ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಡಿ.ಕೆ.ಶಿವಕುಮಾರ್‌ ಭೇಟಿ, ವಿಶೇಷ ಪೂಜೆ

| Published : Nov 22 2024, 01:16 AM IST / Updated: Nov 22 2024, 12:46 PM IST

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಡಿ.ಕೆ.ಶಿವಕುಮಾರ್‌ ಭೇಟಿ, ವಿಶೇಷ ಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ಉಪಮುಖ್ಯಮಂತ್ರಿ ಡಿ ಕೆ. ಶಿವಕುಮಾರ್‌ ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದರು. ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

 ಕುಂದಾಪುರ : ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಗುರುವಾರ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ಪತ್ನಿ ಉಷಾ, ಪುತ್ರಿ ಆಭರಣ ಅವರೊಂದಿಗೆ ಬೆಂಗಳೂರಿನಿಂದ ಹೆಲಿಕಾಪ್ಟರ್‌ ನಲ್ಲಿ ಅರೆ ಶಿರೂರು ಹೆಲಿಪ್ಯಾಡ್‌ಗೆ ಬಂದಿಳಿದ ಡಿ. ಕೆ. ಶಿವಕುಮಾರ್ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು.

ದೇವಸ್ಥಾನದ ಮುಂಭಾಗ ಕಂಬದ ಗಣಪತಿಗೆ ಕೈ ಮುಗಿದು, ಶ್ರೀ ದೇವಿಯ ಹಾಗೂ ವೀರಭದ್ರ ಸ್ವಾಮಿ ದರ್ಶನ ಪಡೆದುಕೊಂಡ ಅವರು, ಅರ್ಚಕರ ಮೂಲಕ ವಿಶೇಷ ಪೂಜೆ ಸಲ್ಲಿಸಿದರು. ಹಿರಿಯ ಅರ್ಚಕರಾದ ಎನ್.ನರಸಿಂಹ ಅಡಿಗ, ಶ್ರೀಧರ ಅಡಿಗ, ತಂತ್ರಿ ನಿತ್ಯಾನಂದ ಅಡಿಗ, ಎನ್.ಸುಬ್ರಮಣ್ಯ ಅಡಿಗ, ವಿಘ್ನೇಶ್ವರ ಅಡಿಗ ಇದ್ದರು.

ಮೀನುಗಾರಿಕಾ ಸಚಿವ ಮಂಕಾಳ ವೈದ್ಯ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ, ಎಸ್.ಪಿ ಡಾ.ಅರುಣಕುಮಾರ್‌, ಜಿ.ಪಂ ಸಿಇಓ ಪ್ರತೀಕ್ ಬಾಯಲ್, ಉಪ ವಿಭಾಗಾಧಿಕಾರಿ ಮಹೇಶ್ಚಂದ್ರ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ, ಸದಸ್ಯರಾದ ರಾಜೇಶ್ ಕಾರಂತ, ರಘುರಾಮ ದೇವಾಡಿಗ, ಮಾಲಿಂಗ ವೆಂಕ ನಾಯ್ಕ್, ಧನಾಕ್ಷೀ ವಿಶ್ವನಾಥ್ ಪೂಜಾರಿ, ಸುಧಾ, ಸುರೇಂದ್ರ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್‌ಕುಮಾರ ಕೊಡವೂರು, ಜಿಲ್ಲಾ ಕಾರ್ಯಾಧ್ಯಕ್ಷ ಕಿಶನ್‌ ಹೆಗ್ಡೆ ಕೊಳ್ಕೆಬೈಲ್, ಪ್ರಮುಖರಾದ ಎಂ.ಎ.ಗಫೂರ್, ದಿನೇಶ್ ಹೆಗ್ಡೆ ಮೊಳಹಳ್ಳಿ, ಪ್ರಸಾದ್ ಕಾಂಚನ್ ಉಡುಪಿ, ಎಸ್.ರಾಜು ಪೂಜಾರಿ, ನವೀನ್‌ಚಂದ್ರ ಶೆಟ್ಟಿ ತೊಂಬತ್ತು, ಬ್ಲಾಕ್ ಕಾಂಗ್ರೆಸ್ ಅರವಿಂದ ಪೂಜಾರಿ ಪಡುಕೋಣೆ, ಪ್ರದೀಪ್‌ಕುಮಾರ್ ಶೆಟ್ಟಿ ಕಾವ್ರಾಡಿ ಇದ್ದರು.

ಪೈಲೆಟ್‌ಗಾಗಿ ಕಾದು ಸುಸ್ತಾದ ಡಿಕೆಶಿ: ಮುರ್ಡೇಶ್ವರಕ್ಕೆ ತೆರಳಲು ನಿಗದಿತ ವೇಳಾಪಟ್ಟಿಯ ಸಮಯಕ್ಕಿಂತ ಮುಂಚಿತವಾಗಿ ಅರೆ ಶಿರೂರು ಹೆಲಿಪ್ಯಾಡ್‌ಗೆ ಆಗಮಿಸಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕುಟುಂಬ ಸದಸ್ಯರು ಸುಮಾರು 20 ನಿಮಿಷಗಳ ಕಾಲ ಹೆಲಿಪ್ಯಾಡ್‌ನಲ್ಲಿಯೇ ಕಾಯಬೇಕಾದ ಪ್ರಸಂಗ ನಡೆಯಿತು. ಹೆಲಿಕಾಪ್ಟರ್ ಲ್ಯಾಂಡ್ ಆದ ಬಳಿಕ ದೇವರ ದರ್ಶನಕ್ಕೆಂದು ದೇವಸ್ಥಾನಕ್ಕೆ ಆಗಮಿಸಿದ್ದ ಇಬ್ಬರು ಪೈಲಟ್‌ಗಳನ್ನು ಮರಳಿ ಹೆಲಿಪ್ಯಾಡ್‌ಗೆ ತಲುಪಿಸುವಲ್ಲಿ ವಿಳಂಬವಾಗಿತ್ತು. 12.10 ಕ್ಕೆ ಹೆಲಿಪ್ಯಾಡ್‌ಗೆ ಆಗಮಿಸಿದ್ದ ಡಿಸಿಎಂ ಡಿಕೆಶಿ ಅವರನ್ನು ಕೂರಿಸಿಕೊಂಡ ಹೆಲಿಕಾಪ್ಟರ್ 12.30 ರ ವೇಳೆಗೆ ಟೇಕ್ ಆಫ್ ಆಗಿದೆ.