ಸಾರಾಂಶ
ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ವಿಜಯ ದಶಮಿಯಂದು ಬಲಿ ಉತ್ಸವವು ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇ.ಮೂ. ಸರ್ವೇಶ ತಂತ್ರಿ ತಂತ್ರತ್ವದಲ್ಲಿ, ವೇ.ಮೂ. ವಿಖ್ಯಾತ್ ಭಟ್ ನೇತೃತ್ವದಲ್ಲಿ ಪುರೋಹಿತ ಗಣೇಶ್ ಸರಳಾಯರ ಸಹಕಾರದಲ್ಲಿ ನೆರವೇರಿತು.
ಕನ್ನಡಪ್ರಭ ವಾರ್ತೆ ಉಡುಪಿ
ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ವಿಜಯ ದಶಮಿಯಂದು ಬಲಿ ಉತ್ಸವವು ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇ.ಮೂ. ಸರ್ವೇಶ ತಂತ್ರಿ ತಂತ್ರತ್ವದಲ್ಲಿ, ವೇ.ಮೂ. ವಿಖ್ಯಾತ್ ಭಟ್ ನೇತೃತ್ವದಲ್ಲಿ ಪುರೋಹಿತ ಗಣೇಶ್ ಸರಳಾಯರ ಸಹಕಾರದಲ್ಲಿ ನೆರವೇರಿತು.ಸಂಜೆ ಬಲಿ ಉತ್ಸವ, ರಂಗಪೂಜಾ ಮಹೋತ್ಸವ, ಮಹಾಮಂತ್ರಾಕ್ಷತೆ ನೆರವೇರಿತು. ಉತ್ಸವದಲ್ಲಿ ಕ್ಷೇತ್ರದ ವಿಶೇಷ ಸೇವೆಯಾದ ನೃತ್ಯ ಸುತ್ತು ಆಕರ್ಷಣೆಯಾಗಿತ್ತು. ಪಲ್ಲಕಿ ಉತ್ಸವ, ವಸಂತ ಪೂಜೆ ನಡೆಯಿತು. ವಸಂತ ಪೂಜೆಯಲ್ಲಿ ಸಮರ್ಪಿಸುವ ಅಷ್ಟಾವಧಾನದಲ್ಲಿ ವೇ.ಮೂ. ಡಾ.ಶ್ರೀವತ್ಸ ಅಡಿಗ, ಸ್ವಸ್ತಿಕ್ ಆಚಾರ್ಯ, ನಾಗಶಯನ ಪದಕಣ್ಣಾಯ, ವೀಣಾ ಆರ್. ಭಟ್, ವೇ.ಮೂ.ವಿಜಯ ಭಟ್, ಚಂದ್ರಕಲಾ ಶರ್ಮ, ಶ್ರೀ ದುರ್ಗಾ ಆದಿಶಕ್ತಿ ಭಜನ ಮಂಡಳಿ ಸದಸ್ಯರು ಸಹಕರಿಸಿದ್ದರು. ಪಲ್ಲಕಿ ಚಾಮರ ಸೇವೆ ಸಹಿತ ನೃತ್ಯವನ್ನು ಬೆಳ್ಮಣ್ಣು ವನದುರ್ಗಾ ಬಳಗದವರು ನಡೆಸಿದರು.
