ಡಾಕ್ಟರ್‌ ಗೆಲುವು: ಮಾದಪ್ಪನಿಗೆ ಮುಡಿ ಕೊಟ್ಟ ಮುಸ್ಲಿಂ ವ್ಯಕ್ತಿ!

| Published : Jun 07 2024, 12:31 AM IST

ಸಾರಾಂಶ

ರಾಮನಗರ: ಅತ್ಯಂತ ಕಡಿಮೆ ಬೆಲೆಗೆ ಹೃದ್ರೋಗ ಚಿಕಿತ್ಸೆ ನೀಡಿ ಜಾತಿ ಬೇಧವಿಲ್ಲದೇ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿರುವ ಡಾ.ಸಿ.ಎನ್. ಮಂಜುನಾಥ್ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಕ್ಕೆ ರಾಮನಗರದ ಮುಸ್ಲಿಂ ವ್ಯಕ್ತಿಯೊಬ್ಬರು ಮಲೆ ಮಹದೇಶ್ವರ ಬೆಟ್ಟದಲ್ಲಿ ಹರಕೆ ತೀರಿಸಿದ್ದಾರೆ.

ರಾಮನಗರ: ಅತ್ಯಂತ ಕಡಿಮೆ ಬೆಲೆಗೆ ಹೃದ್ರೋಗ ಚಿಕಿತ್ಸೆ ನೀಡಿ ಜಾತಿ ಬೇಧವಿಲ್ಲದೇ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿರುವ ಡಾ.ಸಿ.ಎನ್. ಮಂಜುನಾಥ್ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಕ್ಕೆ ರಾಮನಗರದ ಮುಸ್ಲಿಂ ವ್ಯಕ್ತಿಯೊಬ್ಬರು ಮಲೆ ಮಹದೇಶ್ವರ ಬೆಟ್ಟದಲ್ಲಿ ಹರಕೆ ತೀರಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಾ.ಮಂಜುನಾಥ್ ಗೆಲುವು ಹಿನ್ನೆಲೆಯಲ್ಲಿ ರಾಮನಗರ ತಾಲೂಕಿನ ಗೊಲ್ಲಹಳ್ಳಿ ಗ್ರಾಮದ ನಿವಾಸಿ ಯೂನಸ್ ಖಾನ್ ಎನ್ನುವವರು ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗಿ ಮಲೆ ಮಹದೇಶ್ವರ ದೇವರಿಗೆ ಮುಡಿ ಕೊಟ್ಟು ಹರಕೆ ತೀರಿಸಿದ್ದಾರೆ. ಹೃದ್ರೋಗಕ್ಕೆ ಕಡಿಮೆ ಬೆಲೆಗೆ ಚಿಕಿತ್ಸೆ ನೀಡಿ ಖ್ಯಾತಿ ಗಳಿಸಿದ್ದ ಡಾ.ಮಂಜುನಾಥ್ ಅವರಿಗೆ ಯೂನಸ್‌ ಖಾನ್ ಅಭಿಮಾನಿ ಆಗಿದ್ದರು. ಇನ್ನು ಅವರು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಸ್ಥಾನದಿಂದ ನಿವೃತ್ತಿಯಾದಾಗ ಬೇಸರ ಪಟ್ಟುಕೊಂಡಿದ್ದರು. ನಂತರ, ತಮ್ಮದೇ ಲೋಕಸಭಾ ಕ್ಷೇತ್ರಕ್ಕೆ ಸಂಸದ ಸ್ಥಾನಕ್ಕಾಗಿ ಸ್ಪರ್ಧೆ ಮಾಡಿದಾಗ ಭಾರಿ ಸಂತಸ ವ್ಯಕ್ತಪಡಿಸಿದ್ದರು.

