ಸಾರಾಂಶ
ಹುಬ್ಬಳ್ಳಿ: ನಮ್ಮದು (ಬಿಜೆಪಿ) ಭ್ರಷ್ಟಾಚಾರ ಹಟಾವೋ ಘೋಷಣೆಯಾದರೆ, ಅವರದು (ಇಂಡಿಯಾ ಕೂಟ) ಭ್ರಷ್ಟಾಚಾರ ಬಚಾವೋ ಘೋಷವಾಕ್ಯವಾಗಿದೆ. ಯಾವ ಸರ್ಕಾರ ಬೇಕು ನೀವೇ ನಿರ್ಧರಿಸಿ...
ಇದು ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಧಾರವಾಡ ಲೋಕಸಭಾ ಕ್ಷೇತ್ರದ ವಿವಿಧ ಸಮುದಾಯಗಳ ಪ್ರಮುಖರ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಕೇಳಿದ ಪ್ರಶ್ನೆ.ಬರೋಬ್ಬರಿ ಅರ್ಧಗಂಟೆ ಭಾಷಣದಲ್ಲಿ ಕೇಂದ್ರ ಸರ್ಕಾರದ ಸಾಧನೆ, ವಿರೋಧ ಪಕ್ಷಗಳ ವೈಫಲ್ಯಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಇಂಡಿಯಾ ಒಕ್ಕೂಟದಲ್ಲಿರುವ ನಾಯಕರಲ್ಲಿ ಅರ್ಧ ಜನ ಜೈಲಿನಲ್ಲಿದ್ದರೆ, ಅರ್ಧ ಜನ ಬೇಲ್ ಮೇಲೆ ಹೊರಗೆ ಇದ್ದಾರೆ. ಭ್ರಷ್ಟಾಚಾರ ಮಾಡಿಯೇ ಎಲ್ಲರೂ ಜೈಲು ಸೇರಿದವರು. ಅವರ ಘೋಷವಾಕ್ಯವೆಲ್ಲ ಭ್ರಷ್ಟಾಚಾರ ಬಚಾವೋ ಎಂಬುದೇ ಆಗಿದೆ. ಆದರೆ ಮೋದಿ ನೇತೃತ್ವದ ಎನ್‌ಡಿಎ ಒಕ್ಕೂಟದ್ದು ಭ್ರಷ್ಟಾಚಾರ ಮುಕ್ತ, ವಿಕಸಿತ ಭಾರತದ ಕಲ್ಪನೆ ಎಂದರು.
ಇಂಡಿಯಾ ಒಕ್ಕೂಟ ಎಂದರೆ ಭ್ರಷ್ಟಾಚಾರಿಗಳು, ಪರಿವಾರವಾದಿಗಳ ಒಕ್ಕೂಟವಾಗಿದೆ ಎಂದು, ಅವರ ಕಾಲದಲ್ಲಿನ ಭ್ರಷ್ಟಾಚಾರವನ್ನು ಹೇಳುತ್ತಲೇ ಇಂಡಿಯಾ ಒಕ್ಕೂಟದಲ್ಲಿರುವ ಯಾರೆಲ್ಲ ಜೈಲಿನಲ್ಲಿದ್ದಾರೆ. ಯಾರೆಲ್ಲ ಬೇಲ್ ಮೇಲಿದ್ದಾರೆ ಎಂಬುದನ್ನು ತಿಳಿಸಿದರು.ಪರಿವಾರವಾದಿಗಳು: ಇನ್ನು ಅಲ್ಲಿ ಇರುವ ಎಲ್ಲ ಪಕ್ಷಗಳು ಪರಿವಾರವಾದಿಗಳದ್ದೇ ಆಗಿವೆ. ಎಲ್ಲ ಪಕ್ಷಗಳು ವಂಶಪಾರಂಪರ್ಯ ಪಕ್ಷಗಳೇ ಆಗಿವೆ. ಆದರೆ ನಮ್ಮದು ಸಾಮಾನ್ಯ ಕಾರ್ಯಕರ್ತರ ಪಕ್ಷ. ಅಲ್ಲದೇ, ಪರಿವಾರವಾದಿಗಳ ಪಕ್ಷಗಳ ಒಕ್ಕೂಟ, ಭ್ರಷ್ಟಾಚಾರ ಬಚಾವೋ ಎನ್ನುವ ಒಕ್ಕೂಟ ಅಧಿಕಾರಕ್ಕೆ ಬರಬೇಕೋ? ಭ್ರಷ್ಟಾಚಾರ ಮುಕ್ತ, ಸುಸ್ಥಿರ, ಸುರಕ್ಷಿತ ಭಾರತ, ಭಾರತವನ್ನು ವಿಕಸಿತಗೊಳಿಸುವ ಪಕ್ಷದ ಸರ್ಕಾರ ಬೇಕೋ ಎಂದು ಪ್ರಶ್ನಿಸಿದರು. ಇದಕ್ಕೆ ಸೇರಿದ್ದ ಜನಸಮೂಹ ಕೂಡ ಚಪ್ಪಾಳೆ, ಕೇಕೇ ಹಾಕುವ ಮೂಲಕ ಎನ್‌ಡಿಎ ಒಕ್ಕೂಟಕ್ಕೆ ತಮ್ಮ ಸಹಮತಿ ಸೂಚಿಸಿದರು.
