ಕುಡಿಯುವ ನೀರಿಗೆ ತೊಂದರೆ ಆಗದಿರಲಿ

| Published : Mar 27 2024, 01:00 AM IST

ಸಾರಾಂಶ

ಬರಪೀಡಿತವೆಂದು ಘೋಷಣೆಯಾದ ಕಲಘಟಗಿ ತಾಲೂಕಿನ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರು ಹಾಗೂ ಮೇವು ಸೇರಿದಂತೆ ಗ್ರಾಮಸ್ಥರಿಗೆ ಯಾವುದೇ ರೀತಿಯ ಸಮಸ್ಯೆ ಕಂಡುಬಂದಲ್ಲಿ ಗ್ರಾಮಮಟ್ಟದ ಅಧಿಕಾರಿಗಳು ಯುದ್ಧೋಪಾದಿಯಲ್ಲಿ ಕಾರ್ಯ ನಿರ್ವಹಿಸಬೇಕು.

ಧಾರವಾಡ:

ಬರಪೀಡಿತವೆಂದು ಘೋಷಣೆಯಾದ ಕಲಘಟಗಿ ತಾಲೂಕಿನ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರು ಹಾಗೂ ಮೇವು ಸೇರಿದಂತೆ ಗ್ರಾಮಸ್ಥರಿಗೆ ಯಾವುದೇ ರೀತಿಯ ಸಮಸ್ಯೆ ಕಂಡುಬಂದಲ್ಲಿ ಗ್ರಾಮಮಟ್ಟದ ಅಧಿಕಾರಿಗಳು ಯುದ್ಧೋಪಾದಿಯಲ್ಲಿ ಕಾರ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದರು.ನೀರಸಾಗರ ಹಾಗೂ ಬೆಣಚಿ ಕೆರೆ ವೀಕ್ಷಣೆ ಸೇರಿದಂತೆ ಬೆಲವಂತರ, ಸೋಮನಕೊಪ್ಪ, ಮುಕ್ಕಲ ಗ್ರಾಮಗಳಿಗೆ ಸೋಮವಾರ ಭೇಟಿ ನೀಡಿದ ಅವರು, ನೀರು, ಮೇವು ಸ್ಥಿತಿಗತಿ ಬಗ್ಗೆ ಪರಿಶೀಲಿಸಿದರು. ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿರುವ ಗ್ರಾಮಗಳಿಗೆ ಖಾಸಗಿ ಮಾಲೀಕರಿಂದ ಬೋರ್‌ವೆಲ್ ಬಾಡಿಗೆ ಪಡೆದು ನೀರು ಸರಬರಾಜು ಮಾಡಲಾಗುತ್ತಿದ್ದು, ಒಂಭತ್ತು ಗ್ರಾಮ ಪಂಚಾಯಿತಿಯ 13 ಗ್ರಾಮಗಳಿಗೆ ಒಟ್ಟು 27 ಖಾಸಗಿ ಕೊಳವೆ ಬಾವಿಗಳ ಮೂಲಕ ಅಗತ್ಯ ನೀರು ಪೂರೈಸಲಾಗುತ್ತಿದೆ ಎಂದರು.ಬೆಣಚಿ ಕೆರೆಗೆ ಭೇಟಿ ನೀಡಿದ ಅವರು, ಕಲಘಟಗಿ ಪಟ್ಟಣಕ್ಕೆ ಇಲ್ಲಿಂದಲೆ ನೀರು ಸರಬರಾಜು ಮಾಡಲಾಗುತ್ತಿದ್ದು, ಸಾರ್ವಜನಿಕರಿಗೆ ಯಾವುದೇ ಸಮಸ್ಯೆಯಾಗದಂತೆ ನಿಗಾ ವಹಿಸುವಂತೆ ಕಲಘಟಗಿ ಪಪಂ ಎಂಜಿನಿಯರ್ ಅಕ್ಕಮಹಾದೇವಿ ತಡಸಗೆ ಸೂಚಿಸಿದರು. ನಿರಂತರ ಯೋಜನೆಯಡಿ ಇನ್ನೂ ಎರಡು ಎತ್ತರದ ಟ್ಯಾಂಕ್‌ ನಿರ್ಮಿಸಲು ಟೆಂಡರ್ ಮಾಡಲಾಗಿದ್ದು, ಕಾಮಗಾರಿ ಪೂರ್ಣಗೊಂಡಲ್ಲಿ ಕಲಘಟಗಿ ಪಟ್ಟಣದ 17 ವಾರ್ಡ್‌ಗಳಿಗೆ ನಿತ್ಯ ನೀರು ಸರಬರಾಜು ಮಾಡಲಾಗುವುದೆಂದು ತಡಸ ತಿಳಿಸಿದರು. ತಹಸೀಲ್ದಾರ್‌ ಯಲ್ಲಪ್ಪ ಗೋಣೆಣ್ಣವರ ಸೇರಿದಂತೆ ಸಿಬ್ಬಂದಿ ಇದ್ದರು.

