ಕೆಆರ್‌ಎಸ್ ಅಣೆಕಟ್ಟು ಸಾಮರ್ಥ್ಯ ಪರಿಶೀಲನೆಗೆ ಡಿಕೆಶಿ ಸೂಚನೆ

| Published : Dec 16 2023, 02:00 AM IST

ಕೆಆರ್‌ಎಸ್ ಅಣೆಕಟ್ಟು ಸಾಮರ್ಥ್ಯ ಪರಿಶೀಲನೆಗೆ ಡಿಕೆಶಿ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೆಆರ್‌ಎಸ್ ಅಣೆಕಟ್ಟು ಸಾಮರ್ಥ್ಯ ಪರಿಶೀಲನೆಗೆ ಡಿಸಿಎಂ ಡಿಕೆಶಿ ಸೂಚನೆ, ತಜ್ಞರ ತಂಡ ಕಳುಹಿಸಲು ನೀರಾವರಿ ಇಲಾಖೆ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ, ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ದಿನೇಶ್ ಗೂಳಿಗೌಡ ಮನವಿಗೆ ಸ್ಪಂದನೆ

ಕನ್ನಡಪ್ರಭ ವಾರ್ತೆ ಮಂಡ್ಯಕೃಷ್ಣರಾಜಸಾಗರ ಜಲಾಶಯದಲ್ಲಿ ಹೂಳು ತುಂಬಿದೆಯೇ, ಆಧುನಿಕ ಗುಣಮಟ್ಟವನ್ನು ಅಣೆಕಟ್ಟು ಹೊಂದಿದೆಯೇ, ಅಣೆಕಟ್ಟೆಯ ಕಾರ್ಯನಿರ್ವಹಣೆ, ಅಣೆಕಟ್ಟು ವ್ಯಾಪ್ತಿಯಲ್ಲಿ ಒತ್ತುವರಿಯಾಗಿದೆಯೇ ಎಂಬುದನ್ನು ಅರಿಯಲು ತುರ್ತಾಗಿ ತಜ್ಞರ ತಂಡವನ್ನು ಕಳುಹಿಸಿ ಅಧ್ಯಯನ ನಡೆಸುವಂತೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ನೀರಾವರಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದರು.

ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಹಾಗೂ ವಿಧಾನ ಪರಿಷತ್ ಸದಸ್ಯ ದಿನೇಶ ಗೂಳಿಗೌಡ ಅವರು ಸಲ್ಲಿಸಿದ ಮನವಿಗೆ ಸ್ಪಂದಿಸಿದ ಡಿ.ಕೆ.ಶಿವಕುಮಾರ್, ತಜ್ಞರ ತಂಡ ಕಳುಹಿಸಿ ಅಣೆಕಟ್ಟೆಯ ಗರಿಷ್ಠ ಸಾಮರ್ಥ್ಯ ೪೯.೫೦ ಟಿಎಂಸಿ ನೀರು ಈಗಲೂ ಸಂಗ್ರಹವಾಗುತ್ತಿದೆಯೇ?, ಸೀಪೇಜ್ ನಿರ್ವಹಣೆ, ಗೇಟ್‌ಗಳ ಸುಸ್ಥಿತಿ ಸೇರಿದಂತೆ ಇನ್ನಿತರ ಅಂಶಗಳನ್ನು ಪರಿಶೀಲಿಸುವಂತೆ ಆದೇಶಿಸಿದ್ದಾರೆ.

ಕೆಆರ್‌ಎಸ್ ಅಣೆಕಟ್ಟೆ ನಿರ್ಮಾಣಗೊಂಡು ೯೦ ವರ್ಷಗಳಾಗಿದೆ. ಅಣೆಕಟ್ಟೆ ನಿರ್ಮಾಣ ಮಾಡುವ ಕಾಲದಲ್ಲಿ ಆಧುನಿಕ ತಂತ್ರಜ್ಞಾನ ಇರಲಿಲ್ಲ. ಇದರಿಂದ ದೊಡ್ಡ ಗಟ್ಟಿ ಇಡಿ ಕಲ್ಲುಗಳಿಂದ ನಿರ್ಮಾಣವಾಗಿದೆ. ಹಾಗಾಗಿ ಪ್ರಸ್ತುತ ಆಧುನಿಕ ತಂತ್ರಜ್ಞಾನದೊಂದಿಗೆ ಅಣೆಕಟ್ಟೆಯನ್ನು ಸುಭದ್ರಗೊಳಿಸಲು ಕ್ರಮ ವಹಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದರು.

