ದೊಡ್ಡಬಾಣಗೆರೆ ಕೆರೆ ಒತ್ತುವರಿ: ತೀವ್ರ ಆಕ್ರೋಶ

| Published : Feb 07 2024, 01:49 AM IST

ಸಾರಾಂಶ

ಶಿರಾ ತಾಲೂಕಿನ ದೊಡ್ಡಬಾಣಗೆರೆ ಕೆರೆಯು 400 ಹೆಕ್ಟೇರ್‌ ವಿಸ್ತೀರ್ಣವನ್ನು ಹೊಂದಿದ್ದು 6ಹಳ್ಳಿಗಳ ರೈತರ ಕೃಷಿಗೆ, ಅಂತರ್ಜಲ ವೃದ್ಧಿಗೆ, ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಮತ್ತು ಭಾವನತ್ಮಕವಾಗಿ ಗ್ರಾಮದ ಜೀವನಾಡಿಯಾಗಿದೆ. ಇಂತಹ ಕೆರೆಯ ಅಂಗಳದ 10 ರಿಂದ 12 ಎಕರೆಯಷ್ಟು ಕೆರೆ ಅಂಗಳವನ್ನು ಒತ್ತುವರಿ ಮಾಡಿಕೊಂಡಿರುವುದನ್ನು ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆಯ ಅಧ್ಯಕ್ಷ ಬಿ.ವಿ. ಗುಂಡಪ್ಪ ಖಂಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು

ಶಿರಾ ತಾಲೂಕಿನ ದೊಡ್ಡಬಾಣಗೆರೆ ಕೆರೆಯು 400 ಹೆಕ್ಟೇರ್‌ (988 ಕರೆ) ವಿಸ್ತೀರ್ಣವನ್ನು ಹೊಂದಿದ್ದು 6ಹಳ್ಳಿಗಳ ರೈತರ ಕೃಷಿಗೆ, ಅಂತರ್ಜಲ ವೃದ್ಧಿಗೆ, ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಮತ್ತು ಭಾವನತ್ಮಕವಾಗಿ ಗ್ರಾಮದ ಜೀವನಾಡಿಯಾಗಿದೆ. ಇಂತಹ ಕೆರೆಯ ಅಂಗಳದ 10 ರಿಂದ 12 ಎಕರೆಯಷ್ಟು ಕೆರೆ ಅಂಗಳವನ್ನು ಒತ್ತುವರಿ ಮಾಡಿಕೊಂಡಿರುವುದನ್ನು ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆಯ ಅಧ್ಯಕ್ಷ ಬಿ.ವಿ. ಗುಂಡಪ್ಪ ಖಂಡಿಸಿದ್ದಾರೆ.

ಕೆರೆಯ ದಕ್ಷಿಣ ಭಾಗ ಹಾಗು ಕೆರೆಗೆ ನೀರು ಬರುವ ದೊಡ್ದ ಹಳ್ಳದ ಭಾಗದಲ್ಲಿ ಆಳವಾದ ಟ್ರಂಚ್ ಹೊಡೆದು, ಎತ್ತರದ ಏರಿ ನಿರ್ಮಾಣ ಮಾಡಿ ಕೊಂಡು ಕೆರೆಯ ನೀರು ಒತ್ತುವರಿ ಮಾಡಿ ಕೊಂಡಿರುವ ಜಾಗಕ್ಕೆ ನೀರು ಬಾರದಂತೆ 300 ಮೀಟರ್‌ ಉದ್ದ 100 ಮೀಟರ್‌ ಅಗಲಷ್ಟು ಬದು ನಿರ್ಮಿಸಿಕೊಳ್ಳಲಾಗಿದೆ.