ನೀರಸಾಗರ ಜಲಾಶಯಕ್ಕೆ ಭೇಟಿ:

ಹುಬ್ಬಳ್ಳಿ ಹಾಗೂ ಕುಂದಗೋಳಕ್ಕೆ ಕುಡಿಯುವ ನೀರಿನ ಮೂಲವಾಗಿರುವ ನೀರಸಾಗರ ಜಲಾಶಯಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ನೀರಿನ ಮಟ್ಟದ ಬಗ್ಗೆ ಜಲಮಂಡಳಿ ಹಾಗೂ ಕೆಯುಐಡಿಎಫ್‌ಸಿ ಮುಖ್ಯ ಎಂಜಿನಿಯರ್ ತಿಮ್ಮಪ್ಪ ಅವರಿಂದ ಮಾಹಿತಿ ಪಡೆದುಕೊಂಡರು. ಜಲಾಶಯದ ಒಟ್ಟು ಸಾಮರ್ಥ್ಯ 1.25 ಟಿಎಂಸಿ ಇದ್ದು, ಒಮ್ಮೆ ಸಂಪೂರ್ಣ ಬರ್ತಿಗೊಂಡರೆ ಎರಡು ವರ್ಷದ ವರೆಗೆ ನೀರು ಸರಬರಾಜು ಮಾಡಬಹುದು. ಸದ್ಯ ಜಲಾಶಯದಲ್ಲಿ 0. 28 ಟಿಎಂಸಿ ನೀರು ಸಂಗ್ರಹವಿದ್ದು, ಜೂನ್-ಜುಲೈ ವರೆಗೆ ಯಾವುದೇ ಸಮಸ್ಯೆ ಇಲ್ಲವೆಂದು ಜಲಮಂಡಳಿ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು. ಜಲಾಶಯದ ಸುತ್ತಲಿನ ಕೃಷಿಕರು ನೀರನ್ನು ಕೃಷಿ ಚಟುವಟಿಕೆಗಳಿಗೆ ಬಳಸದಂತೆ ನಿಗಾವಹಿಸ ತಕ್ಕದ್ದು ಹಾಗೂ ಗ್ರಾಮಗಳಲ್ಲಿ ಡಂಗುರ ಸಾರುವಂತೆ ಜಿಲ್ಲಾಧಿಕಾರಿ ಸೂಚಿಸಿದರು.ನಂತರ ಕಲಘಟಗಿಯ ತಹಸೀಲ್ದಾರ್‌ ಕಚೇರಿಗೆ ಭೇಟಿ ನೀಡಿದ ಅವರು ಇ-ಆಫೀಸ್, ಚುನಾವಣೆ ವಿಭಾಗ ಹಾಗೂ ಇತರೆ ವಿಭಾಗಗಳನ್ನು ಪರಿಶೀಲಿಸಿದರು. ಸಾರ್ವಜನಿಕರ ಅಹವಾಲು ವಿಳಂಬ ಮಾಡದೆ 15ರಿಂದ 20 ದಿನಗಳಲ್ಲಿ ಇತ್ಯರ್ಥಗೊಳಿಸತಕ್ಕದ್ದು. ಚಿಕ್ಕ ಚಿಕ್ಕ ಸಮಸ್ಯೆಗಳಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಸಾರ್ವಜನಿಕರು ಅಲೆಯದಂತೆ ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು.ಜಿಲ್ಲೆಯ ಗ್ರಾಮ ಲೆಕ್ಕಾಧಿಕಾರಿಗಳಿಗೆ ಟ್ಯಾಬ್ ನೀಡುವ ಬಗ್ಗೆ ಯೋಚಿಸಲಾಗಿದೆ. ನೌಕರರು ಆಸಕ್ತಿಯಿಂದ, ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲು ಎಲ್ಲ ಅಗತ್ಯ ಸೌಲಭ್ಯ ಒದಗಿಸಲಾಗುವುದು ಎಂದ ಅವರು, ತಹಸೀಲ್ದಾರ್‌ ಕಚೇರಿಯಲ್ಲಿ ಮಹಿಳಾ ವಿಶ್ರಾಂತಿ ಕೊಠಡಿ ನಿರ್ಮಿಸುವಂತೆ ತಹಸೀಲ್ದಾರ್‌ಗೆ ತಿಳಿಸಿದರು.