ಹೆದ್ದಾರಿ ಕಾಮಗಾರಿಗೆ ಅಡ್ಡಿಪಡಿಸದಿರಿ: ಸಂಸದ ಕಾಗೇರಿ

| Published : Nov 28 2024, 12:36 AM IST

ಸಾರಾಂಶ

ಉತ್ತರ ಕನ್ನಡದ ಹೆದ್ದಾರಿ ಅಗಲೀಕರಣ ಸಮಸ್ಯೆ ಬಗ್ಗೆ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಕೂಡಾ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಭಟ್ಕಳ: ಜಿಲ್ಲೆಯಲ್ಲಿನ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಸಮಸ್ಯೆಯ ಕುರಿತು ಕೇಂದ್ರದ ಭೂ ಸಾರಿಗೆ ಸಚಿವರಲ್ಲಿ ವಿವರವಾಗಿ ಚರ್ಚಿಸಿದ್ದೇನೆ. ಹೆದ್ದಾರಿ ಕಾಮಗಾರಿಗೆ ಸಾರ್ವಜನಿಕರು ಅಡ್ಡಿಪಡಿಸಬಾರದು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಮನವಿ ಮಾಡಿದ್ದಾರೆ.

ಈ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಅವರು, ಉತ್ತರ ಕನ್ನಡದ ಹೆದ್ದಾರಿ ಅಗಲೀಕರಣ ಸಮಸ್ಯೆ ಬಗ್ಗೆ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಕೂಡಾ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಯಾವ ಯಾವ ಸ್ಥಳಗಳಲ್ಲಿ ಅಂಡರ್ ಪಾಸ್, ಒವರ್ ಬ್ರಿಡ್ಜ್ ಬೇಕು ಎಂದು ಈಗಾಗಲೇ ಮನವಿ ಸಲ್ಲಿಸಲಾಗಿದೆ. ಎಲ್ಲ ಕಡೆಗಳಲ್ಲಿಯೂ ಮುಂದಿನ ದಿನಗಳಲ್ಲಿ ಅವುಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ.

ದೊಡ್ಮನೆ ಸೇ.ಸ. ಸಂಘದ ಅಧ್ಯಕ್ಷ, ನಿರ್ದೇಶಕ ಅನರ್ಹ

ಸಿದ್ದಾಪುರ: ತಾಲೂಕಿನ ಕರ್ಕಿಮಕ್ಕಿಯ ದೊಡ್ಮನೆ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಓರ್ವ ನಿರ್ದೇಶಕರನ್ನು ಮೂರು ವರ್ಷಗಳವರೆಗೆ ಅನರ್ಹಗೊಳಿಸಿ ಶಿರಸಿಯ ಸಹಕಾರಿ ಸಂಘಗಳ ಸಹಾಯಕ ನಿಬಂಧಕರ ನ್ಯಾಯಾಲಯ ಆದೇಶ ನೀಡಿದ್ದು, ಸಂಘದ ಅಧ್ಯಕ್ಷ ಸುಬ್ರಾಯ ನಾರಾಯಣ ಭಟ್ಟ ಹಾಗೂ ನಿರ್ದೇಶಕ ವಿವೇಕ ಸುಬ್ರಾಯ ಭಟ್ಟ ಅನರ್ಹಗೊಂಡಿದ್ದಾರೆ.

