ರಾಜಕೀಯ ವಿರೋಧಿಗಳ ಬೇಟೆಗೆ ಡಿಕೆಶಿ ರಣತಂತ್ರ

| Published : Mar 23 2024, 01:00 AM IST

ಸಾರಾಂಶ

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ರಾಜಕೀಯ ವೈರಿಯಾಗಿರುವ ಜೆಡಿಎಸ್ ಪಕ್ಷ ಬಿಜೆಪಿಯೊಂದಿಗೆ ಕೈ ಜೋಡಿಸಿರುವ ಕಾರಣ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕ್ಷೇತ್ರದಲ್ಲಿ ರಾಜಕೀಯ ವಿರೋಧಿಗಳನ್ನು ಬೇಟೆಯಾಡಲು ಯಾವ ರಣತಂತ್ರ ಹೂಡಲಿದ್ದಾರೆ ಎಂಬ ಕುತೂಹಲ ಮೂಡಿಸಿದೆ.

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ರಾಜಕೀಯ ವೈರಿಯಾಗಿರುವ ಜೆಡಿಎಸ್ ಪಕ್ಷ ಬಿಜೆಪಿಯೊಂದಿಗೆ ಕೈ ಜೋಡಿಸಿರುವ ಕಾರಣ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕ್ಷೇತ್ರದಲ್ಲಿ ರಾಜಕೀಯ ವಿರೋಧಿಗಳನ್ನು ಬೇಟೆಯಾಡಲು ಯಾವ ರಣತಂತ್ರ ಹೂಡಲಿದ್ದಾರೆ ಎಂಬ ಕುತೂಹಲ ಮೂಡಿಸಿದೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ತನ್ನ ಸಹೋದರ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ವಿರುದ್ಧ ಬಿಜೆಪಿ - ಜೆಡಿಎಸ್ ಮೈತ್ರಿಕೂಟ ಅಭ್ಯರ್ಥಿಯಾಗಿ ಡಾ.ಸಿ.ಎನ್ .ಮಂಜುನಾಥ್ ಸ್ಪರ್ಧೆ ಮಾಡಿರುವ ಕಾರಣ ಚುನಾವಣೆ ಪ್ರತಿಷ್ಠೆಯ ಕಣವಾಗಿದ್ದು, ಡಿ.ಕೆ.ಶಿವಕುಮಾರ್ ಅವರಿಗೆ ಸಹೋದರನನ್ನು ಗೆಲ್ಲಿಸಿಕೊಳ್ಳುವ ಕಠಿಣ ಸವಾಲು ಎದುರಾಗಿದೆ.

ರಾಜಕೀಯ ಭವಿಷ್ಯದ ದೃಷ್ಟಿಯಿಂದ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಗೆಲುವು ಡಿ.ಕೆ.ಶಿವಕುಮಾರ್ ಪಾಲಿಗೆ ಅನಿವಾರ್ಯವಾಗಿದೆ. ಮುಖ್ಯಮಂತ್ರಿ ಹುದ್ದೆಯ ಕನಸಿಗೆ ಡಿ.ಕೆ.ಸುರೇಶ್ ಗೆಲುವು ಬೂಸ್ಟರ್ ನೀಡಿದಂತಾಗುತ್ತದೆ. ಹಾಗಾಗಿಯೇ ಸಹೋದರನ ಗೆಲುವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ.

ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕರಾಗಿ ಡಾ.ಸಿ.ಎನ್ .ಮಂಜುನಾಥ್ ರವರು ವೈದ್ಯಕೀಯ ಕ್ಷೇತ್ರದಲ್ಲಿ ಹೆಸರು ಮಾಡಿದವರು. ಅವರನ್ನು ದೇವೇಗೌಡರ ಕುಟುಂಬದ ಸದಸ್ಯ ಎಂಬ ಅಂಶವನ್ನು ಹೊರತುಪಡಿಸಿ ಅವರನ್ನು ಟೀಕಿಸಲು ಕಾಂಗ್ರೆಸ್ ಬಳಿ ಅಸ್ತ್ರಗಳೇ ಇಲ್ಲ. ಹೀಗಾಗಿ ಡಿ.ಕೆ.ಶಿವಕುಮಾರ್ ಅವರು ನಾಮಪತ್ರ ಸಲ್ಲಿಕೆ ನಂತರ ಕ್ಷೇತ್ರದಲ್ಲಿ ಸಕ್ರಿಯವಾಗಿ ಪ್ರಚಾರದಲ್ಲಿ ತೊಡಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ನೆರವು ನೀಡಿದ್ದವರೆ ವಿರೋಧಿ ಪಾಳಯದಲ್ಲಿ:

