ಕ್ಯಾನ್ಸರ್ ಬಗ್ಗೆ ಭಯಬೇಡ: ಎಚ್.ವಿ. ಸುರೇಶ್

| Published : Oct 24 2024, 12:49 AM IST

ಕ್ಯಾನ್ಸರ್ ಬಗ್ಗೆ ಭಯಬೇಡ: ಎಚ್.ವಿ. ಸುರೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಚಾಮರಾಜನಗರದಲ್ಲಿ ಉಚಿತ ಸ್ತನ ಮತ್ತು ಗರ್ಭಕೋಶ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಬೆಂಗಳೂರಿನ ಕ್ಯಾನ್ಸರ್ ಸೊಸೈಟಿ ಅಧ್ಯಕ್ಷ ಎಚ್.ವಿ. ಸುರೇಶ್ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರಕ್ಯಾನ್ಸರ್ ಬಗ್ಗೆ ಭಯಪಡುವ ಅವಶ್ಯಕತೆ ಇಲ್ಲ. ಮೊದಲ ಹಂತದಲ್ಲಿಯೇ ಪತ್ತೆ ಹಚ್ಚಿದರೆ ಈ ಕಾಯಿಲೆಯನ್ನು ಗುಣಪಡಿಸಬಹುದು ಎಂದು ಬೆಂಗಳೂರಿನ ಕ್ಯಾನ್ಸರ್ ಸೊಸೈಟಿ ಅಧ್ಯಕ್ಷ ಎಚ್.ವಿ. ಸುರೇಶ್ ಹೇಳಿದರು.ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕ, ಹಿರಿಯ ವಿದ್ಯಾರ್ಥಿನಿಯರ ಸಂಘ, ಜೆಎಸ್‌ಎಸ್ ಆಸ್ಪತ್ರೆ, ಚಾಮರಾಜನಗರ ಮತ್ತು ಕರ್ನಾಟಕ ಕ್ಯಾನ್ಸರ್ ಸೊಸೈಟಿ, ಬೆಂಗಳೂರು ಇವರ ಸಹಯೋಗದೊಂದಿಗೆ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಸಮುಚ್ಛಯದ ನೌಕರ ವರ್ಗದವರಿಗೆ ಆಯೋಜಿಸಿದ್ದ ಉಚಿತ ಸ್ತನ ಮತ್ತು ಗರ್ಭಕೋಶ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಯುವ ಸಮೂಹವು ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಕರೆ ನೀಡಿ, ಸದಾ ಚಟುವಟಿಕೆಯಿಂದ ಕೂಡಿದ ಜೀವನ ಶೈಲಿ ರೂಢಿಸಿಕೊಳ್ಳಲು ಸಲಹೆ ನೀಡಿದರು. ವಿದ್ಯಾರ್ಥಿನಿಯರಿಗೆ ಸ್ತನ ಮತ್ತು ಗರ್ಭಕೋಶ ಕ್ಯಾನ್ಸರ್‌ನ ಬಗ್ಗೆ ಅರಿವು ಮೂಡಿಸುವ ಅಗತ್ಯತೆ ಇದೆ ಎಂದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕ್ಯಾನ್ಸರ್ ಸೊಸೈಟಿಯ ಡಾ. ಬಾನುಶ್ರೀ ವಿದ್ಯಾರ್ಥಿನಿಯರಿಗೆ ಗರ್ಭಕಂಠದ ಕ್ಯಾನ್ಸರ್ ಹರಡುವ ರೀತಿ ಹಾಗೂ ಅದನ್ನು ತಡೆಗಟ್ಟಲು ಲಭ್ಯವಿರುವ ಲಸಿಕೆಗಳ ಬಗ್ಗೆ ಮಾಹಿತಿ ನೀಡಿದರು. ಲಸಿಕೆಗಳನ್ನು ಯಾವ ಯಾವ ವಯೋಮಾನದಲ್ಲಿ ಪಡೆದರೆ ಗರ್ಭಕಂಠದ ಕ್ಯಾನ್ಸರ್ ಹರಡುವ ವೈರಸ್ ಅನ್ನು ತಡೆಗಟ್ಟಬಹುದು ಎಂಬ ಮಾಹಿತಿ ನೀಡಿ ಸ್ತನ ಕ್ಯಾನ್ಸರ್‌ನ ಲಕ್ಷಣಗಳನ್ನು ಸ್ವತ: ಪರೀಕ್ಷಿಸಿಕೊಳ್ಳುವ ವಿಧಾನವನ್ನು ವಿದ್ಯಾರ್ಥಿನಿಯರಿಗೆ ವಿವರಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಎನ್. ಮಹದೇವಸ್ವಾಮಿ ವಿದ್ಯಾರ್ಥಿನಿಯರು ಉಪನ್ಯಾಸ ಕಾರ್ಯಕ್ರಮದ ಸಂಪೂರ್ಣ ಪ್ರಯೋಜನ ಪಡೆದು ವೈದ್ಯರು ನಿರ್ದೇಶಿಸಿದಂತೆ ಲಸಿಕೆಯನ್ನು ಪಡೆದುಕೊಳ್ಳಲು ಸಲಹೆ ನೀಡಿದರು. ಜೆಎಸ್‌ಎಸ್ ಆಸ್ಪತ್ರೆಯ ಆವರಣದಲ್ಲಿ ನಡೆದ ಶಿಬಿರದಲ್ಲಿ ಉಚಿತವಾಗಿ ಮ್ಯಾಮೋಗ್ರಫಿ, ಪ್ಯಾಪ್ ಸ್ಮಿಯರ್ ಮತ್ತು ಎಚ್‌ಪಿವಿ ಪರೀಕ್ಷೆಯನ್ನು ಮಾಡಲಾಯಿತು. ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಸಮುಚ್ಛಯದ ನೌಕರ ವರ್ಗ ಮತ್ತು ಸಾರ್ವಜನಿಕರನ್ನು ಒಳಗೊಂಡಂತೆ ಒಟ್ಟು 90 ಮಂದಿ ತಪಾಸಣೆಗೆ ಒಳಪಟ್ಟರು. ಚಾಮರಾಜನಗರ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಸಾರ್ವಜನಿಕ ಸಂಪರ್ಕಾಧಿಕಾರಿ ಆರ್.ಎಂ. ಸ್ವಾಮಿ ಜೆಎಸ್‌ಎಸ್ ಆಸ್ಪತ್ರೆಯ ಆಡಳಿತಾಧಿಕಾರಿ ವಿಕಾಸ್ ನಂದಿ ಇದ್ದರು.