ಪರಿಸರ ಸಂರಕ್ಷಣೆಯ ಕೆಲಸ ಹೃದಯದಿಂದ ಮಾಡಿ-ಪ್ರೊ. ಅರಸನಾಳ

| Published : Feb 23 2025, 12:30 AM IST

ಸಾರಾಂಶ

ಪರಿಸರ ದಿನಾಚರಣೆ ಬಂದಾಗೊಮ್ಮೆ ಕೇವಲ ಕಾಟಾಚಾರಕ್ಕೆ ಅಥವಾ ಪ್ರಚಾರಕ್ಕಾಗಿ ಕಳೆದ ವರ್ಷ ಕಡಿದ ತಗ್ಗಿನಲ್ಲಿಯೇ ಸಸಿ ನೆಟ್ಟು ನಾನೊಬ್ಬ ಪರಿಸರ ಪ್ರೇಮಿ, ಪರಿಸರ ಸಂರಕ್ಷಕ ಎಂದರೆ ತಪ್ಪಾಗುತ್ತದೆ. ಪರಿಸರ ಸಂರಕ್ಷಣೆಯ ಕೆಲಸವನ್ನು ಹೃದಯದಿಂದ ಮಾಡಬೇಕು ಎಂದು ಪರಿಸರವಾದಿ, ಗದಗ ಜಿಲ್ಲಾ ವನ್ಯಜೀವಿ ಪರಿಪಾಲಕ ಪ್ರೊ. ಸಿ.ಎಸ್. ಅರಸನಾಳ ಹೇಳಿದರು.

ಮುಂಡರಗಿ: ಪರಿಸರ ದಿನಾಚರಣೆ ಬಂದಾಗೊಮ್ಮೆ ಕೇವಲ ಕಾಟಾಚಾರಕ್ಕೆ ಅಥವಾ ಪ್ರಚಾರಕ್ಕಾಗಿ ಕಳೆದ ವರ್ಷ ಕಡಿದ ತಗ್ಗಿನಲ್ಲಿಯೇ ಸಸಿ ನೆಟ್ಟು ನಾನೊಬ್ಬ ಪರಿಸರ ಪ್ರೇಮಿ, ಪರಿಸರ ಸಂರಕ್ಷಕ ಎಂದರೆ ತಪ್ಪಾಗುತ್ತದೆ. ಪರಿಸರ ಸಂರಕ್ಷಣೆಯ ಕೆಲಸವನ್ನು ಹೃದಯದಿಂದ ಮಾಡಬೇಕು ಎಂದು ಪರಿಸರವಾದಿ, ಗದಗ ಜಿಲ್ಲಾ ವನ್ಯಜೀವಿ ಪರಿಪಾಲಕ ಪ್ರೊ. ಸಿ.ಎಸ್. ಅರಸನಾಳ ಹೇಳಿದರು.

ಅವರು ಗುರುವಾರ ತಾಲೂಕಿನ ಹಳ್ಳಿಕೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸಾಲುಮರದ ತಿಮ್ಮಕ್ಕ ಇಕೋ ಕ್ಲಬ್ ಉದ್ಘಾಟನೆ ಮತ್ತು ಪರಿಸರ ಜಾಗೃತಿ ವಿಶೇಷ ಉಪನ್ಯಾಸ ನೆರವೇರಿಸಿ ಮಾತನಾಡಿದರು. ಬೆಳೆದ ಮರಗಳು ಎಲ್ಲ ತರಹದ ಮಾಲಿನ್ಯವನ್ನು ತಡೆಗಟ್ಟುವ ಶಕ್ತಿಯನ್ನು ಹೊಂದಿರುತ್ತವೆ. ಆದ್ದರಿಂದ ಅರಣ್ಯ ಪ್ರತಿಯೊಬ್ಬರು ಸಂಪತ್ತನ್ನು ಹೆಚ್ಚಿಸುವ ಕೆಲಸ ಮಾಡಬೇಕು. ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಕುರಿತು ಹೆಚ್ಚಿನ ಗಮನಹರಿಸಬೇಕು ಎಂದರು.

ಶಾಲಾ ಮುಖ್ಯೋಪಾಧ್ಯಾಯಿನಿ ಸುನಿತಾ ಸುತ್ರಾವೆ ಅಧ್ಯಕ್ಷತೆವಹಿಸಿ ಮಾತನಾಡಿ, ಇಂದಿನ ಯುವಪೀಳಿಗೆ ಪರಿಸರ ಸಂರಕ್ಷಣೆಯ ಬಗ್ಗೆ ಗಮನಹರಿಸುತ್ತಿಲ್ಲ. ನಮ್ಮ ಮುಂದಿನ ಪೀಳಿಗೆಯ ಉತ್ತಮ ಭವಿಷ್ಯತ್ತಿಗೆ ಇಂದಿನ ಪೀಳಿಗೆ ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳಬೇಕು. ನಮ್ಮ ದೇಶದ ಪರಿಸರ ಸಮತೋಲನಕ್ಕೆ ಇನ್ನೂ 400ರಿಂದ 500 ಕೋಟಿ ಗಿಡಗಳ ಅವಶ್ಯಕತೆ ಇದೆ. ಆದಕಾರಣ ಮಕ್ಕಳು ಮತ್ತು ಯುವಪೀಳಿಗೆ ಹೆಚ್ಚು-ಹೆಚ್ಚು ಮರಗಳನ್ನು ನೆಡೆಸಿ ಬೆಳೆಸುವ ಕಾರ್ಯ ಮಾಡಬೇಕು ಎಂದರು. ಶಾಲೆಯ ಮಕ್ಕಳು ಆವರಣದಲ್ಲಿರುವ ಮರಗಿಡಗಳನ್ನು ಮಕ್ಕಳಂತೆ ಜೋಪಾನಮಾಡಬೇಕು. ನಮ್ಮ ಅರಣ್ಯ ಸಂಪತ್ತು ಶೇ. ೩೩ರಷ್ಟು ಬರುವಂತೆ ಎಲ್ಲರೂ ಇಲಾಖೆಯೊಂದಿಗೆ ಕೈಜೋಡಿಸಬೇಕು.ಪರಿಸರವನ್ನು ನಾವು ಕಾಪಾಡಿದರೆ ನಮ್ಮ ಮುಂದಿನ ಪೀಳಿಗೆ ಸ್ವಚ್ಛಂದವಾದ ಪರಿಸದಲ್ಲಿ ಬದುಕಲು ಸಾಧ್ಯವಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಎಚ್.ಎಸ್. ಪಾಣಿಶೆಟ್ಟರ, ಆರ್.ಎಂ. ಸವದಿ, ಬಿ.ಎಫ್. ಹಳ್ಳಿಕೇರಿ, ಆಯ್.ಬಿ. ಸ್ಯಾಲಿ, ಕುಂಬಳಾವತಿ, ಎನ್.ಬಿ. ಶೀರನಹಳ್ಳಿ ಇದ್ದರು. ಶಿಕ್ಷಕ ಎಚ್.ಜಿ.ಗದ್ದಿಗೌಡ್ರ ಸ್ವಾಗತಿಸಿ,ಅತಿಥಿಗಳ ಪರಿಚಯ ಮಾಡಿದರು. ಸಾಲುಮರದ ತಿಮ್ಮಕ್ಕ ಇಕೋ ಕ್ಲಬ್ ಸಂಚಾಲಕ ಶಿಕ್ಷಕಿ ಸಮಿತಾ ಯಾಳಗಿ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕಿ ಎಂ.ಎನ್. ಹುಲಕೋಟಿ ವಂದಿಸಿದರು.