ಸಾರಾಂಶ
ಉಳ್ಳಾಲ: ನಾಯಿ ದಾಳಿಯಿಂದ ಮಧ್ಯವಯಸ್ಕ ಭೀಬತ್ಸವಾಗಿ ಮೃತಪಟ್ಟ ಘಟನೆ ಉಳ್ಳಾಲ ತಾಲೂಕು ಕುಂಪಲ ಬೈಪಾಸ್‌ನಲ್ಲಿ ಮನೆ ಅಂಗಳದಲ್ಲಿ ಶುಕ್ರವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಕುಂಪಲ ಮೂರುಕಟ್ಟೆ ನಿವಾಸಿ ದಯಾನಂದ (54) ಮೃತರು.ಅಂಗಡಿಯೊಂದರ ಎದುರು ಮಲಗಿದ್ದ ಅವರ ಮೇಲೆ ಬೆಳಗ್ಗೆ 3 ರಿಂದ 4 ಗಂಟೆ ಹೊತ್ತಿಗೆ ಬೀದಿ ನಾಯಿ ದಾಳಿ ನಡೆಸಿದ್ದು, ಅವರು ರಸ್ತೆ ಬದಿಯಿಂದ ತಪ್ಪಿಸಿಕೊಂಡು ಪಕ್ಕದ ಮನೆಯೊಂದಕ್ಕೆ ಹೋದರೂ ಅಟ್ಟಿಸಿಕೊಂಡು ಬಂದು ದಾಳಿ ಮಾಡಿದ್ದು, ಮುಖ, ಕೈ, ಕಾಲು, ದೇಹಕ್ಕೆ ಭೀಕರವಾಗಿ ಕಚ್ಚಿ ದಾಳಿ ಮಾಡಿದೆ.ಬೆಳಗ್ಗೆ ದಯಾನಂದ್ ಸಾಯಿ ಲಾಂಡ್ರಿಯ ಎದುರಿನ ಖೈರುನ್ನೀಸ ಎಂಬವರ ಮನೆಯ ಅಂಗಳದಲ್ಲಿ ಜೀವನ್ಮರಣ ಹೋರಾಟದಲ್ಲಿ ರಕ್ತದ ಮಡುವಲ್ಲಿ ಬಿದ್ದಿದ್ದರೆನ್ನಲಾಗಿದೆ.ಸ್ಥಳೀಯರು ಘಟನೆ ಬಗ್ಗೆ ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ದಯಾನಂದ್ ಸಾವು ಸಂಭವಿಸಿತ್ತು. ದಯಾನಂದ್ ಅವರ ಮೂಗಿನ ಎಡ ಭಾಗ ಮತ್ತು ಎಡ ಕಣ್ಣಿನ ಗುಡ್ಡೆ ಕಿತ್ತೋಗಿದ್ದು ಮುಖದ ಎಡ ಭಾಗವೇ ಜರ್ಜರಿತವಾಗಿತ್ತು.ಕುಂಪಲ ಪ್ರದೇಶದಲ್ಲಿ ಬೀದಿನಾಯಿಗಳ ಹಾವಳಿ ಮಿತಿ ಮೀರಿದ್ದು ಈ ಬಗ್ಗೆ ಸ್ಥಳೀಯ ಪುರಸಭಾ ಸದಸ್ಯರಾದ ಮನೋಜ್ ಕಟ್ಟೆಮನೆ ಅವರು ಸೋಮೇಶ್ವರ ಪುರಸಭೆಯ ಸಾಮಾನ್ಯ ಸಭೆಯಲ್ಲೂ ಧ್ವನಿ ಎತ್ತಿದ್ದರು. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಯಾನಂದ್ ಅವಿವಾಹಿತರಾಗಿದ್ದು ಸಣ್ಣ ಪುಟ್ಟ ಕೂಲಿ ಕೆಲಸ ಮಾಡುತ್ತಿದ್ದು,ಕುಡಿತದ ಚಟಕ್ಕೆ ಸಿಲುಕಿದ್ದರು. ನಸುಕಿನ ಜಾವ ಮೂರುವರೆ ಗಂಟೆಯವರೆಗೆ ದಯಾನಂದ್ ಬೈಪಾಸ್ ಜಂಕ್ಷನ್ ನಲ್ಲೇ ಇದ್ದುದನ್ನ ಸ್ಥಳೀಯ ಹಾಲಿನ ಡೈರಿಯ ಮಾಲಕರು ನೋಡಿದ್ದಾರೆ. ದಯಾನಂದ್ ಇಬ್ಬರು ಸಹೋದರ, ಇಬ್ಬರು ಸಹೋದರಿಯನ್ನು ಅಗಲಿದ್ದಾರೆ.ಉಳ್ಳಾಲ ತಾಲೂಕಿನಾದ್ಯಂತ ಬೀದಿ ನಾಯಿಗಳ ಕಾಟ ದಿನೇ ದಿನೇ ಹೆಚ್ಚುತ್ತಿದ್ದು, ಶಾಲಾ ಮಕ್ಕಳು ಹಾಗೂ ಪಾದಚಾರಿಗಳು ರಸ್ತೆಯಲ್ಲಿ ಸುರಕ್ಷಿತವಾಗಿ ಸಂಚರಿಸಲು ಭಯಪಡುವ ಪರಿಸ್ಥಿತಿ ಉಂಟಾಗಿದೆ.ಶುಕ್ರವಾರ ತಡರಾತ್ರಿ ಕುಂಪಲ ಬೈಪಾಸ್ ಸಮೀಪದ ಲಾಂಡ್ರಿ ಅಂಗಡಿ ಮುಂದೆ ದಯಾನಂದ್ ಇದ್ದರು. 3 ಗಂಟೆ ನಸುಕಿನ ವೇಳೆ ದಯಾನಂದ್ ಅಂಗಡಿ ಸಮೀಪ ಇರುವುದನ್ನು ಸ್ಥಳೀಯ ಹಾಲಿನ ಬೂತ್ ಮಾಲೀಕ ವಿನೋದ್ ಕುಂಪಲ ತಿಳಿಸಿದ್ದಾರೆ.