ಸಾರಾಂಶ
ಗಣೇಶ ಚತುರ್ಥಿ, ಈದ್ ಮಿಲಾದ್-ಕಂಪ್ಲಿಯಲ್ಲಿ ಶಾಂತಿಸಭೆ
ಕನ್ನಡಪ್ರಭ ವಾರ್ತೆ ಕಂಪ್ಲಿಗುಂಪು ಘರ್ಷಣೆ, ಗಲಭೆಗಳ ಮೂಲಕ ಶಾಂತಿ ಕದಡುವ ಕೆಲಸಗಳನ್ನು ಮಾಡದೇ ಶಾಂತಿ ಹಾಗೂ ಸೌಹಾರ್ದಯುತವಾಗಿ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬ ಆಚರಿಸಿ ಎಂದು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ಕರೆ ನೀಡಿದರು.
ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಗುರುವಾರ ನಡೆದ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ಶಾಂತಿಸಭೆಯಲ್ಲಿ ಅವರು ಮಾತನಾಡಿದರು. ಗಣೇಶನನ್ನು ಪ್ರತಿಷ್ಠಾಪಿಸುವ ಮಂಡಳಿಯವರು ಕಡ್ಡಾಯವಾಗಿ ಪೊಲೀಸ್ ಠಾಣೆ, ಪುರಸಭೆ, ಜೆಸ್ಕಾಂನಿಂದ ಅನುಮತಿ ಪಡೆಯಬೇಕು ಎಂದು ಹೇಳಿದರು. ಗಣೇಶನನ್ನು ಪ್ರತಿಷ್ಠಾಪಿಸಿದ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ಅಲ್ಲದೇ ಯಾವುದೇ ರೀತಿಯ ಪಟಾಕಿ ಹಾಗೂ ಸ್ಫೋಟಕ ವಸ್ತುಗಳನ್ನು ಇರಿಸುವಂತಿಲ್ಲ. ಮೆರವಣಿಗೆಯಲ್ಲಿ ಡಿಜೆಗೆ ಅವಕಾಶವಿಲ್ಲ. ಬದಲಿಗೆ ಎರಡು ಧ್ವನಿವರ್ಧಕಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಯಾವುದೇ ರೀತಿಯ ಭಾವನೆ ಕೆರಳಿಸುವಂತಹ, ಪ್ರಚೋದನಾಕಾರಿಯಂತಹ ಬ್ಯಾನರ್ ಅಳವಡಿಸುವಂತಿಲ್ಲ. ಹಬ್ಬ ಮುಗಿಯುತ್ತಿದ್ದಂತೆ ಹಾಕಲಾದ ಬ್ಯಾನರ್‌ಗಳನ್ನು ತೆರವುಗೊಳಿಸಬೇಕು. ಅನಧಿಕೃತವಾಗಿ ವಿದ್ಯುತ್ ಪಡೆದುಕೊಂಡು ಅವಘಡಗಳಾದಲ್ಲಿ ಆಯೋಜಕರೇ ನೇರ ಹೊಣೆಯಾಗಿರುತ್ತಾರೆ. ಮೆರವಣಿಗೆ ಮಾಡುವ ಖುಷಿಯಲ್ಲಿ ಜೀವಕ್ಕೆ ಕುತ್ತು ತಂದುಕೊಳ್ಳುವಂತೆ ಮಾಡಿಕೊಳ್ಳಬೇಡಿ. ಕಾನೂನು ಉಲ್ಲಂಘಿಸಿ ಕುಟುಂಬವನ್ನು ಸಂತಾಪದಲ್ಲಿ ಉಳಿಸಬಾರದು. ಹಬ್ಬ ಹಬ್ಬವಾಗಿ ಉಳಿಯಬೇಕೆ ಹೊರತು ದುಃಖವಾಗಿ ಉಳಿಯಬಾರದು. ಅದರಂತೆ ಶಾಂತಿಯುತವಾಗಿ ಹಬ್ಬ ಆಚರಿಸಿ ಎಂದರು.