ಸಾರಾಂಶ
ಬೈಲಾ ನಿಯಮ ಉಲ್ಲಂಘಿಸಿ, ನಿಮ್ಮ ಹಿಂದೆ ಓಡಾಡಿದವರೆಲ್ಲರಿಗೂ ಸದಸ್ಯರನ್ನಾಗಿಸಿದ್ದೀರಿ. ಅವರು ವಿದ್ಯಾಶಾಲೆಗೆ ಭೇಟಿ ನೀಡುವುದಿಲ್ಲ. ಹೆಸರಿಗೆ ಮಾತ್ರ ಸದಸ್ಯರಾಗಿರುತ್ತಾರೆ.
ಬಳ್ಳಾರಿ: ನಗರದ ವೈ. ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಭಾನುವಾರ ಜರುಗಿದ ವೀರಶೈವ ವಿದ್ಯಾವರ್ಧಕ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಹಾಲಿ ಆಡಳಿತ ಮಂಡಳಿ ವಿರುದ್ಧ ಆಜೀವ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ಜರುಗಿತು.
ವೀವಿ ಸಂಘಕ್ಕೆ ಹೊಸ ಸದಸ್ಯತ್ವ ತೆಗೆದುಕೊಳ್ಳುವುದು ಸೇರಿದಂತೆ ಸಂಘದ ಆರ್ಥಿಕ ಶಿಸ್ತಿನ ಬಗ್ಗೆ ಚಕಾರ ಎತ್ತಿದ ಸದಸ್ಯರು, ಸಂಘದ ಬೆಳವಣಿಗೆಗೆ ನೀವು ಕೈಗೊಂಡ ಕ್ರಮಗಳೇನು? ಎಂದು ಪ್ರಶ್ನಿಸಿದರು.ಸಂಘಕ್ಕೆ ಹೊಸ ಸದಸ್ಯತ್ವ ನೀಡುವ ಕುರಿತು ಕ್ರಮ ಕೈಗೊಳ್ಳುತ್ತಿಲ್ಲ. ಬೇರೆ ಸಮುದಾಯಗಳಲ್ಲಿ ಕರೆದು ಸಂಘಕ್ಕೆ ಸದಸ್ಯತ್ವ ನೀಡಲಾಗುತ್ತಿದೆ. ಆದರೆ, ನೀವೇಕೆ ಈ ಬಗ್ಗೆ ಮೌನ ವಹಿಸಿದ್ದೀರಿ. ಜಿಲ್ಲೆಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ವೀರಶೈವ ಲಿಂಗಾಯತರಿದ್ದು ಬರೀ 3 ಸಾವಿರ ಜನರು ಮಾತ್ರ ಸದಸ್ಯರಿದ್ದಾರೆ. ಹಾಲಿ ಸದಸ್ಯರ ಪೈಕಿ ಈಗಾಗಲೇ 300ಕ್ಕೂ ಹೆಚ್ಚು ಜನರು ಸತ್ತು ಹೋಗಿದ್ದಾರೆ. ಎಲ್ಲರೂ ಸತ್ತು ಹೋದ ಬಳಿಕ ಸದಸ್ಯತ್ವ ತೆಗೆದುಕೊಳ್ಳುತ್ತೀರಾ ಎಂದು ಪ್ರಶ್ನಿಸಿದರು.ಸದಸ್ಯತ್ವ ಹೆಚ್ಚಾದರೆ ಸಂಘಕ್ಕೂ ಆರ್ಥಿಕ ಶಕ್ತಿ ಹೆಚ್ಚುತ್ತದೆ. ವೀರಶೈವ ಸಮುದಾಯದ ಎಲ್ಲರನ್ನು ಜೊತೆಗಿಟ್ಟುಕೊಂಡಂತಾಗುತ್ತದೆ. ಕೂಡಲೇ ಈ ಕುರಿತು ಸೂಕ್ತ ನಿರ್ಧಾರಕ್ಕೆ ಬನ್ನಿ ಎಂದು ಒತ್ತಾಯಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಸಂಘದ ಕಾರ್ಯದರ್ಶಿ ಗುರುಸಿದ್ಧಸ್ವಾಮಿ, ಹೊಸ ಸದಸ್ಯತ್ವ ಪ್ರಕ್ರಿಯೆ ಈಗಾಗಲೇ ಚಾಲನೆಯಲ್ಲಿದೆ. ಸಂಘದ ಬೈಲಾ ತಿದ್ದುಪಡಿ ಮಾಡಿದ ಕೂಡಲೇ ಚಾಲನೆ ಶುರುವಾಗಲಿದೆ ಎಂದು ಭರವಸೆ ನೀಡಿದರು.