ವೈಜ್ಞಾನಿಕ ದತ್ತಾಂಶ ಸಂಗ್ರಹ ಮಾಡದೇ ಒಳ ಮೀಸಲು ಜಾರಿ ಬೇಡ

| Published : Oct 25 2024, 12:46 AM IST

ಸಾರಾಂಶ

ರಾಜ್ಯದಲ್ಲಿರುವ ಸುಮಾರು 101 ಪರಿಶಿಷ್ಟ ಜಾತಿಗಳ ವೈಜ್ಞಾನಿಕ ದತ್ತಾಂಶಗಳನ್ನು ಸಂಗ್ರಹಿಸದೇ ಸರ್ಕಾರ ತರಾತುರಿಯಲ್ಲಿ ಒಳಮೀಸಲಾತಿ ವರ್ಗೀಕರಣ ಮಾಡಬಾರದು ಎಂದು ಕರ್ನಾಟಕ ರಾಜ್ಯ ಬಂಜಾರ ಯುವಕರ ಮತ್ತು ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ಡಿ.ಆರ್. ಗಿರೀಶ್ ಹೇಳಿದರು.

ಕನ್ನಡ ಪ್ರಭ ವಾರ್ತೆ ಹೊನ್ನಾಳಿ

ರಾಜ್ಯದಲ್ಲಿರುವ ಸುಮಾರು 101 ಪರಿಶಿಷ್ಟ ಜಾತಿಗಳ ವೈಜ್ಞಾನಿಕ ದತ್ತಾಂಶಗಳನ್ನು ಸಂಗ್ರಹಿಸದೇ ಸರ್ಕಾರ ತರಾತುರಿಯಲ್ಲಿ ಒಳಮೀಸಲಾತಿ ವರ್ಗೀಕರಣ ಮಾಡಬಾರದು ಎಂದು ಕರ್ನಾಟಕ ರಾಜ್ಯ ಬಂಜಾರ ಯುವಕರ ಮತ್ತು ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ಡಿ.ಆರ್. ಗಿರೀಶ್ ಹೇಳಿದರು.

ಅವರು ಸಂಘದ ಪದಾಧಿಕಾರಿಗಳೊಂದಿಗೆ ಗುರುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಸರ್ಕಾರ ಒಳಮೀಸಲಾತಿ ವಿಚಾರದ ಬಗ್ಗೆ ಗಂಭೀರ ಚಿಂತನೆ ನಡೆಸುವ ಅವಶ್ಯಕತೆ ಇದ್ದು, ಇದನ್ನು ರಾಜಕೀಯವಾಗಿ ಬಳಸದೇ ಒಟ್ಟಾರೆಯಾಗಿ ಇಡೀ ಜನಸಮುದಾಯದ ಒಳಿತನ್ನು ಪರಿಗಣಿಸಿ ಜಾರಿ ಮಾಡಬೇಕಾಗುತ್ತದೆ ಎಂದರು.

ಪರಿಶಿಷ್ಟಜಾತಿ ಪಟ್ಟಿರುವ ವಿವಿಧ ಜನ ಸಮಾದಾಯಗಳಿಗೆ ಶಿಕ್ಷಣ ಉದ್ಯೋಗದಲ್ಲಿ ದೊರಕಿರುವ ಅವಕಾಶಗಳು, ಆರ್ಥಿಕ ಸ್ಥಿತಿಗತಿ ರಾಜಕೀಯ ಸ್ಥಾನಮಾನ ಮತ್ತು ಸಾಮಾಜಿಕ ವ್ಯವಸ್ಥೆಯ ನಿಖರ ಅಂಕಿ ಅಂಶಗಳನ್ನೊಳಗೊಂಡ ವೈಜ್ಞಾನಿಕ ದತ್ತಾಂಶವನ್ನು ಆಧರಿಸಿಯೇ ಒಳಮೀಸಲಾತಿ ಜಾರಿ ನಿರ್ಧಾರವನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ 2011ರ ನಂತರ ಜನಗಣತಿಯೇ ನಡೆದಿದಿಲ್ಲ. ಜನಸಂಖ್ಯೆ ಪ್ರಸ್ತತ ನಿಖರ ಮಾಹಿತಿ ಇಲ್ಲದೆ ಏಕಾಏಕಿ ಒಳಮೀಸಲಾತಿ ಕಲ್ಪಿಸುವುದು ಸಮಂಜಸವಲ್ಲ. ಇಂತಹ ತಪ್ಪನ್ನು ಅಡಳಿತ ನಡೆಸುವ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಮಾಡಬಾರದು ಎಂದು ಎಂದು ತಿಳಿಸಿದರು.