ಚೊಂಬು ದಾರಿ ತಪ್ಪಿಸುತ್ತಿದೆ: ಕರ್ನಾಟಕಕ್ಕೆ ಫಂಡಿಂಗ್ ಬಗ್ಗೆ ಬಲು ಚರ್ಚೆಯಾಗುತ್ತಿದೆ. ಏನೇನೋ ಹೇಳಿ ಜನರ ಹಾದಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಆದರೆ, ಕಳೆದ ಹತ್ತು ವರ್ಷದಲ್ಲಿ ಕರ್ನಾಟಕಕ್ಕೆ ಕೇಂದ್ರದ ಯೋಜನೆಗಳಿಗೆ ನೀಡುವ ಅನುದಾನವನ್ನು 3 ಪಟ್ಟು ಹೆಚ್ಚಿಸಿದ್ದೇವೆ. 4 ಪಟ್ಟು ಹೆಚ್ಚು ಹಣ ಕೊಟ್ಟಿದ್ದೇವೆ. ಆದರೂ ಜನರ ಹಾದಿ ತಪ್ಪಿಸುವ ಕೆಲಸವನ್ನು ಇಲ್ಲಿನ ಸರ್ಕಾರ ಮಾಡುತ್ತಿದೆ ಎಂದು ಹೇಳಿದರು. ಈ ಮೂಲಕ ಕರ್ನಾಟಕ ಕಾಂಗ್ರೆಸ್ ಕೊಡುತ್ತಿರುವ "ಚೊಂಬು " ಜಾಹೀರಾತನ್ನು ಹೆಸರು ಹೇಳದೇ ಟೀಕಿಸಿದರು.ಕಾಂಗ್ರೆಸ್ ಸರ್ಕಾರ 60 ವರ್ಷ ಆಡಳಿತ ನಡೆಸಿದೆ. ಗರೀಬಿ ಹಟಾವೋ ಎಂದು ನೆಹರು, ಇಂದಿರಾಗಾಂಧಿ, ರಾಜೀವಗಾಂಧಿ ಎಲ್ಲರೂ ಹೇಳಿದರು. ಗರೀಬಿ ಹೋಯಿತೇ ಎಂದು ಪ್ರಶ್ನಿಸಿದರು. ಇದೀಗ ಅವರ ಮೊಮ್ಮಗ (ರಾಹುಲ್ ಗಾಂಧಿ) ಬಡತನ ನಿರ್ಮೂಲನೆ ಮಾಡುತ್ತೇನೆ ಎಂದೆಲ್ಲ ಹೇಳುತ್ತಿದ್ದಾರೆ. ಆದರೆ ಇನ್ನೂ ಅದೇಕೆ ಸಾಧ್ಯವಾಗಲಿಲ್ಲ? ಆದರೆ ಮೋದಿ ನೇತೃತ್ವದ ಸರ್ಕಾರ ಹಾಗಲ್ಲ. ಗರೀಬಿ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಅವರನ್ನು ಮೇಲೆತ್ತುವ ಕೆಲಸ ಮಾಡುತ್ತಿದೆ ಎಂದರು.