ಈ ಅಣೆಕಟ್ಟೆಯಲ್ಲಿ ಡ್ರೈನೇಜ್ ಗ್ಯಾಲರಿ ಇಲ್ಲದೇ ಇರುವುದರಿಂದ ಸೀಪೇಜ್ ನಿರ್ವಹಣೆ ಸರಿಯಾಗಿ ಆಗುತ್ತಿದೆಯೇ ಎಂಬ ಬಗ್ಗೆ ತಜ್ಞರಿಂದ ಪರೀಕ್ಷಿಸಿ ವರದಿ ಪಡೆದು, ತೊಂದರೆ ಇದ್ದರೆ, ಸರಿಪಡಿಸುವ ಕ್ರಮವನ್ನು ಸರ್ಕಾರ ಕೈಗೊಳ್ಳಬೇಕು. ಅಣೆಕಟ್ಟೆಯಲ್ಲಿ ನೀರು ತುಂಬಿದಾಗ ಹೊರಬಿಡಲು ಬಳಸುವ ಗೇಟ್‌ಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿವೆಯೇ ಎಂದು ಕಾಲಕಾಲಕ್ಕೆ ಪರಿಶೀಲಿಸಬೇಕು. ಹ್ಯಾಂಗ್ ಮಾಡಿರುವ ಗೇಟ್‌ಗಳನ್ನು ಆಧುನಿಕ ತಂತ್ರಜ್ಞಾನಗಳೊಂದಿಗೆ ಬದಲಾಯಿಸುವ ಕೆಲಸವಾಗುತ್ತಿದೆ.

ಈ ಕೆಲಸ ಸರಿಯಾಗಿ ನಡೆಯುತ್ತಿದೆಯೇ ಎಂಬುದನ್ನು ಪರೀಕ್ಷಿಸಲು, ಡ್ರೈರನ್ ಮಾಡಿ, ಗೇಟ್‌ಗಳು ಒತ್ತಡ ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆಯೇ ಎಂಬುದನ್ನು ಪರಿಶೀಲಿಸಲು ಅಗತ್ಯ ಕ್ರಮ ವಹಿಸುವಂತೆ ಕೋರಿದ್ದರು.

ಅಣೆಕಟ್ಟೆಯ ಕಾರ್ಯನಿರ್ವಹಣೆ ಸುರಕ್ಷತೆಯ ಬಗ್ಗೆ ಹೆಚ್ಚಿನ ಆದ್ಯತೆ ಕೊಡಬೇಕು. ಪ್ರವಾಹದಲ್ಲಿ ಸುರಕ್ಷತೆ ಬಗ್ಗೆ ಲಕ್ಷ್ಯ ಕೊಡುವ ಅಗತ್ಯವಿದೆ. ಮಳೆಗಾಲದಲ್ಲಿ ಪ್ರವಾಹ ಬಂದಾಗ ಉಂಟಾಗುವ ಅನಾಹುತ ತಪ್ಪಿಸಲು ಮುಂಚಿತವಾಗಿ ಯೋಜಿಸಿ, ಮುನ್ನೆಚ್ಚರಿಕಾ ಕ್ರಮ ವಹಿಸಬೇಕು. ಒತ್ತುವರಿ ಆಗಿದ್ದರೆ ತೆರವು ಮಾಡುವುದು. ಅಣೆಕಟ್ಟೆಯ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದೆಯೇ ಎಂದು ಸರ್ವೆ ಮಾಡಿ, ಹಾಗೇನಾದರೂ ಆಗಿದ್ದಲ್ಲಿ ತೆರವು ಮಾಡಲು ಕ್ರಮ ವಹಿಸುವಂತೆ ಮನವಿ ಮಾಡಿದ್ದರು.

ಈ ಭಾಗದ ಲಕ್ಷಾಂತರ ಕುಟುಂಬಗಳ ಜೀವನಾಧಾರವಾಗಿ ಈ ಅಣೆಕಟ್ಟೆ ಇರುವುದರಿಂದ ಸರ್ಕಾರ ಇದರ ಸುರಕ್ಷತೆ ಹಾಗೂ ಸುಸ್ಥಿತಿಯ ಬಗ್ಗೆ ಆದ್ಯತೆಯ ಮೇಲೆ ಗಮನ ಹರಿಸಬೇಕು ಎಂದು ರೈತರ ಪರವಾಗಿ ಶಾಸಕರಾದ ಎ.ಬಿ.ರಮೇಶ್ ಬಂಡಿಸಿದ್ದೇಗೌಡ ಹಾಗೂ ದಿನೇಶ್ ಗೂಳಿಗೌಡ ಸಚಿವರನ್ನು ಕೋರಿದ್ದರು.

ಶಾಸಕರ ಮನವಿಗೆ ಸ್ಪಂದಿಸಿದ ಡಿ.ಕೆ.ಶಿವಕುಮಾರ್ ಮನವಿ ಪತ್ರದಲ್ಲಿರುವ ಪ್ರಮುಖ ಅಂಶಗಳ ಕುರಿತಂತೆ ತಜ್ಞರ ತಂಡದಿಂದ ಪರಿಶೀಲನೆ ನಡೆಸುವಂತೆ ನೀರಾವರಿ ಇಲಾಖೆ ಉನ್ನತಾಧಿಕಾರಿಗಳಿಗೆ ಸೂಚಿಸಿದ್ದಾರೆ.