ಮೀಸಲಾತಿ ವರ್ಗೀಕರಣವು ಪರಿಶಿಷ್ಟ ಜಾತಿಯ ಸಹೋದರ ಸಮುದಾಯಗಳ ಏಕತೆಗೆ ಧಕ್ಕೆ ತರಬಾರದು. ಎಲ್ಲಾ ಪರಿಶಿಷ್ಟ ಜಾತಿಗಳ ಹಿತವನ್ನು ಕಾಪಾಡಲು ಸರ್ಕಾರ ಕಟಿ ಬದ್ಧವಾಗಿರಬೇಕು. ನ್ಯಾಯ ಸಮ್ಮತ ಮತ್ತು ಸಂವಿಧಾನಿಕ ಅಂಶಗಳ ದೃಷ್ಟಿಯಿಂದ ಸರ್ಕಾರ ಹೊಸದಾಗಿ ಅಧ್ಯಯನ ಮಾಡಬೇಕು. ಅದಕ್ಕಾಗಿ ಎಲ್ಲಾ ಸಮುದಾಯಗಳ ಒಳಗೊಂಡ ಒಂದು ಆಯೋಗವನ್ನು ರಚಿಸಬೇಕು ಎಂದು ಅಗ್ರಹಿಸಿದರು.

ಸೂಕ್ತ ಆಧ್ಯಯನ ಮತ್ತು ಪ್ರಾತಿನಿಧ್ಯದ ಕೊರತೆ ಸಾಬೀತು ಪಡಿಸುವ ದತ್ತಾಂಶಗಳು ಲಭ್ಯವಾಗುವವರೆಗೂ ಒಳಮೀಸಲಾತಿ ವರ್ಗೀಕರಣ ಮಾಡಬಾರದು ಎಂದು ಅವರು ಸರ್ಕಾರಕ್ಕೆ ಒತ್ತಾಯಿಸಿದರು.

2011ರ ಜನಗಣತಿಯಾಗಿ ಸರಿಸುಮಾರು 13 ವರ್ಷಗಳಾಗಿದ್ದು, ಈ ಅವಧಿಯಲ್ಲಿ ಎಲ್ಲಾ ಜನ ಸಮುದಾಯಗಳಲ್ಲಿ ಶೈಕ್ಷಣಿಕ ಆರ್ಥಿಕ, ಸಾಮಾಜಿಕ ಮತ್ತ ರಾಜಕೀಯ ಸ್ಥಾನಮಾನಗಳಲ್ಲಿ ಗಣನೀಯ ಬದಲಾವಣೆಗಳಾಗಿವೆ. ಒಳಮೀಸಲಾತಿ ವರ್ಗೀಕರಣ ಅಂಕಿ ಆಂಶಗಳ ವರದಿಯ ನಂತರ ವೈಜ್ಞಾನಿಕವಾಗಿ ಪರಿಶೀಲನೆ ಮಾಡಿ ಒಳಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಮುಂದುವರೆಯಬೇಕು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ನ್ಯಾಮತಿ ತಾಲೂಕು ಸಂಘದ ಅಧ್ಯಕ್ಷ ಮಂಜುನಾಯ್ಕ, ದೊಡ್ಡೇರಿ ಪ್ರಕಾಶ್ ನಾಯ್ಕ, ಪವನ್ ನಾಯ್ಕಉಜ್ಜನೀಪುರ ಸೇರಿದಂತೆ ರಾಜ್ಯ ಬಂಜಾರ ಯುವಕರ ಮತ್ತು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಇದ್ದರು.