂಗ್ರೆಸ್ ತೆಕ್ಕೆಯಲಿಯೇ ಇವೆ. ಇಲ್ಲಿಯವರೆಗೆ ಕನಕಪುರದಿಂದ ಸುರೇಶ್ ಹೊರತುಪಡಿಸಿ ಮತ್ಯಾರು ನಾಮಪತ್ರ ಸಲ್ಲಿಸಿಲ್ಲ. ಹೀಗಾಗಿ ಸುರೇಶ್ ಅವಿರೋಧ ಆಯ್ಕೆ ಬಹುತೇಕ ಖಚಿತ ಎನ್ನಲಾಗಿದೆ.

ಕೆಎಂಎಫ್‌ನತ್ತ ಹೆಜ್ಜೆ:

ಲೋಕಸಭಾ ಚುನಾವಣೆಯಲ್ಲಿ ಸೋಲನುಭವಿಸಿದ ನಂತರ ಡಿ.ಕೆ.ಸುರೇಶ್ ಚುನಾವಣಾ ರಾಜಕಾರಣದಿಂದ ದೂರ ಉಳಿದ್ದಿದ್ದರು. ಆದರೆ, ಕಳೆದ ಕೆಲ ತಿಂಗಳಿನಿಂದ ಡಿ.ಕೆ.ಸುರೇಶ್ ಚಿತ್ತ ಕೆಎಂಎಫ್‌ನತ್ತ ನೆಟ್ಟಿದ್ದು, ಸುರೇಶ್ ಕೆಎಂಎಫ್ ಅಧ್ಯಕ್ಷರಾಗುತ್ತಾರೆಂಬ ಚರ್ಚೆ ಜಿಲ್ಲೆಯಲ್ಲಿ ಚಾಲ್ತಿಗೆ ಬಂದಿತ್ತು. ಇದೀಗ ಉಮೇದುವಾರಿಕೆ ಸಲ್ಲಿಸಿದ್ದು ಈ ಚರ್ಚೆಗೆ ಸ್ಪಷ್ಟತೆ ದೊರಕಿದೆ.

ಚುನಾವಣೆ ಆಯ್ಕೆ ಮಾಡಿಕೊಂಡ ಡಿಕೆಸು:

ರಾಜ್ಯದ ಪ್ರತಿಷ್ಠಿತ ಸಹಕಾರ ಸಂಸ್ಥೆ ಕರ್ನಾಟಕ ಹಾಲು ಮಹಾಮಂಡಲ( ಕೆಎಂಎಫ್)ದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಲು ಎರಡು ಮಾರ್ಗಗಳಿವೆ. ಒಂದು ರಾಜ್ಯ ಸರ್ಕಾರದಿಂದ ಕೆಎಂಎಫ್ ನಿರ್ದೇಶಕರಾಗಿ ನಾಮನಿರ್ದೇಶನಗೊಳ್ಳುವುದು. ಇನ್ನೊಂದು ಮಹಾಮಂಡಲದ ವ್ಯಾಪ್ತಿಯಲ್ಲಿರುವ ಹಾಲು ಒಕ್ಕೂಟಗಳಿಂದ ಚುನಾಯಿತ ಪ್ರತಿನಿಧಿಯಾಗಿ ಕೆಎಂಎಫ್ ನಿರ್ದೇಶಕರಾಗಿ ಆ ಮೂಲಕ ಅಧ್ಯಕ್ಷರಾಗುವುದು. ಆದರೆ, ಈ ಎರಡು ಆಯ್ಕೆಗಳಲ್ಲಿ ಚುನಾವಣೆ ಮೂಲಕ ಅಧ್ಯಕ್ಷರಾಗುವ ಮಾರ್ಗವನ್ನು ಸುರೇಶ್ ಆಯ್ದುಕೊಂಡಿದ್ದಾರೆ.

ಎರಡು ವರ್ಷದ ವಿಶ್ರಾಂತಿ ಬಳಿಕ ಕಣಕ್ಕೆ:

