ವೈದ್ಯ ದಿನಾಚರಣೆ: ಹೋಮಿಯೋಪತಿ ವೈದ್ಯರಿಗೆ ಶಾಸಕ ಸನ್ಮಾನ

| Published : Jul 02 2024, 01:46 AM IST

ವೈದ್ಯ ದಿನಾಚರಣೆ: ಹೋಮಿಯೋಪತಿ ವೈದ್ಯರಿಗೆ ಶಾಸಕ ಸನ್ಮಾನ
Share this Article
  • FB
  • TW
  • Linkdin
  • Email

ಸಾರಾಂಶ

ವೈದ್ಯ ದಿನಾಚರಣೆಯ ಪ್ರಯುಕ್ತ ಸೋಮವಾರ ಪುತ್ತೂರಿನ ಹೋಮಿಯೋಪತಿ ವೈದ್ಯ ಡಾ. ರಮೇಶ್ ಭಟ್ ಅವರನ್ನು ಅವರ ಕ್ಲಿನಿಕ್‌ಗೆ ತೆರಳಿ ಶಾಸಕ ಅಶೋಕ್ ಕುಮಾರ್ ರೈ ಸನ್ಮಾನಿಸಿ ಗೌರವಿಸಿದರು.

ಕನ್ನಡಪ್ರಭ ವಾರ್ತೆ ಪುತ್ತೂರು

ವೈದ್ಯರನ್ನು ದೇವರಿಗೆ ಸಮಾನರಾಗಿ ನಾವು ಕಾಣುತ್ತೇವೆ. ಒಂದು ದೇಹಕ್ಕೆ ಜೀವ ಕೊಡುವ ಮತ್ತು ಜೀವ ಉಳಿಸುವ ಕೆಲಸವನ್ನು ವೈದ್ಯರು ಮಾಡುತ್ತಾರೆ. ಇಂತಹ ವೈದ್ಯರನ್ನು ನಾವು ಪ್ರತಿಯೊಬ್ಬರೂ ಗೌರವಿಸುವ ಕಾರ್ಯ ಮಾಡಬೇಕಾಗಿದೆ. ವೈದ್ಯರು ರೋಗಿಗಳಿಗೆ ಹತ್ತಿರವಾಗಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.

ವೈದ್ಯ ದಿನಾಚರಣೆಯ ಪ್ರಯುಕ್ತ ಸೋಮವಾರ ಪುತ್ತೂರಿನ ಹೋಮಿಯೋಪತಿ ವೈದ್ಯ ಡಾ. ರಮೇಶ್ ಭಟ್ ಅವರನ್ನು ಅವರ ಕ್ಲಿನಿಕ್‌ಗೆ ತೆರಳಿ ಸನ್ಮಾನಿಸಿ ಗೌರವಿಸಿ ಅವರು ಮಾತನಾಡಿದರು. ಬಳಿಕ ಮಾತನಾಡಿದ ಶಾಸಕರು ಒಬ್ಬ ವೈದ್ಯ ಮಾಡಿದ ತಪ್ಪಿಗೆ ಇಡೀ ವೈದ್ಯ ಸಮೂಹವನ್ನೇ ದೂಷಿಸುವ ಕೆಲಸವನ್ನು ಯಾರೂ ಮಾಡಬಾರದು. ವೈದ್ಯರು ಕೂಡಾ ರೋಗಿಗೆ ಅತ್ಯಂತ ಹತ್ತಿರವಾಗಬೇಕು. ಒಬ್ಬ ಉತ್ತಮ ವೈದ್ಯನ ಬಳಿ ಬಂದರೆ ಅವರ ಬಳಿ ಮಾತನಾಡಿದಾಗಲೇ ಅರ್ಧ ರೋಗ ವಾಸಿಯಾಗುತ್ತದೆ ಎಂಬ ಮಾತಿನಂತೆ ರೋಗಿಗಳು ನೋವಿನಿಂದ ಏನೇ ಮಾತನಾಡಿದರೂ ಅದನ್ನು ತಾಳ್ಮೆಯಿಂದ ಕೇಳುವ ಮನಸ್ಸು ವೈದ್ಯರಲ್ಲಿರಬೇಕಾಗುತ್ತದೆ ಎಂದರು.

