ಅಪ್ರಾಪ್ತರಿಗೆ ವಾಹನ ಚಾಲನೆಗೆ ಅವಕಾಶ ನೀಡಬೇಡಿ: ಮುಖ್ಯಪೇದೆ ಆಶಾ

| Published : Feb 12 2025, 12:31 AM IST

ಸಾರಾಂಶ

ಸುಂಟಿಕೊಪ್ಪ ಗುಂಡುಗುಟ್ಟಿ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದಲ್ಲಿ ಪೊಲೀಸ್ ಇಲಾಖೆ ವತಿಯಿಂದ ವಾಹನ ಚಾಲನೆ ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ವಾಹನ ಚಾಲಕರಿಗೆ ಮಾಹಿತಿ ಕಾರ್ಯಾಗಾರ ಆಯೋಜಿಸಲಾಯಿತು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಅಪ್ರಾಪ್ತ ಮಕ್ಕಳು ಬೇಡಿಕೆ ಇಡುತ್ತಾರೆಂದು ಪೋಷಕರು, ವಾಹನಗಳನ್ನು ತೆಗೆದುಕೊಡುವುದು ಮತ್ತು ಚಾಲನೆಗೆ ನೀಡುವುದು, ದ್ವಿಚಕ್ರ ವಾಹನಗಳಲ್ಲಿ ಇಬ್ಬರಿಗಿಂತ ಅಧಿಕ ಮಂದಿ ಸವಾರಿ ಮಾಡುವುದು, ವಾಹನ ಚಾಲನಾ ಪರವಾನಗಿ ಹೊಂದದೆ ವಾಹನ ಚಾಲನೆ ಮಾಡುವುದು ಕಾನೂನು ರೀತಿಯಲ್ಲಿ ಅಪರಾಧವಾಗಿದೆ. ವಾಹನ ಸವಾರರು ಕಾನೂನು ಅರಿವು ಪಡೆದು ಶಿಕ್ಷೆಯಿಂದ ಪಾರಾಗಬೇಕು ಎಂದು ಸುಂಟಿಕೊಪ್ಪ ಪೊಲೀಸ್ ಠಾಣೆಯ ಮುಖ್ಯಪೇದೆ ಆಶಾ ಹೇಳಿದರು.ಸುಂಟಿಕೊಪ್ಪ ಗುಂಡುಗುಟ್ಟಿ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದಲ್ಲಿ ಪೊಲೀಸ್ ಇಲಾಖೆ ವತಿಯಿಂದ ವಾಹನ ಚಾಲನೆ ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ವಾಹನ ಚಾಲಕರಿಗೆ ಆಯೋಜಿಸಲಾದ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಾಹನಗಳನ್ನು ರಸ್ತೆಯಲ್ಲಿ ಚಲಾಯಿಸುವಾಗ ಚಾಲಕರು, ವಾಹನಕ್ಕೆ ಸಂಬಂಧಿಸಿದ ದಾಖಲಾತಿ ಪತ್ರಗಳನ್ನು ವಾಹನದಲ್ಲಿರಿಸಿಕೊಳ್ಳಬೇಕು. ವಾಹನದ ಮಿತಿಗಿಂತ ಅಧಿಕ ಮಂದಿಯನ್ನು ಕುಳ್ಳಿರಿಸಿಕೊಂಡು ಚಾಲನೆ ಮಾಡುವುದು ಅಪರಾಧ. ಇದರಿಂದ ಅವಘಡ, ಅನಾಹುತಗಳು ಸಂಭವಿಸಿದಾಗ ವಿಮೆಗಳು ದೊರಕವುದು ಕಷ್ಟಸಾಧ್ಯ ಎಂದು ಹೇಳಿದರು.

ಪೋಷಕರು ಅಪ್ರಾಪ್ತರಿಗೆ ವಾಹನಗಳನ್ನು ಚಾಲನೆ ಮಾಡಲು ಅವಕಾಶ ನೀಡಬೇಡಿ, ಅಪ್ರಾಪ್ತ ವಯಸ್ಸಿನವರು ವಾಹನ ಚಾಲನೆ ಮಾಡುವಾಗ ಪೊಲೀಸ್ ಅಥವಾ ಸಾರಿಗೆ ಅಧಿಕಾರಿಗಳಿಗೆ ಸಿಕ್ಕಿಬಿದ್ದಲ್ಲಿ ಪೋಷಕರಿಗೆ 25,000 ರು. ದಂಡ ಹಾಗೂ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮಾಹಿತಿ ಕಾರ್ಯಾಗಾರದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಭವ್ಯ ವಹಿಸಿದ್ದರು.ವೇದಿಕೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಂಟಿಕೊಪ್ಪ ಒಕ್ಕೂಟ ಅಧ್ಯಕ್ಷೆ ಲೀಲಾವತಿ, ಶಾಂತಗಿರಿ ಒಕ್ಕೂಟ ಅಧ್ಯಕ್ಷೆ ಶುಭ, ಸೇವಾ ಪ್ರತಿನಿಧಿಗಳಾದ ಚಿತ್ರಾ, ನಂದಿನಿ ಹಾಗೂ ಪದಾಧಿಕಾರಿಗಳು ಇದ್ದರು.