ಕನ್ನಡಪ್ರಭ ವಾರ್ತೆ ರಾಮನಗರ

ಬಿಡದಿ ಟೌನ್ ಶಿಪ್ ಹೆಸರಿನಲ್ಲಿ ಭೂಮಿ ಕಸಿದುಕೊಂಡು ಬೀದಿಗೆ ತಳ್ಳಬೇಡಿ, ಸಣ್ಣ ರೈತರನ್ನು ಬದುಕಲು ಬಿಡಿ...ಭೂ ತಾಯಿ ರೈತರ ಸ್ವಾಭಿಮಾನದ ಪ್ರತೀಕ...ಅಲ್ಲಿ ನಮ್ಮ ಪೂರ್ವಜರ ಸಮಾಧಿಗಳಿದ್ದು, ಆ ಭೂಮಿಯೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದೇವೆ...ಇಲ್ಲಿರುವ ಲಕ್ಷಾಂತರ ಪ್ರಾಣಿ ಪಕ್ಷಿಗಳು ಏನಾಗಬೇಕು... ಭೂಮಿ ನಂಬಿರೋ ನಮಗೆ ವ್ಯವಸಾಯ ಬಿಟ್ಟು ಬೇರೋನು ಗೊತ್ತಿಲ್ಲ...ಜಮೀನು ಕೊಡದ ನಮ್ಮನ್ನು ಹೆದರಿಸುವ, ಹಣದ ದಾಹ ತೋರಿಸಿ ಬಾಂಧವ್ಯದಲ್ಲಿ ಬಿರುಕು ಮೂಡಿಸುತ್ತಿದ್ದಾರೆ.

ಇದು ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ಬೈರಮಂಗಲ - ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ರೈತರ ಭೂ ಹಿತರಕ್ಷಣಾ ಸಂಘದ ನೇತೃತ್ವದಲ್ಲಿ ಕಳೆದ 500 ದಿನಗಳಿಂದ ರೈತರು ಚಳವಳಿ ನಡೆಸುತ್ತಿರುವ ಬೈರಮಂಗಲ ವೃತ್ತದಲ್ಲಿ ಗುರುವಾರ ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆ ಸಹಯೋಗದೊಂದಿಗೆ ಆಯೋಜಿಸಿದ್ದ ಸಾರ್ವಜನಿಕರ ವಿಚಾರಣೆ (ಪಬ್ಲಿಕ್ ಹಿಯರಿಂಗ್)ಯ ಕಟಕಟೆಯಲ್ಲಿ ನಿಂತ ಅನ್ನದಾತರಿಂದ ವ್ಯಕ್ತವಾದ ನೋವಿನ ನುಡಿಗಳು.

ಕಂಚುಗಾರನಹಳ್ಳಿ ರೈತ ಮಹಿಳೆ ಸುಮಾ, ಫಲವತ್ತಾದ - ನೀರಾವರಿ ಕೃಷಿ ಭೂಮಿಯನ್ನು ನಂಬಿ ಸಣ್ಣ ಹಿಡುವಳಿದಾರರು ಜೀವನ ಕಟ್ಟಿಕೊಂಡ್ದಿದ್ದಾರೆ. ಅವರನ್ನು ಬದುಕಿಸಿಕೊಡಿ ಎಂದು ಮನವಿ ಮಾಡಿದರೆ, ಕಂಚುಗಾರನಹಳ್ಳಿ ಗುಂಡುತೋಪು ಮುತ್ತುರಾಜ್ ರವರು, ಭೂಮಿ ತಾಯಿ ನಂಬಿ ಜೀವನ ಮಾಡುತ್ತಿದ್ದೇವೆ. ನಮಗೆ ವ್ಯವಸಾಯ ಬಿಟ್ಟು ಬೇರೇನೂ ಗೊತ್ತಿಲ್ಲ. ಭೂಮಿನೇ ಇಲ್ಲದಿದ್ದರೆ ಜೀವನ ನಡೆಸುವುದು ಹೇಗೆಂದು ಪ್ರಶ್ನೆ ಮಾಡಿದರು.