ನೃತ್ಯ ಸುತ್ತನ್ನು ಸ್ವಾತಿ ಆಚಾರ್ಯ, ಯಕ್ಷಗಾನ ಸುತ್ತಿನಲ್ಲಿ ಉಪ್ಪೂರು ಭಾಗ್ಯಲಕ್ಷ್ಮೀ, ಭಜನೆ ಸುತ್ತಿನಲ್ಲಿ ಗುಂಡಿಬೈಲು ಕಾಲಭೈರವ ಭಜನ ಮಂಡಳಿ, ಶೃಂಗಾರ ವಾದ್ಯದಲ್ಲಿ ವಿಜಯ ಶೇರಿಗಾರ್ ಮತ್ತು ಬಳಗದವರು, ನಾದಸ್ವರ ವಾದನದಲ್ಲಿ ಮುರಳೀಧರ ಮುದ್ರಾಡಿ ಮತ್ತು ತಂಡ, ಚೆಂಡೆ ವಾದ್ಯದಲ್ಲಿ ಬೆಳ್ಕಳೆ ಚೆಂಡೆ ಬಳಗದ ಸದಸ್ಯರಿಂದ, ಪಂಚ ವಾದ್ಯ ವಾದಕರಿಂದ ಪಂಚ ವಾದ್ಯ ಸೇವೆ ನೆರವೇರಿತು. ಪ್ರಧಾನ ಅರ್ಚಕ ಅನೀಶ್ ಆಚಾರ್ಯ, ಆನಂದ ಬಾಯರಿ ಸರ್ವ ಸೇವೆಯಲ್ಲಿ ಸಹಕರಿಸಿದ್ದರು. ದೇವಿಯ ನರ್ತನ ಸೇವೆಯನ್ನು ಪಳ್ಳಿ ಗುರುಪ್ರಸಾದ್ ಭಟ್ ನಿರ್ವಹಿಸಿದ್ದರು. ನೈವೇದ್ಯ ತಯಾರಿಯಲ್ಲಿ ಸದಾನಂದ ಭಟ್ ಸಹಕರಿಸಿದ್ದರು.ರಂಗಪೂಜೆಯಲ್ಲಿ ತಪ್ತತ್ ದೇವತೆಗಳಿಗೆ ಉಣಬಡಿಸಿದ ಅಪೂಪ ಕದಳಿ ಸಹಿತವಾದ ಅನ್ನ ಮುದ್ರೆಯನ್ನು ನೆರೆದ ಭಕ್ತರಿಗೆ ವಿತರಿಸಲಾಯಿತು. ಈ ಅನ್ನ ಮುದ್ರೆಯ ಸೇವನೆಯಿಂದ ಉತ್ತಮ ಆರೋಗ್ಯ ಪ್ರಾಪ್ತಿಯಾಗುತ್ತದೆ ಎಂದು ಪ್ರತೀತಿ ಇರುವ ಹಿನ್ನೆಲೆಯಲ್ಲಿ ಕ್ಷೇತ್ರದ ರಂಗಪೂಜೆಯ ಅನ್ನ ಮುದ್ರೆಯನ್ನು ಸಾಕಷ್ಟು ಭಕ್ತರು ಸ್ವೀಕರಿಸಿದರು.
ರಂಗ ಪೂಜೆಯ ಬಳಿಕ ನೆರವೇರಿದ ಮಹಾಮಂತ್ರಾಕ್ಷತೆ ಕಾರ್ಯಕ್ರಮದಲ್ಲಿ ದಂಪತಿ, ಆಚಾರ್ಯ, ಕನ್ನಿಕಾ, ಬ್ರಹ್ಮಚಾರಿ ಪೂಜೆ ನೆರವೇರಿತು. ಬೆಳಗ್ಗಿನಿಂದ ರಾತ್ರಿಯವರೆಗೂ ಅನ್ನಪ್ರಸಾದ ನಿರಂತರವಾಗಿ ಕ್ಷೇತ್ರದಲ್ಲಿ ಭಕ್ತರಿಗೆ ಉಣ ಬಡಿಸಲಾಗಿತ್ತು. ನಿರಂತರ 11 ದಿನಗಳ ಕಾಲ ದೇವತಾರಾಧನೆ, ಕಲಾರಾಧನೆ, ಸಮಾರಾಧನೆಯಿಂದ ಉತ್ಸವ ಯಶಸ್ವಿಯಾಗಿ ನೆರವೇರಿತು ಎಂದು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿದ್ದಾರೆ.