ರಾಜ್ಯದಲ್ಲಿನ 34 ಸಾವಿರ ಗ್ರಾಮೀಣ ದೇವಾಲಯಗಳಲ್ಲಿ ಪೂಜೆ ಸಲ್ಲಿಸುತ್ತಿರುವ ಅರ್ಚಕರಿಗೆ ಸಂಸ್ಕಾರ ಮತ್ತು ಧಾರ್ಮಿಕ ಆಚರಣೆಗಳ ಕುರಿತು ತರಬೇತಿ ನೀಡಲು ಧಾರ್ಮಿಕ ಸಂಸ್ಥೆಗಳು ಮತ್ತು ಅರ್ಚಕರ ಸಂಘ ಮುಂದಾದರೆ ಸರ್ಕಾರ ಅಗತ್ಯ ಸಹಕಾರ ನೀಡಲಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದಲ್ಲಿನ 34 ಸಾವಿರ ಗ್ರಾಮೀಣ ದೇವಾಲಯಗಳಲ್ಲಿ ಪೂಜೆ ಸಲ್ಲಿಸುತ್ತಿರುವ ಅರ್ಚಕರಿಗೆ ಸಂಸ್ಕಾರ ಮತ್ತು ಧಾರ್ಮಿಕ ಆಚರಣೆಗಳ ಕುರಿತು ತರಬೇತಿ ನೀಡಲು ಧಾರ್ಮಿಕ ಸಂಸ್ಥೆಗಳು ಮತ್ತು ಅರ್ಚಕರ ಸಂಘ ಮುಂದಾದರೆ ಸರ್ಕಾರ ಅಗತ್ಯ ಸಹಕಾರ ನೀಡಲಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ, ಅಗಮಿಕರ ಮತ್ತು ನೌಕರರ ಸಂಘದಿಂದ ಡಾ। ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬುಧವಾರ ಆಯೋಜಿಸಿದ್ದ ರಾಜ್ಯಮಟ್ಟದ ಸಮಾವೇಶ ಹಾಗೂ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಗ್ರಾಮೀಣ ಭಾಗದಲ್ಲಿರುವ 34 ಸಾವಿರ ದೇವಸ್ಥಾನಗಳಲ್ಲಿನ ಅರ್ಚಕರಿಗೆ ಮಠಗಳು, ಅರ್ಚಕರ ಸಂಘದವರು ಸಂಸ್ಕಾರ ಕಲಿಸುವ ಕೆಲಸ ಮಾಡಬೇಕು. ಅರ್ಚಕರಿಗೆ ಮೂರು ತಿಂಗಳ ತರಬೇತಿ ನೀಡಬೇಕು. ಅದಕ್ಕೆ ಅಗತ್ಯವಿರುವ ಎಲ್ಲ ಸಹಕಾರವನ್ನು ಸರ್ಕಾರ ನೀಡಲಿದೆ. ನೀವು ನಿಮ್ಮ ವಿದ್ಯೆಯನ್ನು ಬೇರೆಯವರಿಗೆ ದಾನ ಮಾಡಿದರೆ ಸಮಾಜದಲ್ಲೂ ಬದಲಾವಣೆಯಾಗಲಿದೆ ಎಂದರು.
ನಾವು ಹಿಂದೂಗಳಲ್ಲವೇ?:ಕೆಲವರು ಧರ್ಮವನ್ನು ಗುತ್ತಿಗೆ ಪಡೆದವರಂತಾಡುತ್ತಿದ್ದಾರೆ. ಆದರೆ, ಅವರದ್ದು ಖಾಲಿ ಟ್ರಂಕು. ಶಾಲು ಹಾಕಿಕೊಂಡು ದೇವರು, ಧರ್ಮ ಎಲ್ಲವೂ ತಮ್ಮದೇ ಎನ್ನುತ್ತಾರೆ. ನಾನು, ರಾಮಲಿಂಗಾರೆಡ್ಡಿ, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಅವರು ಹಿಂದೂಗಳಲ್ಲವೇ? ಬೇರೆ ಸರ್ಕಾರಗಳ ಅವಧಿಯಲ್ಲಿ ನಿಮ್ಮ ಬದುಕಿನಲ್ಲಿ ಯಾವುದೇ ಬದಲಾವಣೆ ತರಲಿಲ್ಲ. ನಾವು ಆ ಕೆಲಸ ಮಾಡಿದ್ದು, ಅದರ ಕೂಲಿ ಕೇಳುತ್ತೇವೆ. ಅವರು ಕೇವಲ ಶಾಲು ಹಾಕಿಕೊಂಡು ರಾಮ ರಾಮ... ಎಂದಾಕಷ್ಟ ಧರ್ಮ ರಕ್ಷಕರಾಗುತ್ತಾರೆಯೇ? ರಾಮ ಮಂದಿರದ ಹುಂಡಿ ಕದ್ದು ಮರ್ಯಾದೆ ತೆಗೆದರು. ರಾಜ್ಯದಲ್ಲಿ ನಿಮಗೆಲ್ಲ ಅವಮಾನವಾಗಬಾರದು ಎಂದು ದೊಡ್ಡ ದೇವಾಲಯಗಳ ಹುಂಡಿ ಬಳಿ ಸಿಸಿಟಿವಿ ಕ್ಯಾಮರಾ ಅಳವಡಿಸಲು ಮುಂದಾಗಿದ್ದೇವೆ ಎಂದು ತಿಳಿಸಿದರು.
