ಅರೆಭಾಷಿಕರ ‘ಐನ್‌ಮನೆ’ ಸಂಸ್ಕೃತಿ, ಸಂಪ್ರದಾಯ ದಾಖಲೀಕರಿಸಿ: ಡಾ.ಮಂತರ್ ಗೌಡ

| Published : May 20 2025, 01:02 AM IST

ಸಾರಾಂಶ

ಐನ್‌ಮನೆ ಸಂಸ್ಕೃತಿ ಸಂಪ್ರದಾಯ ಉಳಿಸಿ ಬೆಳೆಸುವಲ್ಲಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮೂಲಕ ದಾಖಲೀಕರಣ ಮಾಡುವಂತಾಗಬೇಕು ಎಂದು ಡಾ. ಮಂತರ್‌ಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಐನ್‌ಮನೆ ಸಂಸ್ಕೃತಿ, ಸಂಪ್ರದಾಯ ಮತ್ತು ಸಂಸ್ಕಾರವನ್ನು ಉಳಿಸಿ ಬೆಳೆಸುವಲ್ಲಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮೂಲಕ ದಾಖಲೀಕರಣ ಮಾಡುವಂತಾಗಬೇಕು ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್‌ಗೌಡ ಅವರು ಹೇಳಿದ್ದಾರೆ.ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಮಕ್ಕಂದೂರು ಗ್ರಾಮದ ಕುಂಭಗೌಡನ ಐನ್‌ಮನೆಯಲ್ಲಿ ಶನಿವಾರ ನಡೆದ ಅರೆಭಾಷಿಕರ ‘ಐನ್‌ಮನೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕುಂಭಗೌಡನ ಕುಟುಂಬಕ್ಕೆ ತಮ್ಮದೇ ಆದ ಐತಿಹಾಸಿಕ ಹಿನ್ನೆಲೆ ಇದ್ದು, ಕುಂಭಗೌಡನ ಐನ್‌ಮನೆಯನ್ನು ಸಂರಕ್ಷಿಸುವಂತಾಗಬೇಕು. ಇತಿಹಾಸ ಮರೆತವರು ಇತಿಹಾಸ ಸೃಷ್ಟಿವುದಿಲ್ಲ ಎಂಬಂತೆ ಪ್ರಾಚೀನ ಹಾಗೂ ಐತಿಹಾಸಿಕ ಐನ್‌ಮನೆ ಸಂಸ್ಕೃತಿಯನ್ನು ಉಳಿಸಿ ಬೆಳೆಸಿದಾಗ ನಾಡಿನ ಸಂಸ್ಕೃತಿ ಉಳಿಯಲು ಸಾಧ್ಯ. ಆ ನಿಟ್ಟಿನಲ್ಲಿ ಅರೆಭಾಷಿಕರ ಐನ್‌ಮನೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ವಿಶೇಷವಾಗಿದೆ ಎಂದರು. ಎಲ್ಲರೂ ಒಟ್ಟುಗೂಡಲು ಸಹಕಾರಿಯಾಗಿದೆ:

ಅರೆಭಾಷಿಕ ಐನ್‌ಮನೆ ಸಂಸ್ಕೃತಿಯು ಎಲ್ಲರೂ ಒಟ್ಟುಗೂಡಲು ಸಹಕಾರಿಯಾಗಿದೆ. ಆ ನಿಟ್ಟಿನಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚಿನ ಕಾರ್ಯಕ್ರಮ ನಡೆಯುವಂತಾಗಬೇಕು ಎಂದರು. ಈ ಭಾಗಕ್ಕೆ ಉತ್ತಮ ರಸ್ತೆ ನಿರ್ಮಾಣಕ್ಕೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು. ‘ವಿಧಾನ ಪರಿಷತ್ ಮಾಜಿ ಸದಸ್ಯರಾದ ಶಾಂತೆಯಂಡ ವೀಣಾ ಅಚ್ಚಯ್ಯ ಅವರು ಮಾತನಾಡಿ ನಾನು ಅರುವತ್ತೊಕ್ಲು ಗ್ರಾಮದಲ್ಲಿ ಅರೆಭಾಷಿಕರ ಜೊತೆ ಚಿಕ್ಕಂದಿನಿಂದ ಬೆಳೆದು ಬಂದವಳು, ಹಿಂದೆ ಅರೆಭಾಷಿಕರು ಮತ್ತು ಕೊಡವರು ಯಾರೆಂಬುದೇ ತಿಳಿಯುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ಅತ್ಯಂತ ಅನ್ಯೋನ್ಯವಾಗಿ ಬದುಕುತ್ತಿದ್ದೇವು. ಆದರೆ ಇತ್ತೀಚಿನ ದಿನಗಳಲ್ಲಿನ ಬೆಳವಣಿಗೆಗಳನ್ನು ಗಮನಿಸಿದಾಗ ಬೇಸರ ತರಿಸುತ್ತದೆ ಎಂದು ಅವರು ನುಡಿದರು.’ 2018 ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಇಲ್ಲಿನ ಕುಟುಂಬಗಳು ಊರು ಬಿಡುವಂತಾಗಿತ್ತು. ಆದರೂ ಎದೆಗುಂದದೆ ಬದುಕು ಪುನರ್ ಸ್ಥಾಪಿಸಿಕೊಂಡು ಜೀವನ ನಡೆಸುತ್ತಿದ್ದೇವೆ ಎಂದರು. ಅರೆಭಾಷೆ ಸಂಸ್ಕೃತಿ, ಸಾಹಿತ್ಯ ಶ್ರೀಮಂತಿಕೆಯಿಂದ ಕೂಡಿದೆ:

ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಶ್ರೀಮಂತಿಕೆಯಿಂದ ಕೂಡಿದ್ದು, ಇದನ್ನು ಉಳಿಸಿ ಬೆಳೆಸಬೇಕು. ಹಿರಿಯರ ಮಾರ್ಗದರ್ಶನದಲ್ಲಿ ಯುವಜನರು ಮುನ್ನಡೆಯಬೇಕು. ಕೊಡಗಿನ ಎಲ್ಲರೂ ಒಟ್ಟುಗೂಡಿದಾಗ ಸಮಾಜವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಾಧ್ಯ ಎಂದು ವೀಣಾ ಅಚ್ಚಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಅವರು ಮಾತನಾಡಿ ಅರೆಭಾಷೆ ಸಂಸ್ಕೃತಿ, ಸಂಪ್ರದಾಯ, ಜಾನಪದ ಕಲೆಗಳನ್ನು ಪಸರಿಸುವಲ್ಲಿ ಅರೆಭಾಷೆ ಐನ್‌ಮನೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು. ಅರೆಭಾಷೆ ಸಂಸ್ಕೃತಿ, ಸಂಸ್ಕಾರ ಕಲಿಸಲು ಐನ್‌ಮನೆ ಜಂಬರ ಸಹಕಾರಿಯಾಗಿದೆ. ಅರೆಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕಡೆಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿಯೂ ಸಹ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಇತಿಹಾಸ ತಿಳಿದುಕೊಳ್ಳುವಂತಾಗಬೇಕು:

ಶಿವಮೊಗ್ಗ ಜಿಲ್ಲೆಯ ಅಬಕಾರಿ ಇಲಾಖೆ ಉಪ ಆಯುಕ್ತರಾದ ಸುಮಿತಾ ಕುಂಭಗೌಡ ಕುಶಾಲಪ್ಪ-ನಂಗಾರು ಅವರು ಮಾತನಾಡಿ ಅರೆಭಾಷಿಕರ ಐನ್‌ಮನೆಗೆ ತನ್ನದೇ ಆದ ಇತಿಹಾಸವಿದ್ದು, ಮನೆತನದ ಐನ್‌ಮನೆ ಸಂಸ್ಕೃತಿ, ಸಂಪ್ರದಾಯಗಳನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು. ಇತಿಹಾಸವನ್ನು ತಿಳಿದುಕೊಳ್ಳುವಂತಾಗಬೇಕು ಎಂದರು. ಕೊಡಗು ಜಿಲ್ಲೆಯ ಯುವ ವಿದ್ಯಾರ್ಥಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ನಾಗರಿಕ ಸೇವೆಗಳ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವಂತಾಗಬೇಕು ಎಂದು ಸಲಹೆ ನೀಡಿದರು. ಮಕ್ಕಂದೂರು ವ್ಯವಸ್ಥಾಯ ಸಹಕಾರ ಸಂಘದ ಅಧ್ಯಕ್ಷರಾದ ಶಾಂತೆಯಂಡ ರವಿಕುಶಾಲಪ್ಪ ಮಾತನಾಡಿದರು. ಅರೆಭಾಷೆ ಕುಟುಂಬಗಳ ಐನ್‌ಮನೆ ಕುರಿತು ಎ.ಕೆ.ಹಿಮಕರ ಅವರು ಮಾತನಾಡಿದರು. ಅರೆಭಾಷೆ ಸುಪ್ರಭಾತ ಸಿಡಿಯನ್ನು ಕೃಷಿಕರಾದ ಇಂದಿರಾ ದೇವಿಪ್ರಸಾದ್ ಸಂಪಾಜೆ ಅವರು ಬಿಡುಗಡೆ ಮಾಡಿದರು. ಕುಂಭಗೌಡನ ಕುಟುಂಬ ಲಾಂಛನವನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಸಾಧಕರನ್ನು ಸನ್ಮಾನಿಸಲಾಯಿತು. ಜಯಪ್ರಕಾಶ್ ಪೆರುಮುಂಡ ಮತ್ತು ತಂಡದವರಿಂದ ಅರೆಭಾಷೆ ಹಾಡುಗಳ ಕಲರವ ನಡೆಯಿತು. ಆರ್‌ಜೆ ತ್ರಿಶೂಲ್ ಕಂಬಳನೊಟ್ಟಿಗೆ ನೀವು, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಕುಂಭಗೌಡನ ಪಟ್ಟೆದಾರರಾದ ಕೆ.ಕೆ.ಓಂಕಾರಪ್ಪ, ಮಕ್ಕಂದೂರು ಗ್ರಾ.ಪಂ.ಅಧ್ಯಕ್ಷರಾದ ಬಿ.ಎನ್.ರಮೇಶ್, ಆನಂದ್ ಕರಂದ್ಲಾಜೆ, ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘದ ನಿರ್ದೇಶಕರಾದ ಕೋಳುಮುಡಿಯನ ಅನಂತಕುಮಾರ್, ಮಕ್ಕಂದೂರು ಗೌಡ ಸಮಾಜದ ಅಧ್ಯಕ್ಷರಾದ ಲಕ್ಕಪ್ಪನ ಕೆ.ಹರೀಶ್, ಕಾರ್ಯಕ್ರಮ ಸಂಚಾಲಕರು ಹಾಗೂ ಅಕಾಡೆಮಿ ಸದಸ್ಯರಾದ ಸೂದನ ಎಸ್.ಈರಪ್ಪ, ಚಂದ್ರಶೇಖರ್ ಪೆರಾಲು, ತೇಜಕುಮಾರ್ ಕುಡೆಕಲ್ಲು, ಚಂದ್ರಾವತಿ ಬಡ್ಡಡ್ಕ, ಲತಾ ಪ್ರಸಾದ್ ಕುದ್ಪಾಜೆ, ಪಿ.ಎಸ್.ಕಾರ್ಯಪ್ಪ, ಡಾ.ನಿಡ್ಯಮಲೆ ಜ್ಞಾನೇಶ್, ಲೋಕೇಶ್ ಊರುಬೈಲು, ಸಂದೀಪ್ ಪುಳಕಂಡ, ವಿನೋದ್ ಮೂಡಗದ್ದೆ, ಮೋಹನ್ ಪೊನ್ನಚ್ಚನ ಇತರರು ಇದ್ದರು.