ಧರ್ಮಸ್ಥಳ ಕ್ಷೇತ್ರವನ್ನು ಅಪವಿತ್ರ ಮಾಡಬೇಡಿ

| Published : Aug 08 2025, 01:00 AM IST

ಧರ್ಮಸ್ಥಳ ಕ್ಷೇತ್ರವನ್ನು ಅಪವಿತ್ರ ಮಾಡಬೇಡಿ
Share this Article
  • FB
  • TW
  • Linkdin
  • Email

ಸಾರಾಂಶ

ಧರ್ಮಸ್ಥಳ ಕ್ಷೇತ್ರ ನಮ್ಮ ರಾಜ್ಯದಲ್ಲಿ ಉತ್ತರ ಕಾಶಿಯ ಹಾಗೇ ಭಾರಿ ಪ್ರಸಿದ್ಧ ವಾದ ಧಾರ್ಮಿಕ ಕ್ಷೇತ್ರ, ಆ ಕ್ಷೇತ್ರವನ್ನು ಯಾರೂ ಅಪವಿತ್ರ ಮಾಡಲು ಹೋಗಬೇಡಿ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಮನವಿ ಮಾಡಿದರು.

ಶಿವಮೊಗ್ಗ: ಧರ್ಮಸ್ಥಳ ಕ್ಷೇತ್ರ ನಮ್ಮ ರಾಜ್ಯದಲ್ಲಿ ಉತ್ತರ ಕಾಶಿಯ ಹಾಗೇ ಭಾರಿ ಪ್ರಸಿದ್ಧ ವಾದ ಧಾರ್ಮಿಕ ಕ್ಷೇತ್ರ, ಆ ಕ್ಷೇತ್ರವನ್ನು ಯಾರೂ ಅಪವಿತ್ರ ಮಾಡಲು ಹೋಗಬೇಡಿ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಮನವಿ ಮಾಡಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಬಾಲ್ಯದಿಂದಲೂ ಧರ್ಮಸ್ಥಳದ ಮೇಲೆ ಅಪಾರ ನಂಬಿಕೆ ಇಟ್ಟಿದ್ದೇವೆ. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಮೇಲೆ ಅಷ್ಟೇ ಗೌರವವಿದೆ. ಧರ್ಮಸ್ಥಳ ಒಂದು ಧಾರ್ಮಿಕ ಕೇಂದ್ರ. ಅಲ್ಲಿಗೆ ಜನರು ನಂಬಿಕೆ ಮತ್ತು ವಿಶ್ವಾಸದಿಂದ ಹೋಗುತ್ತಾರೆ. ಆ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳದ ಕುರಿತು ನಡೆಯುತ್ತಿರುವ ಪರ-ವಿರೋಧ ಚರ್ಚೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಸೌಜನ್ಯ ಪ್ರಕರಣದ ಬಗ್ಗೆ ವಿರೋಧ ಇರುವವರು ಸರ್ಕಾರದ ಮೇಲೆ ಒತ್ತಡ ಹಾಕಿದ್ದರಿಂದ ಎಸ್‌ಐಟಿ ರಚನೆಯಾಗಿರಬಹುದು. ಆದರೆ, ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಬಾರದು. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಿಗಂದೂರು ಕ್ಷೇತ್ರವನ್ನು ಮುಜರಾಯಿ ಇಲಾಖೆಗೆ ಸೇರಿಸಿದ್ದರು. ಅದು ಕೂಡ ಒಂದು ಧಾರ್ಮಿಕ ಕ್ಷೇತ್ರವಾಗಿತ್ತು. ಇದೇ ಬಿಜೆಪಿ ಸಂಸದರು ಮತ್ತು ಮುಖಂಡರು ಸೇರಿ ಈ ಕೆಲಸ ಮಾಡಿದ್ದರು. ಯಾವುದೇ ಧಾರ್ಮಿಕ ಕ್ಷೇತ್ರಕ್ಕೆ ಯಾರೂ ಹಸ್ತಕ್ಷೇಪ ಮಾಡಬಾರದು ಎಂಬುದು ನನ್ನ ನಿಲುವು ಎಂದು ತಿಳಿಸಿದರು.

ದೇಶದಲ್ಲಿ ತುರ್ತು ಪರಿಸ್ಥಿತಿಗಿಂತಲೂ ಕಠಿಣ ನಿರ್ಧಾರಗಳನ್ನು ಪ್ರಧಾನಿ ಮೋದಿ ತೆಗೆದುಕೊಳ್ಳುತ್ತಿದ್ದಾರೆ. ಇಡಿ, ಐಟಿ, ಸಿಬಿಐನಂತಹ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧ ಪಕ್ಷಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಇಂದಿರಾ ಗಾಂಧಿಯವರು ಹೇರಿದ್ದ ತುರ್ತು ಪರಿಸ್ಥಿತಿಯನ್ನೇ ಟೀಕಿಸುವ ಬಿಜೆಪಿ, ಈಗ ಅದೇ ಅಸ್ತ್ರಗಳನ್ನು ಬಳಸುತ್ತಿದೆ’ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಹುಲ್ ಗಾಂಧಿ ಅವರು ಮಾಡಿರುವ ಚುನಾವಣೆ ಅಕ್ರಮಗಳ ಆರೋಪ ಸುಳ್ಳಲ್ಲ ಎಂದ ಅವರು, ನಾಳೆ ರಾಜ್ಯದಲ್ಲಿ ಮತ ಕಳ್ಳತನ ವಿರೋಧಿ ಹೋರಾಟದಲ್ಲಿ ಭಾಗವಹಿಸುವುದಾಗಿ ತಿಳಿಸಿದರು.