ಕೃಷಿಯಿಂದ ₹60 ಸಾವಿರ ಸಂಪಾದನೆ ಮಾಡುತ್ತಿದ್ದೇನೆ. ಭೂ ಸ್ವಾಧೀನ ಮಾಡಿಕೊಂಡರೆ ಎಷ್ಟು ಹಣ ಬರುತ್ತದೆ. ಆ ಹಣ ಎಷ್ಟು ದಿನ ಇರುತ್ತದೆ. ಅದರಿಂದ ನನ್ನ ಬದುಕು ಕಟ್ಟಿಕೊಳ್ಳಲು ಆಗಲ್ಲ. ಅಲ್ಲಿ ನಮ್ಮ ಪೂರ್ವಜರ ಸಮಾಧಿಗಳಿದ್ದು, ಅ‍ದರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದೇವೆ. ಸ್ವಾಧೀನದ ಹೆಸರಿನಲ್ಲಿ ಅವುಗಳಿಗೆ ಧಕ್ಕೆ ತಂದರೆ ನೋವಾಗುತ್ತದೆ ಎಂದು ಕೆಂಪಶೆಟ್ಟಿದೊಡ್ಡಿ ಮಂಜುನಾಥ್ ನೊಂದು ನುಡಿದರು.


ಸತ್ತಾಗ ಹೂಳಲು ಭೂಮಿ ಬೇಡವೇ :

ಸಿದ್ದಯ್ಯನದೊಡ್ಡಿ ಶಾಂಭವಿ ಮಾತನಾಡಿ, ಭೂಮಿ ರೈತರ ಪಾಲಿಗೆ ಸ್ವಾವಲಂಬನೆಯ ಪ್ರತೀಕ. ಅದಿದ್ದರೆ ಮಾತ್ರ ಸ್ವಾಭಿಮಾನದ ಬದುಕು ನಡೆಸಲು ಸಾಧ್ಯ. ಸತ್ತಾಗ ನಮ್ಮನ್ನು ಹೂಳಲು ಭೂಮಿ ಬೇಡವೇ, ಭೂಮಿನೇ ಇಲ್ಲದಿದ್ದರೆ ನನ್ನ ಮಗನ ನರ್ಸರಿ ಕನಸು ಸಾಕಾರಗೊಳಿಸುವುದು ಹೇಗೆಂದು ಕೇಳಿದರು.

ತಾಯಪ್ಪನದೊಡ್ಡಿ ಸುತ್ತಮುತ್ತ ಹಿರಿಯ ಅಧಿಕಾರಿಗಳೇ ಸಂಬಂಧಿಕರ ಹೆಸರಿನಲ್ಲಿ ಭೂಮಿ ಖರೀದಿಸಿದ್ದು, ಆ ರೀತಿಯ ದೊಡ್ಡ ಜಮೀನುದಾರರು ಭೂಮಿ ಕೊಡಲು ಸಿದ್ಧರಾಗಿದ್ದಾರೆ. ಜಮೀನು ಕೊಡದ ರೈತರಿಗೆ ಬೆದರಿಕೆ ಹಾಕುತ್ತಿದ್ದು, ಕೂಲಿ ಮಾಡಿ ಜೀವನ ಸಾಗಿಸುತ್ತಿರುವವರು ಮಕ್ಕಳನ್ನು ಎಂಜಿನಿಯರ್ ಓದಿಸಿದ್ದಾರೆ. ಕೂಲಿ ಮಾಡುವ ನಮ್ಮಗಳ ಪಾಡು ಏನಾಗಬೇಕು ಎಂದು ಕೃಷ್ಣಮೂರ್ತಿ ಪ್ರಶ್ನೆ ಮಾಡಿದರು.

ನಂಜೇಗೌಡನದೊಡ್ಡಿ ನಾಗರಾಜ್ ಮಾತನಾಡಿ, ಭೂ ಸ್ವಾಧೀನದ ಬೂತ ರೈತರನ್ನು ಅತಂತ್ರರನ್ನಾಗಿ ಮಾಡಿದ್ದು, ಹಣದ ದಾಹ ತೋರಿಸಿ ಬಾಂಧವ್ಯದಲ್ಲಿ ಬಿರುಕು ಮೂಡಿಸಲಾಗುತ್ತಿದೆ. ದಪ್ಪಚರ್ಮದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಪಂಚೇಂದ್ರಿಯಗಳನ್ನು ಕಳೆದುಕೊಂಡಿದ್ದಾರೆ ಎಂದು ಟೀಕಿಸಿದರು.