ಇದಲ್ಲದೆ ದೊಡ್ಡ ಹಳ್ಳದ ದಿಕ್ಕನ್ನು ಬದಲಿಸಿ ಹಳ್ಳದ ಹೆಬ್ಬಾಗಿಲನ್ನು ಮುಚ್ಚಿದ್ದಾರೆ. ಇದರಿಂದ ಮಳೆಯ ನೀರು ಸರಾಗವಾಗಿ ಕೆರೆಗೆ ಬರಲು ಅಡಚಣೆಯಾಗುತ್ತದೆ. ಅಲ್ಲದೆ ನೀರು ನಿಲ್ಲುವ ಕೆರೆಯ ಅಂಗಳದ ಪ್ರಮಾಣ ಕಡಿಮೆಯಾಗುತ್ತದೆ.

ದೊಡ್ಡಬಾಣಗೆರೆ ಕೆರೆಗೆ ಉತ್ತರ ಏಷ್ಯಾ, ಯೂರೋಪ್, ಹಿಮಾಲಯದಿಂದ ವಲಸೆ ಬರುವ ಗಾರ್ಗೆನಿ, ಮಲ್ಲಾರ್ಡ್, ಪಿನ್‌ಟೈಲ್, ಕಾಮನ್ ಟೀಲ್, ಕಾಮನ್ ಸ್ನೆಂಪ್, ಸ್ಯಾಂಡ್‌ ಪೈಪರ್‌ಗಳು, ನೀರ್ನಡಿಗೆ ಹಕ್ಕಿಗಳು ಹಾಗೂ ಸ್ಥಳೀಯ ಬಣ್ಣದ ಕೊಕ್ಕರೆಗಳು, ಚಮಚ ಕೊಕ್ಕಿನ ಕೊಕ್ಕರೆಗಳು, ಕರಿ ಕೋಳಿ ಇತ್ಯಾದಿ ನೂರಾರು ಪಕ್ಷಿಗಳಿಗೆ ಆಶ್ರಯ ನೀಡುತ್ತದೆ.

ಸಣ್ಣನೀರಾವರಿ ಇಲಾಖೆ ಹಾಗೂ ಕಂದಾಯ ಇಲಾಖೆಯ ಗಮನಕ್ಕೆ ತಂದರೂ ಸಹ ಕೆರೆಯ ಅಂಗಳವನ್ನು ಅತಿಕ್ರಮಣ ಮಾಡಿದ ವ್ಯಕ್ತಿಗಳ ವಿರುದ್ಧ ಇಲ್ಲಿಯವರೆಗೆ ಯಾವುದೇ ಕಾನೂನು ಕ್ರಮ ತೆಗೆದು ಕೊಳ್ಳದೆ ಮೀನಾ ಮೇಶ ಮಾಡುತ್ತಿದ್ದಾರೆ ಎಂದು ದೂರಿದೆ.

ಸಾರ್ವಜನಿಕ ಜಾಗದಲ್ಲಿ ಅವೈಜ್ಞಾನಿಕವಾಗಿ ಕಂದಕಗಳನ್ನು ನಿರ್ಮಿಸಿ, ಒತ್ತುವರಿ ಮಾಡಿಕೊಂಡಿರುವ ಒತ್ತುವರಿದಾರರನ್ನು ಸರ್ಕಾರಿ ಭೂ ಕಬಳಿಕೆ ಕಾಯ್ದೆಯಡಿ ಹಾಗೂ ಜಲ ಸಂರಕ್ಷಣಾ ಕಾಯ್ದೆ ಅನ್ವಯ ಕಾನೂನು ಕ್ರಮ ತೆಗೆದುಕೊಂಡು ಈ ಭಾಗದಲ್ಲಿ ಆಗಿರುವ ಕೆರೆಯ ಹಾನಿಯನ್ನು ಹಾಗೂ ಟ್ರಂಚ್ ಮುಚ್ಚಿಸಿ ಬದುವನ್ನು ಇವರಿಂದಲೇ ಸಮಮಾಡಿಸಿ ಕೆರೆಯ ಒತ್ತುವರಿ ತೆರೆವು ಗೊಳಿಸಿ ಕೆರೆಯನ್ನು ಸಂರಕ್ಷಿಸಬೇಕೆಂದು ಬಿ.ವಿ. ಗುಂಡಪ್ಪ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.