ಈ ಕ್ಷೇತ್ರದಲ್ಲಿ 2013ರಲ್ಲಿ ನಡೆದ ಉಪಚುನಾವಣೆ, 2014 ಹಾಗೂ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸಹೋದರ ಡಿ.ಕೆ.ಸುರೇಶ್ ಅವರನ್ನು ಗೆಲ್ಲಿಸಿಕೊಳ್ಳಲು ಡಿ.ಕೆ.ಶಿವಕುಮಾರ್ ರಾಜಕೀಯ ತಂತ್ರಗಳನ್ನು ಹೆಣೆದು ಅದರಲ್ಲಿ ಯಶಸ್ಸು ಕೂಡ ಸಾಧಿಸಿದ್ದರು.

ಈ ಬಾರಿಯ ಚುನಾವಣೆಯಲ್ಲಿ ಡಿ.ಕೆ.ಸುರೇಶ್ ಏಕಾಂಗಿಯಾಗಿ ಕಣದಲ್ಲಿದ್ದಾರೆ. ಆದರೆ, ಮೊದಲ ಚುನಾವಣೆಗಳಲ್ಲಿ ಸುರೇಶ್ ಗೆಲುವಿಗೆ ಹೆಚ್ಚಿನ ಶಕ್ತಿ ತುಂಬಿದ್ದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಹಾಗೂ ಕಳೆದ ಚುನಾವಣೆಯಲ್ಲಿ ಬೆಂಬಲಿಸಿದ್ದ ಜೆಡಿಎಸ್ ವರಿಷ್ಠ ಕುಮಾರಸ್ವಾಮಿರವರು ವಿರೋಧಿ ಪಾಳಯದಲ್ಲಿ ಒಟ್ಟಾಗಿದ್ದಾರೆ.

2013ರ ಉಪಚುನಾವಣೆ ವೇಳೆ ಕಾಂಗ್ರೆಸ್ ನಲ್ಲಿ ತಮ್ಮ ಕಡು ವಿರೋಧಿ ಎಂದೇ ಪರಿಗಣಿಸಲ್ಪಟ್ಟಿದ್ದ ಮಾಜಿ ಸಂಸದೆ ತೇಜಸ್ವಿನಿ ಗೌಡ ಹಾಗೂ ಸಮಾಜವಾದಿ ಪಕ್ಷದ ಶಾಸಕರಾಗಿದ್ದ ಸಿ.ಪಿ.ಯೋಗೇಶ್ವರ ಅವರ ಜತೆ ಶಿವಕುಮಾರ್ ಸಂಧಾನ ನಡೆಸಿದ್ದರು. ಅಲ್ಲದೆ ಸೋದರನ ವಿಜಯಕ್ಕಾಗಿ ರಾಜಕೀಯ ವೈರಿಗಳೊಂದಿಗೆ ಹೊಂದಾಣಿಕೆಗೆ ಸಿದ್ದರಾಗಿದ್ದರು.

ಆಗ ತೇಜಸ್ವಿನಿ ಗೌಡ ಹಾಗೂ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ನಿಂದ ಸ್ಪರ್ಧಿಸಲು ಯಾರಿಗೆ ಅವಕಾಶ ಲಭಿಸಿದರೂ ಪರಸ್ಪರ ನೆರವು ನೀಡುವ ಒಪ್ಪಂದಕ್ಕೆ ಬಂದಿದ್ದರು. ಡಿ.ಕೆ.ಸುರೇಶ್ ಅವರಿಗೆ ಕಾಂಗ್ರೆಸ್ ಟಿಕೆಟ್ ಖಾತ್ರಿಯಾದ ನಂತರ ತೇಜಸ್ವಿನಿ ಹಾಗೂ ಯೋಗೇಶ್ವರ ಜತೆ ಮಾತುಕತೆ ನಡೆಸಿ ನೆರವು ಪಡೆದುಕೊಂಡಿದ್ದರು.

ಉಪಚುನಾವಣೆ ಸಮಯದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರಿಗೂ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಕುಟುಂಬ ವರ್ಗವನ್ನು ಮಣಿಸುವ ಹಾಗೂ ತಾವು ಮುಖ್ಯಮಂತ್ರಿಯಾದ ನಂತರ ಎದುರಿಸಿದ ಮೊದಲ ಚುನಾವಣೆಯ ಗೆಲ್ಲುವ ಜವಾಬ್ದಾರಿ ಅವರ ಮೇಲಿತ್ತು.