ಬೈಲಾ ಪ್ರಕಾರ ಸಂಘದ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗೆ ಇಬ್ಬರನ್ನು ಮಾತ್ರ ಸದಸ್ಯರನ್ನಾಗಿ ಮಾಡಬೇಕು. ಆದರೆ, ಬೈಲಾ ನಿಯಮ ಉಲ್ಲಂಘಿಸಿ, ನಿಮ್ಮ ಹಿಂದೆ ಓಡಾಡಿದವರೆಲ್ಲರಿಗೂ ಸದಸ್ಯರನ್ನಾಗಿಸಿದ್ದೀರಿ. ಅವರು ವಿದ್ಯಾಶಾಲೆಗೆ ಭೇಟಿ ನೀಡುವುದಿಲ್ಲ. ಹೆಸರಿಗೆ ಮಾತ್ರ ಸದಸ್ಯರಾಗಿರುತ್ತಾರೆ. ಇದರಿಂದಾದ ಪ್ರಯೋಜನ ಏನು? ಎಂದು ಸಂಘದ ಸದಸ್ಯರು ಪ್ರಶ್ನಿಸಿದರು. ಮುಂದೆ ಹೀಗಾಗದಂತೆ ಎಚ್ಚರ ವಹಿಸುತ್ತೇವೆ ಎಂದು ಸಂಘದ ಕಾರ್ಯದರ್ಶಿ ಗುರುಸಿದ್ಧಸ್ವಾಮಿ ತಿಳಿಸಿದರು.ಸಂಘದ ಅಧ್ಯಕ್ಷ ರಾಮನಗೌಡ, ಕೆ.ಎಂ. ಮಹೇಶ್ವರಸ್ವಾಮಿ, ದರೂರು ಶಾಂತನಗೌಡ, ಸಿದ್ಧರಾಮ ಕಲ್ಮಠ, ಕಲ್ಗುಡಿ ಮಂಜುನಾಥ, ಡಾ. ರಾಜಶೇಖರ್, ಗೋನಾಳ್ ರಾಜಶೇಖರಗೌಡ ಇದ್ದರು.ಬಳಿಕ ವೀವಿ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆ ಆರಂಭಗೊಂಡಿತು. ಬಳ್ಳಾರಿ-ವಿಜಯನಗರ ಜಿಲ್ಲೆಗಳಿಂದ ಆಗಮಿಸಿದ್ದ ಸಂಘದ ಸದಸ್ಯರು ಮತದಾನದಲ್ಲಿ ಪಾಲ್ಗೊಂಡರು. 2438 ಮತದಾರರ ಪೈಕಿ 2047 ಮತ ಚಲಾವಣೆಯಾದವು. ಮಾ.18ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಸಂಜೆ ವೇಳೆಗೆ ಫಲಿತಾಂಶ ಹೊರ ಬೀಳಲಿದೆ. ಆರೋಪಗಳ ಸುರಿಮಳೆ: ಸಂಘಕ್ಕೆ ಹೊಸ ಸದಸ್ಯತ್ವ ನೀಡಿದರೆ ಈ ಹಿಂದಿನಿಂದಲೂ ಸಂಘದಲ್ಲಿ ಬೀಡುಬಿಟ್ಟಿರುವವರಿಗೆ ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕಾಗಿಯೇ ಸದಸ್ಯತ್ವ ನೀಡಲು ಹಿಂದೇಟು ಹಾಕಲಾಗುತ್ತಿದೆ ಎಂದು ಕೆಲವು ಸದಸ್ಯರು ಆರೋಪಿಸುತ್ತಿರುವುದು ಕಂಡು ಬಂತು.ಕೆಲವರು ಸಂಘದಲ್ಲಿ ಗಟ್ಟಿಯಾಗಿ ಬೇರೂರಿದ್ದಾರೆ. ಪ್ರತಿಬಾರಿ ಅವರೇ ಚುನಾವಣೆಗೆ ನಿಲ್ಲುತ್ತಾರೆ. ಸದಸ್ಯತ್ವ ಹೆಚ್ಚಾದರೆ ಹಿಡಿತ ಕೈ ತಪ್ಪುತ್ತದೆ. ಹೊಸಬರು ಸಂಘದಲ್ಲಿ ಆಡಳಿತ ನಡೆಸಬಹುದು ಎಂಬ ಭಯವಿದೆ. ಹೀಗಾಗಿ ಹೊಸ ಸದಸ್ಯತ್ವ ನೀಡುತ್ತಿಲ್ಲ ಎಂದು ಕೆಲವು ಸದಸ್ಯರು ದೂರಿದರು.