ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ:

ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾದ ಪ್ರಯುಕ್ತ ನಗರ ಹೊರವಲಯದ ವೀರಾಂಜನೇಯ ದೇವಸ್ಥಾನದಲ್ಲಿ ಬುಧವಾರ ಅಭಿಷೇಕ, ವಿಶೇಷ ಪೂಜೆ ನೆರವೇರಿಸಲಾಯಿತು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಯಲುವಳ್ಳಿ ಎನ್. ರಮೇಶ್ ಅವರ ಅಭಿಮಾನಿ ಬಳಗ ಹಾಗೂ ಡಿ.ಕೆ. ಶಿವಕುಮಾರ್ ಅಭಿಮಾನಿಗಳ ಬಳಗದ ವತಿಯಿಂದ 1008 ತೆಂಗಿನಕಾಯಿಗಳನ್ನು ಒಡೆದು ಹರಕೆಯನ್ನು ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ, ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಯಶಸ್ವಿಯಾಗಲಿ ಎಂದೂ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಯಲುವಹಳ್ಳಿ ಎನ್. ರಮೇಶ್, ಶಿವಕುಮಾರ್ ಅವರು ಹಲ ವರ್ಷಗಳಿಂದ ಪಕ್ಷಕ್ಕೆ ನಿಷ್ಠೆಯಿಂದ ದುಡಿದು ತಮ್ಮದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಕನಕಪುರ ಬಂಡೆ ಎಂದೆ ಪ್ರಸಿದ್ಧರಾಗಿದ್ದಾರೆ. ಹಗಲು-ರಾತ್ರಿ ಎನ್ನದೆ ದುಡಿದು ತಳಮಟ್ಟದಿಂದ ಪಕ್ಷವನ್ನು ಕಟ್ಟಿದ ಅವರು ಮುಖ್ಯಮಂತ್ರಿ ಆಗುವ ಎಲ್ಲಾ ಅರ್ಹತೆ ಹೊಂದಿದ್ದರು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯ ಅವರ ಜೊತೆಗೆ ಡಿ.ಕೆ. ಶಿವಕುಮಾರ್ ಶ್ರಮವೂ ಮಹತ್ವದ್ದಾಗಿದೆ ಎಂದರು.

ಶಿವಕುಮಾರ್ ಜೈಲಿನಲ್ಲಿ ಇದ್ದಾಗ ಇದೇ ವೀರಾಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿತ್ತು. ಅದರ ಕೆಲ ದಿನಗಳಲ್ಲಿ ಅವರು ಬಿಡುಗಡೆಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಕಳೆದ 15 ರಂದು 108 ತೆಂಗಿನಕಾಯಿ ಒಡೆಯಲಾಗಿತ್ತು. ಅವರು ಮುಖ್ಯಮಂತ್ರಿ ಆದರೆ ಸಾವಿರದ ಎಂಟು ತೆಂಗಿನಕಾಯಿ ಒಡೆಯುವ ಹರಕೆ ಮಾಡಿಕೊಂಡಿದ್ದೆವು. ದಿಲ್ಲಿ ಪೂಜೆ ಸಲ್ಲಿಸಿ ಎಂಟು ದಿನ ಕಳೆಯುವುದರಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಎಂದು ಹೈಕಮಾಂಡ್ ಹಾಗೂ ಸಿಎಂ ಸಿದ್ದರಾಮಯ್ಯ ಘೋಷಿಸಿದರು. ಇಂದು ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ ಎಲ್ಲರಿಗೂ ಸಂತಸ ತಂದಿದೆ ಎಂದರು.

ಡಿ.ಕೆ. ಶಿವಕುಮಾರ್ ಅಧಿಕಾರ ಸ್ವೀಕರಿಸುತ್ತಿದ್ದಂತೆ ನಗರದ ಬಿಬಿ ರಸ್ತೆಯ ಯಲುವಹಳ್ಳಿ ಎನ್.ರಮೇಶ್ ಅವರ ಕಾರ್ಯಾಲಯದ ಬಳಿ ಅಭಿಮಾನಿ ಬಳಗ ಹಾಗೂ ಡಿ.ಕೆ. ಶಿವಕುಮಾರ್ ಅಭಿಮಾನಿಗಳ ಬಳಗದ ವತಿಯಿಂದ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.


ಈ ಸಂದರ್ಭದಲ್ಲಿ ಅಹಿಂದ ಜಿಲ್ಲಾಧ್ಯಕ್ಷ ಕಳವಾರ ಶ್ರೀಧರ್, ಹಿರಿಯ ಮುಖಂಡರಾದ ಚಂದ್ರಣ್ಣ, ಲಕ್ಷಣ್,ಯಲುವಹಳ್ಳಿ ಜನಾರ್ದನ್, ಶಿವರಾಂ, ಮತ್ತಿತರರು ಇದ್ದರು.

ಸಿಕೆಬಿ-2

ಡಿ.ಕೆ.ಶಿ ಮುಖ್ಯಮಂತ್ರಿಯಾದ ಪ್ರಯುಕ್ತ ನಗರ ಹೊರವಲಯದ ವೀರಾಂಜನೇಯ ದೇವಸ್ಥಾನದಲ್ಲಿ ಯಲುವಹಳ್ಳಿ ಎನ್.ರಮೇಶ್ 1008 ತೆಂಗಿನ ಕಾಯಿ ಒಡೆದು ಹರಕೆ ತೀರಿಸಿದರು.