ಕಳೆದ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಡಾ.ಮಂಜುನಾಥ್ ಎದುರು ಪರಾಭವಗೊಂಡ ನಂತರ ಸುರೇಶ್ ಚುನಾವಣಾ ರಾಜಕೀಯದಿಂದ ವಿಶ್ರಾಂತಿ ಪಡೆದಿದ್ದರು. ಚನ್ನಪಟ್ಟಣ ವಿಧಾನಸಭಾ ಉಪಚುನಾಣೆಯಲ್ಲಿ ಸ್ಪರ್ಧಿಸುವಂತೆ ಸಾಕಷ್ಟು ಒತ್ತಡವಿದ್ದರೂ ಸಹ ಜನ ನನಗೆ ವಿಶ್ರಾಂತಿ ನೀಡಿದ್ದಾರೆ ಎಂದು ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸಿದರು. ಇದೀಗ ಬಮೂಲ್ ನಿರ್ದೇಶಕ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಿದ್ದಾರೆ. ಕೆಎಂಎಫ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸುರೇಶ್ ಅದಕ್ಕಾಗಿಯೇ ಬಮೂಲ್ ಅಖಾಡಕ್ಕೆ ಇಳಿದಿದ್ದಾರೆ ಎಂದು ಡಿ.ಕೆ.ಸುರೇಶ್ ಆಪ್ತಮೂಲಗಳು ತಿಳಿಸುತ್ತಿವೆ.

ಆರು ತಿಂಗಳಿಂದ ತಯಾರಿ:

ಹಾಲು ಒಕ್ಕೂಟದ ಚುನಾವಣೆಗೆ ಸ್ಪರ್ಧಿಸಲು ಮೊದಲು ಹಾಲು ಉತ್ಪಾದಕರಾಗಿರಬೇಕು. ತಮ್ಮ ಗ್ರಾಮದ ಹಾಲು ಉತ್ಪಾದಕ ಸಹಕಾರ ಸಂಘಕ್ಕೆ ಕನಿಷ್ಠ ೧೮೦ ದಿನ ಹಾಲು ಪೂರೈಸಿರಬೇಕು. ಗ್ರಾಮದ ಡೈರಿ ನಿರ್ದೇಶಕರಾಗಿ ಆಯ್ಕೆಯಾಗಿ ಬಳಿಕ ಅಲ್ಲಿಂದ ಬಮೂಲ್ ಚುನಾವಣೆಯಲ್ಲಿ ಸ್ಪರ್ಧೆಮಾಡಲು ಡೆಲಿಗೇಷನ್‌ಫಾರಂ( ಪ್ರತಿನಿಧಿತ್ವ ಪತ್ರ) ಪಡೆದು ಸ್ಪರ್ಧೆ ಮಾಡಬೇಕು. ಬಳಿಕ ಬಮೂಲ್‌ನಿಂದ ಕೆಎಂಎಫ್‌ಗೆ ಎಂಟ್ರಿ ಪಡೆಯಬೇಕು. ಕೋಡಿಹಳ್ಳಿ ಡೈರಿಗೆ ೧೮೦ ದಿನ ಹಾಲು ಪೂರೈಸಿ ಆಡಳಿತ ಮಂಡಳಿಯ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಆ ಮೂಲಕ ಇದೀಗ ಕನಕಪುರದಿಂದ ಬಮೂಲ್ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ.

ಮೊದಲೇ ವರದಿ ಪ್ರಕಟಿಸಿದ್ದ ಕನ್ನಡಪ್ರಭ!

ಡಿ.ಕೆ.ಸುರೇಶ್ ಕೆಎಂಎಫ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ವರದಿಯನ್ನು ಕನ್ನಡಪ್ರಭ ಈ ಮೊದಲೇ ಪ್ರಕಟಿಸಿತ್ತು. ಸಹಕಾರ ಕ್ಷೇತ್ರದತ್ತ ಮಾಜಿ ಸಂಸದ ಡಿಕೆಸು ಚಿತ್ತ ಶೀರ್ಷಿಕೆಯಡಿ ಮೇನಲ್ಲಿ ಬಮೂಲ್ ಚುನಾವಣೆಗೆ ದಿನಾಂಕ ನಿಗದಿಯಾದ ಬೆನ್ನಲ್ಲೇ ಫೆ.೭ರಂದು ಪತ್ರಿಕೆ ವಿಶೇಷ ವರದಿ ಪ್ರಕಟಿಸಿತ್ತು. ಅದರಲ್ಲಿ ಬಮೂಲ್ ಚುನಾವಣೆಯಲ್ಲಿ ಡಿ.ಕೆ.ಸುರೇಶ್ ಸ್ಪರ್ಧಿಸುವ ಮೂಲಕ ಬಮೂಲ್ ಪ್ರತಿನಿಧಿಯಾಗಿ ಕೆಎಂಎಫ್ ಅಧ್ಯಕ್ಷ ಸ್ಥಾನ ಅಲಂಕರಿಸಲು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿಸಿತ್ತು. 

Read more Articles on