ಬೆಳಗ್ಗೆ ಮನೆ ಅಂಗಳದಲ್ಲಿ ಸ್ಕೂಟರ್ ಮತ್ತು ರಿಕ್ಷಾ ಇರುವ ಹಿಂಭಾಗದಲ್ಲಿ ದಯಾನಂದನ ಮೃತದೇಹ ಪತ್ತೆಯಾಗಿದೆ. ನಾಯಿ ಕೂಡಾ ಮೃತದೇಹದ ಮೇಲೆ ಕುಳಿತು ರಕ್ತ ನೆಕ್ಕುತ್ತಲೇ ಇತ್ತು. ಓಡಿಸಿದರೂ ನಾಯಿ ತೆರಳಿರಲಿಲ್ಲ. ಬಳಿಕ ರಿಕ್ಷಾ ಅಲ್ಲಿಂದ ತೆಗೆಯುವಾಗ ಸ್ಥಳದಿಂದ ತೆರಳಿ ಮತ್ತೆ ಅಂಗಡಿ ಸಮೀಪವಿದ್ದ ರಕ್ತವನ್ನು ನೆಕ್ಕುತ್ತಲೇ ಇತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನಾ ಸ್ಥಳದಿಂದ ಮೈಯಲ್ಲಿ ರಕ್ತವಿದ್ದ ನಾಯಿಯನ್ನು ಪೊಲೀಸರು ವಶಪಡಿಸಿಕೊಂಡು ಶಕ್ತಿನಗರದ ಪ್ರಾಣಿ ಸಂರಕ್ಷಣಾ ಕೇಂದ್ರದಲ್ಲಿ ಇರಿಸಲಾಗಿದೆ. ಅದರ ಮೈಯಲ್ಲಿದ್ದ ರಕ್ತದ ಮಾದರಿಗಳೆಲ್ಲವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಘಟನಾ ಸ್ಥಳಕ್ಕೆ ಸೋಕೋ ತಂಡ, ವಿಧಿ ವಿಜ್ಞಾನ ತಜ್ಞರು, ಫಾರೆನ್ಸಿಕ್ ವೈದ್ಯ ಮಹಾಬಲ ಶೆಟ್ಟಿ, ಉಪ ಪೊಲೀಸ್ ಆಯುಕ್ತ (ಕಾನೂನು ಸುವ್ಯವಸ್ಥೆ) ಮಿಥುನ್, ಸಹಾಯಕ ಪೊಲೀಸ್ ಆಯುಕ್ತ ವಿಜಯ ಕ್ರಾಂತಿ, ಕಂಕನಾಡಿ ಠಾಣಾಧಿಕಾರಿ ಟಿ.ಡಿ.ನಾಗರಾಜ್, ಉಳ್ಳಾಲ ಠಾಣಾಧಿಕಾರಿ ವಿರೂಪಾಕ್ಷ ಹೆಚ್ ಹಾಗೂ ಉಪನಿರೀಕ್ಷಕರು ಸ್ಥಳ ತನಿಖೆ ನಡೆಸಿದರು. ಪ್ರಾಣಿ ದಾಳಿಯಿಂದ ದಯಾನಂದ ಮೃತಪಟ್ಟಿರುವುದಾಗಿ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟಪಡಿಸಿದ್ದು, ಸ್ಥಳಕ್ಕೆ ಭೇಟಿ ನೀಡಿದ ಫಾರೆನ್ಸಿಕ್ ವೈದ್ಯರು ಇದು ಪ್ರಾಣಿ ದಾಳಿಯಿಂದಾದ ಸಾವೇ ಎಂಬುದನ್ನು ದೃಢಪಡಿಸಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು, ಈ ಸಂಬಂಧ ಯು.ಡಿ.ಆರ್. ಕೇಸ್ ದಾಖಲಿಸಲಾಗುವುದು ಹಾಗೂ ಮುಂದಿನ ತನಿಖೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಸುಳ್ಳು ಸುದ್ಧಿ ಹಬ್ಬಿಸಿದರೆ ಕ್ರಮ: ಈ ಪ್ರಕರಣದಲ್ಲಿ ಸುಳ್ಳು ಸುದ್ಧಿ ಹಬ್ಬಿಸಿದವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಎಚ್ಚರಿಸಿದ್ದಾರೆ. ಸದ್ಯ ಕೊಂದಿದ್ದ ನಾಯಿ ಕೂಡಾ ಪತ್ತೆಯಾಗಿದೆ ಮತ್ತು ಅದರ ದೇಹದ ಮೇಲೆ ಸ್ಪಷ್ಟವಾದ ರಕ್ತದ ಕಲೆಗಳು ಕಂಡುಬಂದಿವೆ. ಕೆಲವರು ಇಲ್ಲಿ ಕೊಲೆ ನಡೆದಿದೆ ಎಂದು ವದಂತಿ ಹಬ್ಬಿಸುವ ಕೆಲಸದಲ್ಲಿದ್ದಾರೆ. ಅವರು ಪತ್ತೆಯಾಗುತ್ತಿದ್ದಂತೆಯೇ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.;Resize=(128,128))
;Resize=(128,128))
;Resize=(128,128))