ಆದರೆ, ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಾ.ಮಂಜುನಾಥ್ ಗೆಲುವು ಸುಲಭವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಯೂನಸ್ ಖಾನ್ ಅವರು ಡಾ.ಮಂಜುನಾಥ್ ಅವರ ಗೆಲುವಿಗಾಗಿ ಮಲೆ ಮಹದೇಶ್ವರ ದೇವರಿಗೆ ಮುಡಿ ಕೊಡುವುದಾಗಿ ಹರಕೆ ಹೊತ್ತಿದ್ದರು. ಈ ಬಗ್ಗೆ ಗ್ರಾಮದ ಕೆಲವು ಸ್ನೇಹಿತರಿಗೂ ಹೇಳಿದ್ದರು. ಇನ್ನು ದೇವರ ಪವಾಡವೆಂಬಂತೆ ಡಾ. ಮಂಜುನಾಥ್ ಅವರು ಬರೋಬ್ಬರಿ 2.60 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಮಹದೇಶ್ವರ ದೇವರಿಗೆ ಹರಕೆ ಕಟ್ಟಿಕೊಂಡಿದ್ದ ಯೂನಸ್ ಖಾನ್ ತನ್ನ ಸ್ನೇಹಿತರೊಂದಿಗೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ಮುಡಿ ಕೊಟ್ಟು ಹರಕೆ ತೀರಿಸಿದ್ದಾರೆ. ಇದಕ್ಕೆ ಯೂನಸ್ ಖಾನ್ ಜೊತೆಗೆ ಆತನ ಸ್ನೇಹಿತರು, ಜೆಡಿಎಸ್ ಕಾರ್ಯಕರ್ತರು ಕೂಡ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಮಾಡಿಸಿದ್ದಾರೆ. ಈ ಸಂತಸವನ್ನು ಎಲ್ಲ ಸ್ನೇಹಿತರಿಗೂ ಹಂಚಿಕೊಂಡಿದ್ದಾರೆ. ಈಗ ಮುಸ್ಲಿಂ ವ್ಯಕ್ತಿಯೊಬ್ಬರು ಬಿಜೆಪಿ ಅಭ್ಯರ್ಥಿ ಎನ್ನುವುದಕ್ಕಿಂತ ಮುಖ್ಯವಾಗಿ ಹೃದ್ರೋಗ ಚಿಕಿತ್ಸೆ ನೀಡಿದ ವೈದ್ಯರ ಗೆಲುವುಗಾಗಿ ಧರ್ಮವನ್ನೂ ಮೀರಿದ ಹರಕೆ ಹೊತ್ತು ತೀರಿಸಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಶ್ಲಾಘನೆ ವ್ಯಕ್ತವಾಗುತ್ತಿದೆ.

ಬಾಕ್ಸ್‌.........

ರಾಘವೇಂದ್ರರರಿಗೆ ಹರಕೆ ಹೊತ್ತಿದ್ದ ಇನ್ಫೋಸಿಸ್ ಸುಧಾಮೂರ್ತಿ:

ಡಾ.ಮಂಜುನಾಥ್ ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಲೆಂದು ಇನ್ಫೋಸಿಸ್‌ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷೆ ಹಾಗೂ ರಾಜ್ಯಸಭಾ ಸದಸ್ಯೆ ಡಾ.ಸುಧಾಮೂರ್ತಿ ಅವರು ಮಂತ್ರಾಲಯದ ರಾಘವೇಂದ್ರ ಸ್ವಾಮಿಗೆ ಹರಕೆ ಹೊತ್ತಿದ್ದರು. ಸುಮಾರು 6 ಕಿ.ಮೀ. ಪಾದಯಾತ್ರೆ ಮೂಲಕ ದೇವಸ್ಥಾನಕ್ಕೆ ತೆರಳಿ ಡಾ.ಮಂಜುನಾಥ್ ಗೆಲುವಿಗೆ ವಿಶೇಷ ಹರಕೆ ಮಾಡಿಕೊಂಡಿದ್ದರೆಂದು ಸ್ವತಃ ಡಾ. ಮಂಜುನಾಥ್ ಅವರೇ ಹೇಳಿದ್ದರು. ಸಮಾಜ ಸೇವೆಗೆ ಎಲ್ಲಿದ್ದರೂ ಬೆಲೆ ಸಿಗುತ್ತದೆ ಎಂಬುದಕ್ಕೆ ಈ ಮಾನವೀಯ ಬಂಧಗಳೇ ಸಾಕ್ಷಿಯಾಗಿವೆ.6ಕೆಆರ್ ಎಂಎನ್ 7.ಜೆಪಿಜಿ

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಾ.ಸಿ.ಎನ್ .ಮಂಜುನಾಥ್ ಗೆಲುವು ಸಾಧಿಸಿದ್ದಕ್ಕೆ ಯೂನಸ್‌ಖಾನ್ ಮಲೆ ಮಹದೇಶ್ವರ ಬೆಟ್ಟದಲ್ಲಿ ಮುಡಿ ಕೊಟ್ಟು ಹರಕೆ ತೀರಿಸಿದರು.