ನಾವು ಅಧಿಕಾರಕ್ಕೆ ಬಂದ ಬಳಿಕ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಪಂಚ ಗ್ಯಾರಂಟಿ ಯೋಜನೆ ಘೋಷಣೆ ಮಾಡಿ ಯೋಜನೆ ಜಾರಿ ಮಾಡುವ ಶಕ್ತಿ ನೀಡು ಎಂದು ತಾಯಿ ಚಾಮುಂಡೇಶ್ವರಿ ಬಳಿ ಪ್ರಾರ್ಥನೆ ಮಾಡಿದೆ. ಅದರಂತೆಯೇ ನಮಗೆ 136 ಸ್ಥಾನಗಳನ್ನು ಗೆದ್ದೆವು. ಬೆಲೆ ಏರಿಕೆ ಮಧ್ಯದಲ್ಲಿ ಗ್ಯಾರಂಟಿ ಯೋಜನೆಗಳು ಜನರಿಗೆ ಆಸರೆಯಾಗಿವೆ ಎಂದು ಹೇಳಿದರು.ಇದು ಡಿ.ಕೆ.ಶಿವಕುಮಾರ್ ಸರ್ಕಾರವಲ್ಲ. ಇದು ನಿಮ್ಮ ಸರ್ಕಾರ. ನೀವು ಭಕ್ತರ ಪ್ರಾರ್ಥನೆಯನ್ನು ದೇವರಿಗೆ ತಲುಪಿಸುವವರು. ಮುಂದೆ ನಿಮ್ಮ ಸರ್ಕಾರ ಅಧಿಕಾರಕ್ಕೆ ಬರಲು ನೀವು ಶ್ರಮಿಸಬೇಕು. 136 ಸ್ಥಾನಗಳನ್ನು ನೀಡಿದ ಜನ ಮುಂದಿನ ಚುನಾವಣೆಯಲ್ಲಿ 150 ಸ್ಥಾನಗಳನ್ನು ನೀಡುವಂತೆ ದೇವರಲ್ಲಿ ಪ್ರಾರ್ಥಿಸಿ. ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ ಎಂದರು.
ಸಮಾರಂಭದಲ್ಲಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ‘ಅರ್ಚಕರ ಕಣ್ಮಣಿ’ ಎಂಬ ಬಿರುದು ನೀಡಿ ಸನ್ಮಾನಿಸಲಾಯಿತು. ಧಾರ್ಮಿಕ ಪರಿಷತ್ ಸದಸ್ಯ ದ್ವಾರಕನಾಥ್, ಸಂಗದ ಅಧ್ಯಕ್ಷ ಶ್ರೀವತ್ಸ, ಚಾಮುಂಡೇಶ್ವರಿ ದೇಗುಲದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ಇದ್ದರು.‘ರೆಡ್ಡಿಗೆ ಮುಜರಾಯಿ ಖಾತೆ ನೀಡಲು ಸಿದ್ಧ’:ಕಾರ್ಯಕ್ರಮದಲ್ಲಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮುಜರಾಯಿ ಖಾತೆ ನೀಡಿ ಎಂದು ಅರ್ಚಕರು ಆಗ್ರಹಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ರಾಮಲಿಂಗಾರೆಡ್ಡಿ ಅವರಿಗೆ ಬೆಂಗಳೂರು ಅಭಿವೃದ್ಧಿ ಖಾತೆ ನೀಡುವ ಆಸೆಯಿತ್ತು. ಆದರೆ, ಪಕ್ಷ ತೀರ್ಮಾನ ಮಾಡಿದ್ದರಿಂದ ಆಗಲಿಲ್ಲ. ಇದೀಗ ನೀವು ಮತ್ತು ರಾಮಲಿಂಗಾರೆಡ್ಡಿ ಅವರು ಕುಳಿತು ಚರ್ಚೆ ಮಾಡಿ ಹೇಳಿ. ನಾನೂ ರಾಮಲಿಂಗಾರೆಡ್ಡಿ ಅವರೊಂದಿಗೆ ಚರ್ಚಿಸುತ್ತೇವೆ. ಅವರಿಗೆ ಮುಜರಾಯಿ ಖಾತೆ ನೀಡಲು ಸಿದ್ಧನಿದ್ದೇನೆ ಎಂದರು.