ಮಕ್ಕಳ ಮೇಲೆ ಒತ್ತಡ ಹೇರಬೇಡಿ

| Published : Feb 13 2024, 12:46 AM IST

ಸಾರಾಂಶ

ಈಚೆಗೆ ಪೋಷಕರು ಮಕ್ಕಳನ್ನು ಹೆಚ್ಚು ಓದಿನತ್ತ ಗಮನಹರಿಸುವಂತೆ ಒತ್ತಡ ಹಾಕುತ್ತಿದ್ದಾರೆ. ಇದರಿಂದಾಗಿ ಮಕ್ಕಳ ಮನಸ್ಸಿನ ಮೇಲೆ ಒತ್ತಡ ಬೀರುವುದರಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಲು ಕಷ್ಟಸಾಧ್ಯ.

ಕನ್ನಡಪ್ರಭ ವಾರ್ತೆ ಬೆಳಗಾವಿಪಠ್ಯದ ಜತೆಗೆ ಕ್ರೀಡೆ, ಸಂಗೀತ ಸೇರಿದಂತೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದಲ್ಲಿ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಲು ಸಾಧ್ಯವಾಗುತ್ತದೆ ಎಂದು ಸಮಾಜ ಸೇವಕ ಪರಂಜ್ಯೋತಿ ಉಮರಾಣಿ ಹೇಳಿದರು.

ಜಿಲ್ಲೆಯ ಖಾನಾಪುರ ತಾಲೂಕಿನ ಗರ್ಲಗುಂಜಿ ಗ್ರಾಮದಲ್ಲಿರುವ ಶ್ರೀ ಸತ್ಯ ಸಾಯಿ ನಿತ್ಯನಿಕೇತನಂ ಗುರುಕುಲಂನಲ್ಲಿ ಭಾನುವಾರ ಆಯೋಜಿಸಿದ್ದ 2023-24 ರ ವಾರ್ಷಿಕ ಕ್ರೀಡಾ ಮತ್ತು ಸಾಂಸ್ಕೃತಿಕ ಕೂಟದ ಸಮಾರೋಪ ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಈಚೆಗೆ ಪೋಷಕರು ಮಕ್ಕಳನ್ನು ಹೆಚ್ಚು ಓದಿನತ್ತ ಗಮನಹರಿಸುವಂತೆ ಒತ್ತಡ ಹಾಕುತ್ತಿದ್ದಾರೆ. ಇದರಿಂದಾಗಿ ಮಕ್ಕಳ ಮನಸ್ಸಿನ ಮೇಲೆ ಒತ್ತಡ ಬೀರುವುದರಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಲು ಕಷ್ಟಸಾಧ್ಯ. ಆದ್ದರಿಂದ ಮಕ್ಕಳ ಮೇಲೆ ಒತ್ತಡ ಹಾಕದೆ, ಪಠ್ಯದ ಜತೆಗೆ ಕ್ರೀಡೆ, ಸಂಗೀತ ಸೇರಿದಂತೆ ಇನ್ನೀತರ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪೋಷಕರು ನೋಡಿಕೊಳ್ಳಬೇಕು ಎಂದರು.

ಶ್ರೀ ಸತ್ಯಸಾಯಿ ನಿತ್ಯನಿಕೇತನಂ ಗುರುಕುಲಂ ಪ್ರತಿಭಾವಂತ ಹಾಗೂ ಬಡವರ್ಗದ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ನಿಶ್ವಾರ್ಥದಿಂದ ಸೇವೆ ಸಲ್ಲಿಸುತ್ತಿದೆ. ಸದ್ಯ ಈ ಗುರುಕುಲಂನಲ್ಲಿ ವ್ಯಾಸಂಗ ಮಾಡುತ್ತಿರುವ 55 ವಿದ್ಯಾರ್ಥಿಗಳಿಗೆ, ಶಿಕ್ಷಣದ ಜತೆಗೆ ಊಟ, ವಸತಿ ಉಚಿತ ನೀಡುತ್ತಿರುವುದು ಶ್ಲಾಘನೀಯ ಎಂದರು.

ಶ್ರೀ ಸತ್ಯಸಾಯಿ ನಿತ್ಯನಿಕೇತನಂ ಗುರುಕುಲಂನ ಖಾನಾಪೂರ ಕೇಂದ್ರದ ಅಧ್ಯಕ್ಷ ಹರೀಶ ಮಾತನಾಡಿ, ಗುಣಮಟ್ಟದ ಶಿಕ್ಷಣ, ಯುವ ಮನಸ್ಸುಗಳನ್ನು ಪೋಷಿಸುವ ಮತ್ತು ಸಮಗ್ರ ಅಭಿವೃದ್ಧಿ ಉತ್ತೇಜಿಸುವುದರ ಜತೆಗೆ ಆರ್ಥಿಕವಾಗಿ ಹಿಂದುಳಿದ ಹಿಂದುಳಿದ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಶಿಕ್ಷಣ ಒದಗಿಸುವ ಉದಾತ್ತ ಧ್ಯೇಯದೊಂದಿಗೆ ಸಂಸ್ಥೆಯು ಕಾರ್ಯನಿರ್ವಹಿಸುತ್ತದೆ. ಸಾಮಾಜಿಕ ಜವಾಬ್ದಾರಿಗೆ ದೃಢವಾದ ಬದ್ಧತೆಯೊಂದಿಗೆ, ಗುರುಕುಲಂ ಶಿಕ್ಷಣದ ಅಡೆತಡೆಗಳನ್ನು ಎದುರಿಸುವುದರ ಮೂಲಕ ಮತ್ತು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಲು ಯುವ ವ್ಯಕ್ತಿಗಳಿಗೆ ಅಧಿಕಾರ ನೀಡುವ ಮೂಲಕ ಅಂಚಿನಲ್ಲಿರುವ ಸಮುದಾಯಗಳ ಜೀವನ ಉನ್ನತೀಕರಿಸುವ ಗುರಿ ಹೊಂದಿದೆ ಎಂದು ತಿಳಿಸಿದರು.

ಈ ವೇಳೆ ನಿಖಿತಾ ಉಮರಾಣಿ ಹಾಗೂ ಸಂತೋಷ ಸೇರಿದಂತೆ ಮೊದಲಾದವರು ಇದ್ದರು.