ಪ್ರಾಣಿ ಪಕ್ಷಿಗಳ ಪಾಡು ಏನಾಗಬೇಕು:

ಈ ಭೂಮಿನ ನಂಬಿಕೊಂಡು ರೈತರು ಮಾತ್ರವಲ್ಲ ಲಕ್ಷಾಂತರ ನವಿಲುಗಳು, ಪ್ರಾಣಿ ಪಕ್ಷಿಗಳು ಇದ್ದಾವೆ. ಮಲೆನಾಡಿನಂತಿರುವ ಈ ಪ್ರದೇಶದಲ್ಲಿ ಕಾಂಕ್ರಿಟ್ ನಾಡು ಕಟ್ಟಿದರೆ ಪ್ರಾಣಿ ಪಕ್ಷಗಳು ಏನಾಗಬೇಕು ಎಂದು ಚಿಕ್ಕಬೈರಮಂಗಲ ನಾಗೇಶ್ ಕುಮಾರ್ ಪ್ರಶ್ನಿಸಿದರು.

ಅಂಚೀಪುರ ಗ್ರಾಮದ ಪದ್ಮಾವತಿ ಮಾತನಾಡಿ, ಹುಟ್ಟಿದಾಗಿನಿಂದ ಕೃಷಿ ‍ಅವಲಂಬಿಸಿ ಸುಖವಾದ ಜೀವನ ನಡೆಸುತ್ತಿದ್ದೇವೆ. ಎಂಕಾಂ, ಎಂಸ್ಸಿ ಮಾಡಿರುವ ಮಕ್ಕಳು ಭೂಮಿ ಕೊಡಬೇಡಿ ಅನ್ನುತ್ತಿದ್ದಾರೆ. ಪ್ರಾಣ ಹೋದರೂ ಸರಿ ಯಾವ ಕಾರಣಕ್ಕೂ ಭೂಮಿ ಮಾತ್ರ ಕೊಡುವುದಿಲ್ಲ ಎಂದು ಹೇಳಿದರು.

26 ಗ್ರಾಮಗಳ ರೈತರು ಕೃಷಿ ಜೊತೆಗೆ ಹೈನುಗಾರಿಕೆ ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ. ಭವಿಷ್ಯದ ದೃಷ್ಟಿಯಿಂದ ಭೂಮಿ ದಾನ ಮಾಡುವಂತೆ ಮುಖ್ಯಮಂತ್ರಿಗಳು ಹೇಳುತ್ತಾರೆ. ಈಗಾಗಲೇ ವೃಷಭಾವತಿ ಕೆರೆಗೆ ಭೂಮಿ ದಾನ ಮಾಡಿದ್ದೇವೆ. ಇನ್ನು ದಾನ ಮಾಡುವಷ್ಟು ದಾನಶೂರತ್ವ ಇಲ್ಲ. ಭೂಮಿ ಬಿಟ್ಟುಕೊಟ್ಟು ರೈತರು ಸ್ವಾವಲಂಬಿ ಜೀವನ ನಡೆಸಲು ಅವಕಾಶ ಮಾಡಿಕೊಡಿ ಎಂದು ಬೈರಮಂಗಲ ಪುರುಷೋತ್ತಮ್ ಮನವಿ ಮಾಡಿದರು.

ಬೈರಮಂಗಲ ನಾಗರಾಜ್, ರಾಜಣ್ಣ, ಅಂಚಿಪುರ ಸುರೇಶ್ ಸೇರಿದಂತೆ ಅನೇಕ ರೈತರು ಮತ್ತು ಕೃಷಿ ಕೂಲಿಕಾರರು ಅಹವಾಲುಗಳನ್ನು ಸುಪ್ರೀಂ ಕೋರ್ಟಿನ ವಿಶ್ರಾಂತ ನ್ಯಾಯಾಧೀಶರಾದ ವಿ.ಗೋಪಾಲಗೌಡ ಆಲಿಸಿದರು.

ಅರ್ಥಶಾಸ್ತ್ರಜ್ಞ ಡಾ.ಪ್ರಕಾಶ್ ಕಮ್ಮರಡಿ, ಸಮಾಜ ಶಾಸ್ತ್ರಜ್ಞೆ ಡಾ.ಎ.ಆರ್.ವಾಸವಿ, ಹಿರಿಯ ಪತ್ರಕರ್ತ ಡಿ.ಉಮಾಪತಿ ಉಪಸ್ಥಿತರಿದ್ದರು.