ಯುವಕರೇ ದುಶ್ಚಟಗಳಿಗೆ ದಾಸರಾಗಬೇಡಿ: ಎಸ್ಪಿ ಎನ್.ಯತೀಶ್ ಕರೆ

| Published : Jun 27 2024, 01:04 AM IST

ಯುವಕರೇ ದುಶ್ಚಟಗಳಿಗೆ ದಾಸರಾಗಬೇಡಿ: ಎಸ್ಪಿ ಎನ್.ಯತೀಶ್ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳ ಜೀವನದಲ್ಲಿ ಸಾಧನೆ ಮಾಡಲು ಗುರಿ ಇರಬೇಕು. ಗುರಿ ಮುಟ್ಟಲು ಶ್ರಮ ಪಡಬೇಕು. ಆದರೆ, ಪರಿಶ್ರಮವಿಲ್ಲದೇ ದೇಶದ ಮುಂದಿನ ಶಕ್ತಿಯಾಗಬೇಕಿರುವ ಯುವ ಜನತೆ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಇದನ್ನು ತಡೆಗಟ್ಟಲು ಪ್ರತಿಯೊಬ್ಬರೂ ಕೈಜೋಡಿಸಬೇಕು. ಮಾದಕ ವಸ್ತುಗಳಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿದು ಇದರಿಂದ ಸದಾ ದೂರವಿರಬೇಕು. ವಿದ್ಯಾರ್ಥಿಗಳು ಜ್ಞಾನಾರ್ಜನಗೆ ಮೊದಲ ಆದ್ಯತೆ ನೀಡಿ ಉತ್ತಮ ಜೀವನ ರೂಪಿಸಿಕೊಳ್ಳಬೇಕು‌.

ಕನ್ನಡಪ್ರಭ ವಾರ್ತೆ ಮಂಡ್ಯ

ದೇಶದ ಭವಿಷ್ಯದ ಶಕ್ತಿಯಾಗಬೇಕಿರುವ ಯುವಜನಾಂಗ ದುಶ್ಚಟಗಳಿಗೆ ದಾಸರಾಗುತ್ತಿರುವುದು ಹೆಚ್ಚಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಆತಂಕ ವ್ಯಕ್ತಪಡಿಸಿದರು.

ನಗರದ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆರಕ್ಷಕ ಇಲಾಖೆ ಮತ್ತು ಅಬಕಾರಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆದಲ್ಲಿ ಮಾತನಾಡಿ, ಮಾದಕ ವಸ್ತುಗಳ ಸೇವನೆಗೆ ಹೆಚ್ಚಾಗಿ ವಿದ್ಯಾರ್ಥಿಗಳೇ ದಾಸರಾಗುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅವರು ಆಯ್ಕೆ ಮಾಡಿಕೊಳ್ಳುವ ಸ್ನೇಹಿತ ವರ್ಗ, ಭವಿಷ್ಯದ ಗುರಿ ಇಲ್ಲದಿರುವುದೇ ಕಾರಣ ಎಂದರು.

ವಿದ್ಯಾರ್ಥಿಗಳ ಜೀವನದಲ್ಲಿ ಸಾಧನೆ ಮಾಡಲು ಗುರಿ ಇರಬೇಕು. ಗುರಿ ಮುಟ್ಟಲು ಶ್ರಮ ಪಡಬೇಕು. ಆದರೆ, ಪರಿಶ್ರಮವಿಲ್ಲದೇ ದೇಶದ ಮುಂದಿನ ಶಕ್ತಿಯಾಗಬೇಕಿರುವ ಯುವ ಜನತೆ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಇದನ್ನು ತಡೆಗಟ್ಟಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.

ಮಾದಕ ವಸ್ತುಗಳಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿದು ಇದರಿಂದ ಸದಾ ದೂರವಿರಬೇಕು. ವಿದ್ಯಾರ್ಥಿಗಳು ಜ್ಞಾನಾರ್ಜನಗೆ ಮೊದಲ ಆದ್ಯತೆ ನೀಡಿ ಉತ್ತಮ ಜೀವನ ರೂಪಿಸಿಕೊಳ್ಳಬೇಕು‌ ಎಂದರು.

