ಡೋಹರ ಕಕ್ಕಯ್ಯ ಬಸವಾದಿ ಶರಣರಲ್ಲಿ ಮಹಾ ಪ್ರಸಾದಿ

| Published : Feb 27 2025, 12:35 AM IST

ಡೋಹರ ಕಕ್ಕಯ್ಯ ಬಸವಾದಿ ಶರಣರಲ್ಲಿ ಮಹಾ ಪ್ರಸಾದಿ
Share this Article
  • FB
  • TW
  • Linkdin
  • Email

ಸಾರಾಂಶ

ಮುರುಘಾಮಠದಲ್ಲಿ ಬುಧವಾರ ಆಯೋಜಿಸಿದ್ದ ಡೋಹರ ಕಕ್ಕಯ್ಯಜ ಯಂತಿ ಆಚರಣೆಯಲ್ಲಿ ಡಾ.ಬಸವಕುಮಾರ ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಮುರುಘಾಮಠದಲ್ಲಿನ ನಡೆದ ಜಯಂತಿ ಆಚರಣೆಯಲ್ಲಿ ಡಾ.ಬಸವಕುಮಾರ ಸ್ವಾಮೀಜಿ ಬಣ್ಣನೆಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಡೋಹರ ಕಕ್ಕಯ್ಯ ಬಸವಾದಿ ಶರಣರದಲ್ಲಿ ಮಹಾ ಪ್ರಸಾದಿ ಎಂದು ಎಸ್ ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಹೇಳಿದರು

ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಬುಧವಾರ ಹಮ್ಮಿಕೊಳ್ಳಲಾದ ಶಿವಶರಣ ಡೋಹರ ಕಕ್ಕಯ್ಯನವರ ಜಯಂತಿ ಆಚರಣೆ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು ಒಮ್ಮೆ ಕಕ್ಕಯ್ಯನವರು ಬಸವಣ್ಣನವರನ್ನು ಪ್ರಸಾದಕ್ಕೆ ಆಹ್ವಾನಿಸಿದ್ದಾಗ ಬಸವಣ್ಣನವರು ತಪ್ಪಿಸಿಕೊಂಡಿರುತ್ತಾರೆ. ನಂತರ ಬಸವಣ್ಣನವರಿಗೆ ಡೋಹರ ಕಕ್ಕಯ್ಯನವರ ಪ್ರಸಾದ ಸ್ವೀಕರಿಸಲು ಹನ್ನೆರಡು ವರ್ಷ ಬೇಕಾಯಿತು. ಅದು ಇರುವೆಯ ಆಹಾರ ರೂಪದಲ್ಲಿ ಡೋಹರ ಕಕ್ಕಯ್ಯನವರ ಪ್ರಸಾದ ದೊರೆಯಿತೆಂದರು.

ಯಾವ ಗುರು ತನುಮನ ಭಾವಶುದ್ಧಿಯಿಂದ ಬದುಕುತ್ತಾನೋ ಅವರ ಪ್ರತಿಯೊಂದು ಆಚರಣೆ ಪ್ರಸಾದವಿದ್ದಂತೆ. ಶರಣ ನಿದ್ರೆಗೈದರೆ ಜಪ ಕಾಣಿರೋ- ಶರಣನೆದ್ದು ಕುಳಿತರೆ ಶಿವರಾತ್ರಿ ಕಾಣಿರೋ ಎಂಬಂತೆ ನಡೆ-ನುಡಿ ಶುಚಿಯಾಗಿರುವ ವ್ಯಕ್ತಿ ಮಲಗಿದರೂ ಜಪ ಮಾಡಿದಂತೆ. ಶರಣ ಎದ್ದು ಕುಳಿತರೆ ಶಿವರಾತ್ರಿ ಎಂದು ಬಸವಣ್ಣ ಹೇಳಿದ್ದಾರೆ. ಶರಣರನ್ನು ಪ್ರಸಾದಿಕರು ಎನ್ನುತ್ತಾರೆ. ಪ್ರಸಾದವೆಂದರೆ ಪ್ರಸನ್ನತೆ. ಪ್ರಸನ್ನತೆ ಅಳವಡಿಸಿಕೊಂಡರೆ ಪ್ರಸಾದಿಕರಾಗುತ್ತಾರೆ ಎಂದರು.

ನಮ್ಮ ದೇಹದ ಪ್ರತಿಯೊಂದು ಭಾಗವನ್ನು ಲಿಂಗತತ್ತ್ವ ಎಂದು ಕರೆಯುತ್ತೇವೆ. ಲಿಂಗತತ್ತ್ವ ಎಂದರೆ ಸತ್ಯವಾದ ತತ್ತ್ವ. ಕಣ್ಣು-ನಮ್ಮ ತನು ಮನ ಶುಚಿಗೆ ನೋಡಬೇಕು. ಕಿವಿ-ನಮಗೆ ಇಷ್ಟವಾದದ್ದನ್ನು ಕೇಳಿದರೆ ನಮಗೆ ಅದು ಪ್ರಸಾದವಾಗಬೇಕು. ಅದಕ್ಕೆ ಶರಣರು ಇಷ್ಟಲಿಂಗ ನೋಡಲು ಹೇಳಿದ್ದಾರೆ. ಮನಸ್ಸು ಚಂಚಲತೆಯಿಂದ ದೂರವಿರಲು ಇಷ್ಟಲಿಂಗ ನೋಡಬೇಕು. ಇದರಿಂದ ನಮ್ಮ ಆಲೋಚನೆಗಳು ಶುದ್ಧವಾಗಿ ನಮ್ಮ ನಡವಳಿಕೆ ಶುದ್ಧವಾಗಿರುತ್ತದೆ. ಇಂತಹ ತತ್ವಗಳನ್ನು ಅಳವಡಿಸಿಕೊಂಡಿದ್ದವರು ಡೋಹರ ಕಕ್ಕಯ್ಯ ಎಂದು ಶ್ರೀಗಳು ತಿಳಿಸಿದರು.