ಪೊಲೀಸರೆಂದರೆ ಭಯವಲ್ಲ, ಭರವಸೆ. ನಾವು ನಿಮ್ಮ ಸುರಕ್ಷತೆ ಕಾಪಾಡಲು ಬಂದಿದ್ದೇವೆ. ಕಾನೂನನ್ನು ಗೌರವಿಸುವವರನ್ನು ಪೊಲೀಸರು ಗೌರವಿಸುತ್ತಾರೆ. ಜೆಸ್ಕಾಂ ಅಧಿಕಾರಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿಕೊಳ್ಳದೆ ಸಾರ್ವಜನಿಕರ ಕರೆಗಳಿಗೆ ಸ್ಪಂದಿಸುವ ಕೆಲಸಗಳನ್ನು ಮಾಡಬೇಕು. ಪಟ್ಟಣದ ಎಲ್ಲೆಡೆ ಸಿಸಿ ಕ್ಯಾಮೆರಾ ಕಣ್ಗಾವಲಿದ್ದು, ಸಣ್ಣ ಪುಟ್ಟ ದೋಷಗಳು ಕಂಡು ಬಂದರೂ, ಶಾಂತಿ ಕದಡುವ ಕೆಲಸ ನಡೆದರೂ ತಕ್ಷಣ ಅಂಥವರ ವಿರುದ್ಧ ಸೂಕ್ತ ಕ್ರಮ ಜರುಗಿಸಿ, ನಿರ್ದಾಕ್ಷಿಣ್ಯವಾಗಿ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪೊಲೀಸ್ ನಿರೀಕ್ಷಕ ಕೆ.ಬಿ. ವಾಸುಕುಮಾರ್ ಮಾತನಾಡಿ, ಠಾಣೆಯಲ್ಲಿಯೇ ಪೊಲೀಸ್, ಪುರಸಭೆ, ಜೆಸ್ಕಾಂಗಳ ಪರವಾನಗಿ ಏಕಗವಾಕ್ಷಿಯಲ್ಲಿ ನೀಡಲಾಗುತ್ತಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಪರವಾನಗಿ ಪಡೆದುಕೊಂಡೆ ಗಣಪತಿ ಪ್ರತಿಷ್ಠಾಪಿಸಬೇಕು. ಈದ್ ಮಿಲಾದ್ ಮೆರವಣಿಗೆ ತೀರಾ ಉದ್ದವಾಗಿರದೆ ಸ್ತಬ್ದ ಚಿತ್ರಗಳನ್ನೊಳಗೊಂಡಂತೆ ಎಲ್ಲರೂ ಸೇರಿ ಒಟ್ಟಾಗಿ ತೆರಳುವಂತೆ ಸೂಚಿಸಿದರು.ಪ್ರಮುಖರಾದ ಎನ್. ಹಬೀಬ್ ರೆಹಮಾನ್, ಎಂ. ಸುಧೀರ್, ವಿ. ವಿದ್ಯಾಧರ, ಸಿ.ಆರ್. ಹನುಮಂತ, ವಾಲ್ಮೀಕಿ ರಘು ಇತರರು ಮಾತನಾಡಿ, ಸಾರ್ವಜನಿಕ ಗಣೇಶೋತ್ಸವ ಆಯೋಜಕರಿಗೆ ಸಿಸಿ ಕ್ಯಾಮೆರಾ ಕಡ್ಡಾಯ ಮಾಡಬೇಡಿ, ಅಲ್ಲದೇ ನಿಯಮಗಳಲ್ಲಿ ಕೊಂಚ ಸಡಲಿಕೆ ಮಾಡುವಂತೆ ಮನವಿ ಮಾಡಿದರು.
ಜೆಸ್ಕಾಂ ಅಧಿಕಾರಿಗಳಾದ ಭೀಮೇಶ್, ದೊಡ್ಡಬಸಪ್ಪ ಮಾತನಾಡಿ, ಗಣಪತಿ ಪ್ರತಿಷ್ಠಾಪಿಸುವವರು ಜೆಸ್ಕಾಂ ಪರವಾನಗಿಯೊಂದಿಗೆ ಎಂಸಿಬಿ ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. 9 ದಿನಕ್ಕಿಂತ ಹೆಚ್ಚು ದಿನ ಗಣಪತಿ ಪ್ರತಿಷ್ಠಾಪಿಸುವುದಾದರೆ ಪ್ರತ್ಯೇಕ ಮೀಟರ್ ಅಳವಡಿಸಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.ಇದೆ ವೇಳೆ ಗಣೇಶೋತ್ಸವ ಆಯೋಜಕರು ಮಾಡಬೇಕಾದ, ಮಾಡಬಾರದಾದ ಕಾರ್ಯಗಳ ಕುರಿತು ಪೊಲೀಸರು ಕರಪತ್ರ ವಿತರಿಸಿದರು. ಡಿವೈಎಸ್‌ಪಿ ಪ್ರಸಾದ್ ಗೋಖಲೆ, ಗ್ರೇಡ್-2 ತಹಸೀಲ್ದಾರ್ ಎಂ.ಆರ್. ಷಣ್ಮುಖ, ಆರೋಗ್ಯ ನಿರೀಕ್ಷಕ ಮೌನೇಶ್ ಇದ್ದರು.