ವಿದ್ಯಾರ್ಥಿ ಜೀವನದಲ್ಲಿ ಸಮಯ ಅತ್ಯಮೂಲ್ಯ. ಮನರಂಜನೆಗೆ ಸಣ್ಣ ಸಮಯ ಮೀಸಲಿಡಿ. ವಿದ್ಯಾಭ್ಯಾಸಕ್ಕೆ ಹೆಚ್ಚಿನ ಸಮಯ ನೀಡಬೇಕು. ಮಾದಕ ವಸ್ತುಗಳನ್ನು ಸೇವನೆಯಿಂದ ದೂರವಿದ್ದು ತಮ್ಮ ಸುತ್ತಮುತ್ತಲಿನ ಜನರಿಗು ಇದರ ಪರಿಣಾಮದ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಮಾದಕ ವಸ್ತುಗಳನ್ನು ಅಕ್ರಮವಾಗಿ ಸಾಗಾಣಿಕೆ ಮಾಡುವುದು ಶಿಕ್ಷರ್ಹ ಅಪರಾಧ. ಭವ್ಯಭಾರತದ ಪ್ರಜೆಗಳಾದ ನೀವು ಜೀವನದಲ್ಲಿ ಯಶಸ್ಸು ಸಾಧಿಸಲು ಕೆಟ್ಟ ಚಟಗಳಿಂದ ದೂರವಿದ್ದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

ಜಿಲ್ಲಾ ಅಬಕಾರಿ ಉಪ ಆಯುಕ್ತ ರವಿಶಂಕರ್ ಮಾತನಾಡಿ, ಆರಂಭದಲ್ಲಿ ಕುತೂಹಲ ಹಾಗೂ ಪ್ರಯೋಗಕ್ಕಾಗಿ ಮೊದಲ ಬಾರಿಗೆ ಮಾದಕ ವಸ್ತು ಸೇವನೆ ಮಾಡುವವರು ನಂತರ ಅದಕ್ಕೆ ದಾಸರಾಗುತ್ತಿದ್ದಾರೆ. ವಿದ್ಯಾರ್ಥಿಗಳೇ ಮಾದಕ ವಸ್ತುಗಳ ಜೊತೆ ಪ್ರಯೋಗ ಬೇಡ ಎಂದರು.

ಕುಟುಂಬದಲ್ಲಿ ಕೆಲವು ಹಿರಿಯರು ಕೆಲಸ ಮಾಡಿ ಆಯಾಸವಾಗಿದೆ ಎಂದು ಮಾದಕ ವಸ್ತುಗಳ ಸೇವನೆ ಮಾಡುತ್ತರೆ. ಆದರೆ, ಇದು ಮನೆಯಲ್ಲಿರುವ ಮಕ್ಕಳ ಮೇಲೆ ಪರಿಣಾಮ ಬೀರಿ ಮಕ್ಕಳು ಸಹ ದುಶ್ಚಟಕ್ಕೆ ಬಲಿಯಾಗುತ್ತರೆ. ಇದನ್ನು ಅರ್ಥಮಾಡಿಕೊಂಡು ಪೋಷಕರು ಸದಾ ಮಕ್ಕಳಿಗೆ ಉತ್ತಮ ಅಭ್ಯಾಸ ರೂಡಿಸಿಸುವ ರೀತಿ ಮಾದರಿಯಾಗಿ ಎಂದರು.

ಕಾಲೇಜು ವಿದ್ಯಾರ್ಥಿಗಳು ಹುಟ್ಟುಹಬ್ಬ ಆಚರಣೆ ಸಂಭ್ರಮದಲ್ಲಿ ಮಾದಕ ವಸ್ತುಗಳ ಅಭ್ಯಾಸಕ್ಕೆ ದಾಸರಾಗುತ್ತಿದ್ದಾರೆ. ಹುಟ್ಟುಹಬ್ಬ ಅಥವಾ ಇನ್ನಿತರೆ ಸಂಭ್ರಮಯುತ ಕಾರ್ಯಕ್ರಮಗಳು ಮೌಲ್ಯಯುತ ಹಾಗೂ ಸಂತೋಷಮಯ ವಾಗಿರಲಿ. ಒಮ್ಮೆ ದುಶ್ಚಟಗಳಿಗೆ ಬಲಿಯಾದರೆ ಹೊರ ಬರುವುದಕ್ಕೆ ತುಂಬಾ ಕಷ್ಟ ಎಂದು ಎಚ್ಚರಿಸಿದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಡಿವೈಎಸ್ಪಿ ಗಂಗಾಧರ ಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.