ಉಪನ್ಯಾಸಕ ಚಿಕ್ಕೋಬನಹಳ್ಳಿ ಡಾ.ಓಬಳೇಶ್ ಮಾತನಾಡಿ, 12ನೇ ಶತಮಾನದ ಸಾಹಿತ್ಯದ ಅಧ್ಯಯನದ ಸಂದರ್ಭದಲ್ಲಿ ಜಡ್ಡುಗಟ್ಟಿದ ಸಮಾಜವನ್ನು ಸ್ಪಟಿಕದ ಶಿಲೆಯಂತೆ ಕಂಗೊಳಿಸಲು ಕಾರಣರಾದವರು ಶರಣರು. ಶರಣರ ಪೂರ್ವ ಸಮಾಜ ಚಲನಶೀಲ, ಜಂಗಮಶೀಲ ಸಮಾಜವಾಗಿರಲಿಲ್ಲ. ಶರಣರ ಆಗಮನ ಸಕಲ ಜೀವರಾಶಿಗಳಿಗೂ ಸಂಚಲನವನ್ನುಂಟು ಮಾಡಿತು. ಮೇಲು-ಕೀಳು, ಬೇಧ ಭಾವ, ಅಸ್ಪೃಶ್ಯತೆ ಹೋಗಲಾಡಿಸಿ ಸಮಾನತೆಗೆ ಹೋರಾಡಿ ಕಲ್ಯಾಣಕ್ರಾಂತಿ ಮಾಡಿದವರು ಬಸವಣ್ಣನವರು ಎಂದರು.

ಸಂಶೋಧಕರ ಪ್ರಕಾರ ಡೋಹರ ಕಕ್ಕಯ್ಯನವರು ಪುಣೆ ಬಳಿಯ ಮಾವಳ್ಳಿ ಪ್ರದೇಶದಿಂದ ಬಂದವರೆಂದು ತಿಳಿಯುತ್ತದೆ.ಡೋಹರ ಕಕ್ಕಯ್ಯ ಚರ್ಮ ಹದ ಮಾಡುವ ಕಾಯಕ ಮಾಡುತ್ತಿದ್ದರು. ಕೃಷಿಗೆ ಬೇಕಾದ ಪರಿಕರಗಳನ್ನು ಅವರು ಸಿದ್ಧಪಡಿಸುತ್ತಿದ್ದರು. ಇದರಿಂದ ಬಂದ ಆದಾಯವನ್ನು ಶರಣರ ದಾಸೋಹಕ್ಕಾಗಿ ಅವರು ವಿನಿಯೋಗಿಸುತ್ತಿದ್ದರು. ಆಸೆ, ಸ್ವಾರ್ಥ, ಆಮಿಷಗಳನ್ನು ಬದಿಗೊತ್ತಿ ಕಾಯಕ ಮಾಡಿದವರು ಡೋಹರ ಕಕ್ಕಯ್ಯನವರು. ಮಾಳವ ದೇಶದಲ್ಲಿ ಡೋಹರ ಜನಾಂಗದವರು ಹೆಚ್ಚಾಗಿ ವಾಸ ಮಾಡುತ್ತಿದ್ದು, ಇವರೆಲ್ಲ ಕೃಷಿ ಮುಖ್ಯವಾಗಿತ್ತು. ಚರ್ಮದಿಂದ ತಯಾರಿಸಲಾದ ಕಪಿಲೆಯಿಂದ ಬಾವಿಯ ನೀರನ್ನು ಬಳಸಿ ಕೃಷಿ ಮಾಡಲಾಗುತ್ತಿತ್ತು ಎಂದು ಹೇಳಿದರು.

ಡೋಹರ ಕಕ್ಕಯ್ಯನವರ ಹುತಾತ್ಮರಾದ ಸ್ಥಳ ಕಕ್ಕೇರಿ ಪುರಾಣ ಪ್ರಸಿದ್ಧ ಸ್ಥಳವಾಗಿದೆ. ಪ್ರತಿ ಶಿವರಾತ್ರಿಯೆಂದು ಜಾತ್ರೆ ನಡೆಸಲಾಗುತ್ತದೆ. ಸಾಮೂಹಿಕ ವಿವಾಹಗಳನ್ನು ಆಯೋಜಿಸಲಾಗುತ್ತಿದೆ. ಡೋಹರ ಜನಾಂಗದವರು ದೇಶದ್ಯಾಂತ ಒಟ್ಟು 6 ರಾಜ್ಯಗಳಲ್ಲಿದ್ದಾರೆ ಎಂದು ತಿಳಿಸಿದರು. ಕಣಿವೆ ಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ ಇದ್ದರು. ಬಸವರಾಜ ಕಟ್ಟಿ ಪ್ರಾರ್ಥಿಸಿದರು. ಡಾ. ಚಿದಾನಂದಪ್ಪ ಎಂ.ಆರ್ ಸ್ವಾಗತಿಸಿದರು.