ಸಂಘದ ಸದಸ್ಯ ಪ್ರಕಾಶ ರಾಮಚಂದ್ರ ಹೆಗಡೆ ಅವರು ನೀಡಿದ ದೂರು ಪರಿಗಣಿಸಿದ ನ್ಯಾಯಾಲಯ ಪ್ರತಿವಾದಿಗಳಿಗೆ ಕಳೆದ ಅ. ೨೨ರಂದು ಕಚೇರಿಗೆ ಹಾಜರಾಗಿ ಅಹವಾಲು ತಿಳಿಸಲು ಅವಕಾಶ ನೀಡಿತ್ತು. ಪ್ರತಿವಾದಿಗಳು ಲಿಖಿತ ಹೇಳಿಕೆಯನ್ನು ನೀಡಿ ಅಹವಾಲು ಸಲ್ಲಿಸಿದ್ದು, ಸಂಘದಲ್ಲಿ ಸದಸ್ಯರ ಹಣಕಾಸಿನ ಅನಿವಾರ್ಯ ಪ್ರಸಂಗಗಳಲ್ಲಿ ಅರ್ಹತೆಗಿಂತ ಹೆಚ್ಚಿಗೆ ಸಾಲ ನೀಡಿದ್ದು ಇದೆ. ಸಂಘದ ಇತ್ತೀಚಿನ ಬೈಲಾ ಪ್ರಕಾರ ಮಿತಿಗಿಂತ ಹೆಚ್ಚಿಗೆ ಸಾಲ ಮತ್ತು ಬಡ್ಡಿ ರಿಯಾಯಿತಿ ನೀಡಿಲ್ಲ. ಈ ಬಗ್ಗೆ ಲೆಕ್ಕಪರಿಶೋಧನಾ ವರದಿಯಲ್ಲಿ ಆಕ್ಷೇಪಣೆ ನಮೂದು ಸಹಿತ ಇರುವುದಿಲ್ಲ. ದೂರುದಾರರು ಈ ಬಗ್ಗೆ ದಾಖಲೆ ನೀಡುತ್ತಾರೆಯೇ ಎಂದು ಲಿಖಿತ ಹೇಳಿಕೆಯಲ್ಲಿ ಕೇಳಿದ್ದರು.ಈ ತಕರಾರನ್ನು ವಿಮರ್ಶಿಸಿದ ನ್ಯಾಯಾಲಯ ಕೆಡಿಸಿ ಬ್ಯಾಂಕ್‌ನ ೨೦೨೧- ೨೨ರ ಸಾಲಿನ ಆಂತರಿಕ ತಪಾಸಣೆ ವರದಿ ಆಧರಿಸಿ ಆದೇಶ ನೀಡಿದ್ದು, ಸಂಘದ ಪೋಟ್ ನಿಯಮದ ಪ್ರಕಾರ ಸದಸ್ಯರಿಗೆ ನೀಡಬಹುದಾದ ಸಾಲ ಪ್ರಕರಣಗಳಲ್ಲಿ ಮಿತಿಮೀರಿ ಸಾಲ ನೀಡಿರುವುದು, ಸಂಘದ ಕಾಯ್ದೆ ಉಲ್ಲಂಘಿಸಿರುವುದು ಸಾಬೀತಾಗಿದೆ. ಇಲಾಖೆಯ ಅನುಮತಿ ಪಡೆಯದೇ ಏಕಕಾಲಿಕ ಸಾಲ ತಿರುವಳಿ ಮಾಡಿದೆ. ಇದು ಸಂಘದ ಬೈಲಾ ಉಲ್ಲಂಘನೆಯಾಗಿದೆ. ಹೀಗಾಗಿ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ೧೯೫೯ ಕಲಂ೨೯(ಸಿ)೮(ಬಿ) ಪ್ರಕಾರ ಸಂಘದ ಅಧ್ಯಕ್ಷ ಸುಬ್ರಾಯ ನಾರಾಯಣ ಭಟ್ಟ ಮತ್ತು ನಿರ್ದೇಶಕ ವಿವೇಕ ಸುಬ್ರಾಯ ಭಟ್ಟ ಅವರನ್ನು ಮುಂದಿನ ೩ ವರ್ಷಗಳವರೆಗೆ ದೊಡ್ಮನೆ ಸಹಕಾರಿ ಸಂಘದಲ್ಲಿ ಮತ್ತು ಇತರೆ ಯಾವುದೇ ಸಹಕಾರ ಸಂಘಗಳ ಆಡಳಿತ ಮಂಡಳಿ ಸದಸ್ಯರನ್ನಾಗಿ ಮುಂದುವರಿಯಲು ಮತ್ತು ಆಡಳಿತ ಮಂಡಳಿ ಚುನಾವಣೆಗೆ ಸ್ಪರ್ಧಿಸಲು ಅನರ್ಹರನ್ನಾಗಿ ಘೋಷಿಸಲಾಗಿದೆ ಎಂದು ತನ್ನ ಆದೇಶದಲ್ಲಿ ತಿಳಿಸಿದೆ.