ವೈದ್ಯ ಡಾ. ಸುರೇಶ್ ಪುತ್ತೂರಾಯ ಮಾತನಾಡಿ, ವೈದ್ಯರೆಂದರೆ ಮನುಷ್ಯ ಎಂಬ ಜೀವಂತ ಯಂತ್ರವನ್ನು ದುರಸ್ತಿ ಮಾಡುವವರು. ಕೆಲವೊಂದು ಬಾರಿ ಸಣ್ಣಪುಟ್ಟ ಅನಾಹುತಗಳು ಸಂಭವಿಸಿದರೂ ರೋಗಿ ಕಡೆಯವರು ಗಲಾಟೆ ಮಾಡುತ್ತಾರೆ. ಇದು ವೈದ್ಯರ ಮನೋಬಲವನ್ನು ಕುಗ್ಗಿಸುತ್ತದೆ. ಯಾವುದೇ ಕಾರಣಕ್ಕೂ ಯಾರೂ ಸಂಘರ್ಷಕ್ಕೆ ಎಡೆ ಮಾಡಿಕೊಡಬಾರದು. ಕೆಲವೊಂದು ರೋಗಗಳ ಬಗ್ಗೆ ರೋಗಿಗಳು ತಾತ್ಸಾರ ಮಾಡಬಹುದು. ಆದರೆ ಅವರನ್ನು ಪರೀಕ್ಷೆ ಮಾಡಿದಾಗ ರೋಗ ಗಂಭೀರ ಅವಸ್ಥೆಯದ್ದಾಗಿರುತ್ತದೆ ಆಗ ರೋಗಿ ಕಡೆಯವರು ವೈದ್ಯರ ಮೇಲೆ ಸಂಶಯ ಪಡುವ ರೀತಿಯಲ್ಲಿ ವರ್ತಿಸುತ್ತಾರೆ. ಏನೇ ಬಂದರೂ ತಾಳ್ಮೆಯಿಂದ ವರ್ತಿಸಿದರೆ ಎಲ್ಲವೂ ಸಮಾಧಾನಕರವಾಗಿ ಪರಿಹಾರಗೊಳ್ಳುತ್ತದೆ ಎಂದು ಹೇಳಿದರು.

ಸನ್ಮಾನಿತ ಡಾ. ರಮೇಶ್ ಭಟ್ ಮಾತನಾಡಿ ವೈದ್ಯರ ದಿನಾಚರಣೆಯಂದು ನನ್ನ ಕ್ಲಿನಿಕ್‌ಗೆ ಬಂದು ನನ್ನನ್ನು ಸನ್ಮಾನ ಮಾಡಿದ್ದು ನನಗೆ ಅಚ್ಚರಿಮೂಡಿಸಿದೆ. ಶಾಸಕರಿಂದ ಗೌರವ ಸ್ವೀಕರಿಸಲು ನನಗೆ ಸಂತೋಷವಾಗುತ್ತಿದೆ ಎಂದು ಹೇಳಿದರು.

ಬನ್ನೂರು ರೈತ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಉದ್ಯಮಿ ಜಗನ್ನಾಥ್, ಸುಜಾತಾ ರಮೇಶ್ ಭಟ್, ಹರಿಣಾಕ್ಷಿ ಮತ್ತಿತರರು ಇದ್ದರು.

ಜಯಂತ ನಡುಬೈಲು ಸ್ವಾಗತಿಸಿದರು, ರವೀಂದ್ರ ಪೂಜಾರಿ ಸಂಪ್ಯ ವಂದಿಸಿದರು. ಸರಸ್ವತಿ, ಚೇತನ, ಸುರೇಖಾ ಕಾರ್ಯಕ್ರಮ ನಿರ್ವಹಿಸಿದರು.