ಅದೇ ರೀತಿ ತಮ್ಮ ರಾಜಕೀಯ ಕಡು ವೈರಿ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಒಕ್ಕಲಿಗ ಪ್ರಾಬಲ್ಯದ ಜಿಲ್ಲೆಯಲ್ಲಿ ಸೋಲುಂಟು ಮಾಡಿ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವ ಬಯಕೆ ಡಿ.ಕೆ.ಶಿವಕುಮಾರ್ ಅವರದ್ದಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಯತ್ನ ನಡೆಸಿದ ಅವರು ಶತ್ರುಗಳನ್ನು ಮಿತ್ರರನ್ನಾಗಿ ಅಪ್ಪಿಕೊಂಡಿದ್ದರು.

ಸೋದರನನ್ನು ಗೆಲ್ಲಿಸಿಕೊಳ್ಳುವಲ್ಲಿ ಸಫಲ :

ಕುಮಾರಸ್ವಾಮಿ ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರಿಂದ ಎದುರಾದ ಈ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾದ ಅನಿತಾರವರು ಡಿ.ಕೆ.ಸುರೇಶ್ ವಿರುದ್ಧ ಪರಾಭವಗೊಂಡರು. 2014ರ ಸಾರ್ವತ್ರಿಕ ಚುನಾವಣೆಯಲ್ಲಿಯೂ ಡಿ.ಕೆ.ಶಿವಕುಮಾರ್ ಅದೇ ರಣತಂತ್ರ ರೂಪಿಸಿ ಸಹೋದರನನ್ನು ಗೆಲ್ಲಿಸಿಕೊಳ್ಳುವಲ್ಲಿ ಸಫಲರಾದರು.

ಈ ಎರಡು ಚುನಾವಣೆಗಳಲ್ಲಿ ಸಿ.ಪಿ.ಯೋಗೇಶ್ವರ್ ರಾಜಕೀಯ ಹಗೆತನ ಮರೆತು ಡಿ.ಕೆ.ಸುರೇಶ್ ಗೆಲುವಿಗೆ ಶ್ರಮಿಸಿದ್ದರು. ಆನಂತರದ ರಾಜಕೀಯ ಬೆಳವಣಿಗೆಯಲ್ಲಿ ಡಿಕೆ ಸಹೋದರರ ನಡುವಿನ ಬಾಂಧವ್ಯ ಮುರಿದು ಬಿದ್ದಿತು. 2019ರ ಚುನಾವಣೆಯಲ್ಲಿ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿದ್ದ ಡಿ.ಕೆ.ಸುರೇಶ್ ವಿರುದ್ಧ ಸಿ.ಪಿ.ಯೋಗೇಶ್ವರ್ ಅವರೇ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ವೇದಿಕೆಯೂ ಅಣಿಯಾಗುತ್ತಿತ್ತು. ಅಂತಿಮ ಕ್ಷಣದಲ್ಲಿ ಅಶ್ವತ್ ನಾರಾಯಣಗೌಡ ಹುರಿಯಾಳಾಗಿ ಪರಾಭವಗೊಂಡರು.

ಈಗ ಡಿ.ಕೆ.ಸಹೋದರರ ವಿರುದ್ಧ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿರುವ ಸಿ.ಪಿ.ಯೋಗೇಶ್ವರ್ ರವರು ತನ್ನ ರಾಜಕೀಯ ಬದ್ಧ ವೈರಿಯಾದ ಕುಮಾರಸ್ವಾಮಿ ಅವರೊಂದಿಗೆ ಕೈಜೋಡಿಸಿದ್ದಾರೆ. ಟಿಕೆಟ್ ನಿರಾಕರಿಸಿ ಡಾ.ಸಿ.ಎನ್ .ಮಂಜುನಾಥ್ ಗೆಲುವಿಗಾಗಿ ಬೆನ್ನಿಗೆ ನಿಂತಿದ್ದಾರೆ.ಬಾಕ್ಸ್‌.............