ಜಿಎವೈಎನ್: ಮೋದಿ ಅವರದ್ದು ಜಿಎನ್‌ವೈಎನ್ ಎಂಬುದು ಬೀಜ ಮಂತ್ರ. "ಜಿ " ಎಂದರೆ ಗರೀಬಿ ಕಲ್ಯಾಣ, ಎ- ಎಲ್ಲರಿಗೂ ಅನ್ನ ನೀಡುವುದು. ವೈ- ಯುವ ಸಮೂಹದ ಕಲ್ಯಾಣ, ಎನ್- ನಾರಿಶಕ್ತಿ ಹೀಗೆ ಎಲ್ಲರನ್ನು ಮೇಲೆತ್ತುವ ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಗರೀಬಿ ಕಲ್ಯಾಣ ಸೇರಿದಂತೆ ವಿವಿಧ ಯೋಜನೆಗಳಿಂದ ರಾಷ್ಟ್ರದಲ್ಲಿ 25 ಸಾವಿರ ಕೋಟಿ ಜನ ಬಿಪಿಎಲ್‌ನಿಂದ ಎಪಿಎಲ್‌ಗೆ ಬಂದಿದ್ದಾರೆ. ಇದೀಗ ಭಾರತದಲ್ಲಿ ಅತಿ ಬಡವರ ಸಂಖ್ಯೆ ಶೇ. 1ಕ್ಕಿಂತಲೂ ಕಡಿಮೆ ಇದೆ. ಇದು ನಮ್ಮ ಸಾಧನೆ ಎಂದರು.ವಿಕಸಿತ, ಅಭಿವೃದ್ಧಿ ಹೊಂದಿದ ರಾಷ್ಟ್ರ ನಿರ್ಮಾಣವಾಗಬೇಕೆಂದರೆ ಬಿಜೆಪಿಗೆ ಮತ ಹಾಕಿ. ಇದು ಬರೀ ಜೋಶಿ ಅವರ ಚುನಾವಣೆಯಲ್ಲ, ವಿಕಸಿತ ಭಾರತ ಕಲ್ಪನೆಯ ಚುನಾವಣೆ. ಇದನ್ನು ನೆನಪಿಟ್ಟುಕೊಳ್ಳಿ. ಹಾಗಂತ ಬರೀ ನೀವಷ್ಟೇ ಮತ ಹಾಕುವುದಲ್ಲ. ನಿಮ್ಮ ಸುತ್ತಮುತ್ತಲಿನವರಿಂದಲೂ ಬಿಜೆಪಿಗೆ ಮತ ಹಾಕಿಸಿ ಎಂದು ಮನವಿ ಮಾಡಿದರು.
ನಾನು ಸಾಮಾನ್ಯ ವ್ಯಕ್ತಿ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ನಾನು ಸಾಮಾನ್ಯ ಕುಟುಂಬದಿಂದ ಬಂದಿದ್ದೇನೆ. ನೀವು ತಲೆ ತಗ್ಗಿಸುವ ಕೆಲಸವನ್ನು ಈ ನಾಲ್ಕು ಅವಧಿಯಲ್ಲಿ ಮಾಡಿಲ್ಲ. ಮುಂದೆಯೂ ಮಾಡಿಲ್ಲ. ಈ ಸಲವೂ ತಮಗೆ ಆಶೀರ್ವದಿಸಬೇಕು ಎಂದು ಮನವಿ ಮಾಡಿಕೊಂಡರು.ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಶಾಸಕರಾದ ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ, ಮಾಜಿ ಶಾಸಕರಾದ ಅಶೋಕ ಕಾಟವೆ, ಸೀಮಾ ಮಸೂತಿ, ಜಿಲ್ಲಾಧ್ಯಕ್ಷರಾದ ತಿಪ್ಪಣ್ಣ ಮಜ್ಜಗಿ, ನಿಂಗಪ್ಪ ಸುತಗಟ್ಟಿ, ಧಾರವಾಡ ವಿಭಾಗದ ಪ್ರಭಾರಿ ಲಿಂಗರಾಜ ಪಾಟೀಲ, ಕ್ಷೇತ್ರದ ಚುನಾವಣಾ ಸಂಚಾಲಕ ಎಂ. ನಾಗರಾಜ ಸೇರಿದಂತೆ ಹಲವರಿದ್ದರು.ಶ್ರದ್ಧಾಂಜಲಿ: ಕಾರ್ಯಕ್ರಮಕ್ಕೂ ಮೊದಲು ಇಲ್ಲಿನ ಬಿವಿಬಿ ಕಾಲೇಜ್ ಕ್ಯಾಂಪಸ್‌ನಲ್ಲಿ ಕೊಲೆಗೀಡಾದ ನೇಹಾ ಹಿರೇಮಠ ಸೇರಿದಂತೆ ಎರಡ್ಮೂರು ದಿನಗಳಲ್ಲಿ ಕರ್ನಾಟಕದಲ್ಲಿ ಕೊಲೆಯಾದ 8 ಜನರ ಆತ್ಮಕ್ಕೆ ಶಾಂತಿಕೋರಿ ಎರಡು ನಿಮಿಷ ಮೌನ ಆಚರಿಸಲಾಯಿತು.