ದೊಡ್ಡಬಳ್ಳಾಪುರಕ್ಕೆ ತಟ್ಟದ ಬಸ್‌ ಬಂದ್‌ ಬಿಸಿ

| Published : Aug 05 2025, 11:45 PM IST

ಸಾರಾಂಶ

ದೊಡ್ಡಬಳ್ಳಾಪುರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ನೌಕರರು ಕರೆ ನೀಡಿದ್ದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ದೊಡ್ಡಬಳ್ಳಾಪುರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಾರಿಗೆ ಸಂಚಾರ ಎಂದಿನಂತೆ ಇತ್ತು.

ದೊಡ್ಡಬಳ್ಳಾಪುರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ನೌಕರರು ಕರೆ ನೀಡಿದ್ದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ದೊಡ್ಡಬಳ್ಳಾಪುರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಾರಿಗೆ ಸಂಚಾರ ಎಂದಿನಂತೆ ಇತ್ತು.

ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಮುಷ್ಕರಕ್ಕೆ ಕರೆ ನೀಡಿತ್ತು. ಆದರೆ ದೊಡ್ಡಬಳ್ಳಾಪುರ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಿಂದ ವಿವಿದೆಡೆಗೆ ಸಂಚರಿಸುವ ದೊಡ್ಡಬಳ್ಳಾಪುರ ಘಟಕದ ಎಲ್ಲ 33 ಬಸ್‌ಗಳು ನಿಗದಿತ ಸಮಯಕ್ಕೆ ಬಸ್‌ನಿಲ್ದಾಣಕ್ಕೆ ಬಂದಿದ್ದವು. ಅದೇ ರೀತಿ ದೊಡ್ಡಬಳ್ಳಾಪುರ, ಘಾಟಿ ಸುಬ್ರಹ್ಮಣ್ಯ, ದೇವನಹಳ್ಳಿ, ಚಿಕ್ಕಮಧುರೆ ಹಾಗೂ ಬೆಂಗಳೂರಿನ ವಿವಿದೆಡೆಗೆ ಸಂಚರಿಸುವ ಬಿಎಂಟಿಸಿ ಬಸ್‌ಗಳು ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿದ್ದವು.

ಮುಷ್ಕರ ಮತ್ತು ಪ್ರಯಾಣಿಕರ ಸಂಕಷ್ಟ ಸಾರಿಗೆ ನೌಕರರು ತಮ್ಮ ನ್ಯಾಯಯುತ ಬೇಡಿಕೆಗಳಾದ ವೇತನ ಹೆಚ್ಚಳ, ₹1,800 ಕೋಟಿ ಹಿಂಬಾಕಿ ಪಾವತಿ, ಮತ್ತು ಪಿಎಫ್ ಬಾಕಿಯನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದ ನೌಕರರು, ಬೇಡಿಕೆಗಳು ಈಡೇರದ ಕಾರಣ, ಮುಷ್ಕರದ ಹಾದಿ ಹಿಡಿದಿದ್ದರು. ಸಾಮಾನ್ಯ ಜನರು, ವಿದ್ಯಾರ್ಥಿಗಳು ಮತ್ತು ಪ್ರತಿದಿನ ಬಸ್ ಅವಲಂಬಿಸಿರುವ ಕಾರ್ಮಿಕರು ತೀವ್ರ ತೊಂದರೆಗೆ ಸಿಲುಕುವ ಆತಂಕ ಎದುರಾಗಿತ್ತು. ಆದರೆ ಮುಷ್ಕರ ಕೈಬಿಡುವಂತೆ ರಾಜ್ಯ ಹೈಕೋರ್ಟ್‌ ಆದೇಶ ನೀಡಿದ ಹಿನ್ನಲೆ ಮಧ್ಯಾಹ್ನದ ನಂತರ ಎಲ್ಲ ನೌಕರರು ಕೆಲಸಕ್ಕೆ ಹಾಜರಾಗಿದ್ದರು.