ದಳ-ಕಮಲ ಮುಖಂಡರು ಕಾರ್ಯಕರ್ತರಿಗೆ ಗಾಳ:

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿಯೇ ಯೋಗೇಶ್ವರ್ ಶಕ್ತಿ ಕುಂದಿಸಲು ಡಿ.ಕೆ.ಶಿವಕುಮಾರ್ ಹೂಡಿದ ತಂತ್ರಗಳೆಲ್ಲವು ಫಲ ನೀಡಿದೆ. ಯೋಗೇಶ್ವರ್ ಬೆಂಬಲಿಗರನ್ನು ಸೆಳೆಯುವಲ್ಲಿ ಡಿಕೆ ಸಹೋದರರು ಯಶಸ್ವಿಯಾಗಿದ್ದಾರೆ. ಉಳಿದ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು, ಕಾರ್ಯಕರ್ತರು ಅವರ ಗಾಳಕ್ಕೆ ಸಿಲುಕಿ ಕಾಂಗ್ರೆಸ್ ಸೇರುತ್ತಿದ್ದಾರೆ. ಬಹಿರಂಗವಾಗಿ ಅಲ್ಲದಿದ್ದರು ಪರದೆ ಹಿಂದೆಯೇ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಪರವಾಗಿ ಕೆಲಸ ಮಾಡುವ ಆಶ್ವಾಸನೆ ಕೆಲವರು ನೀಡಿದ್ದಾರೆ ಎನ್ನಲಾಗಿದೆ.

ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ, ಯಾರೂ ಶಾಶ್ವತ ಮಿತ್ರರಲ್ಲ ಎಂಬುದು ಕಳೆದ ಚುನಾವಣೆಯಲ್ಲಿನ ಕಾಂಗ್ರೆಸ್ - ಜೆಡಿಎಸ್ ಹಾಗೂ ಈ ಚುನಾವಣೆಯಲ್ಲಿ ಬಿಜೆಪಿ - ಜೆಡಿಎಸ್ ಹೊಂದಾಣಿಕೆಯಿಂದ ಸಾಬೀತಾಗಿದೆ. ಈ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಬಿಜೆಪಿ ಬೆಂಬಲಕ್ಕೆ ನಿಂತಿರುವುದರಿಂದ ಕಾಂಗ್ರೆಸ್ ನೊಂದಿಗೆ ನೇರ ಹಣಾಹಣಿ ನಡೆಯುತ್ತಿದೆ.

ಚುನಾವಣೆಗೆ ಇನ್ನೂ ಒಂದು ತಿಂಗಳು ಬಾಕಿ ಉಳಿದಿದೆ. ಚುನಾವಣೆ ಎಂದರೆ ಯುದ್ಧರಂಗ. ಕೆಲವು ತಂತ್ರ- ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಹೇಳುವ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಅವರನ್ನು ಮತ್ತೊಮ್ಮೆ ಗೆಲ್ಲಿಸಿಕೊಳ್ಳಲು ಯಾವ ಬತ್ತಳಿಕೆ ಪ್ರಯೋಗ ಮಾಡುತ್ತಾರೆ ಎಂಬುದೇ ಕುತೂಹಲ ಮೂಡಿಸಿದೆ.

(ಕೆಳಗಿನ ಬಾಕ್ಸ್‌ಗೆ ನಿಶಾ ಫೋಟೋ ಬಳಸಿ)

ಬಾಕ್ಸ್ .............

ಯೋಗೇಶ್ವರ್ ವಿರುದ್ಧ ನಿಶಾ ಯೋಗೇಶ್ವರ್ ಅಸ್ತ್ರ!

ಬಿಜೆಪಿ ನಾಯಕ ಸಿ.ಪಿ.ಯೋಗೇಶ್ವರ್ ಅವರ ಪುತ್ರಿ ನಿಶಾ ಯೋಗೇಶ್ವರ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡು ಅಸ್ತ್ರವಾಗಿ ಬಳಸಲು ಡಿಕೆ ಸಹೋದರರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಡಿಕೆ ಸಹೋದರರೊಂದಿಗೆ ನಿಶಾ ಯೋಗೇಶ್ವರ್ ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಕಾಂಗ್ರೆಸ್ ಸೇರ್ಪಡೆಯಾಗುವುದಷ್ಟೇ ಬಾಕಿಯಿದೆ. ಹೀಗಾಗಿಯೇ ನಿಶಾರವರು ಕೈ ನಾಯಕರೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಅವರನ್ನು ಚುನಾವಣೆಯಲ್ಲಿ ಪ್ರಚಾರಕ್ಕೆ ಬಳಸಿಕೊಂಡು ಸಿ.ಪಿ.ಯೋಗೇಶ್ವರ್ ಗೆ ಮಗಳಿಂದಲೇ ಠಕ್ಕರ್ ಕೊಡಲು ಸಿದ್ಧತೆ ನಡೆಸಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.22ಕೆಆರ್ ಎಂಎನ್ 7,8,9.ಜೆಪಿಜಿ

7.ಡಿ.ಕೆ.ಸುರೇಶ್

8.ಮಂಜನಾಥ್

9.ನಿಶಾ ಯೋಗೇಶ್ವರ್