ಮಕ್ಕಳಿಗಾಗಿ ಆಸ್ತಿ ಮಾಡಲು ಭ್ರಷ್ಟಾಚಾರಿಗಳಾಗಬೇಡಿ

| Published : Nov 01 2025, 01:15 AM IST

ಸಾರಾಂಶ

ಚಿತ್ರದುರ್ಗ ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮದಲ್ಲಿ ಜಿಲ್ಲಾ ನ್ಯಾಯಾಧೀಶ ರೋಣ ವಾಸುದೇವ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮಕ್ಕಳಿಗಾಗಿ ಆಸ್ತಿ ಮಾಡಲು ಭ್ರಷ್ಟಾಚಾರಿಗಳಾಗಬೇಡಿ. ಸರ್ಕಾರಿ ಅಧಿಕಾರಿಗಳು, ನೌಕರರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ದೃಢ ನಿರ್ಧಾರ ಮಾಡಿದರೆ ಯಾವುದೇ ಭ್ರಷ್ಟಾಚಾರ ನಿಯಂತ್ರಣ ಕಾನೂನು ಹಾಗೂ ಮೇಲ್ವಿಚಾರಣೆಯ ಅಗತ್ಯ ಇರುವುದಿಲ್ಲ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರಾದ ರೋಣ ವಾಸುದೇವ್ ಹೇಳಿದರು.

ಇಲ್ಲಿನ ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಕರ್ನಾಟಕ ಲೋಕಾಯುಕ್ತ ಸಂಯುಕ್ತ ಆಶ್ರಯದಲ್ಲಿ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ-2025 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ವ್ಯಕ್ತಿ ತನ್ನ ನ್ಯಾಯಬದ್ಧವಾದ ಕೆಲಸಕ್ಕಾಗಿ, ತನಗೆ ಸಿಗಬೇಕಾದ ಸೌಲಭ್ಯಕ್ಕಾಗಿ ಹಣ ನೀಡಿ, ಸರ್ಕಾರ ನಿಗಧಿಪಡಿಸಿದ ಶುಲ್ಕಕ್ಕಿಂತ ಹೆಚ್ಚು ಪಾವತಿಸಿ ಸೇವೆ ಪಡೆದುಕೊಳ್ಳಬೇಕಾದರೆ ಆ ವ್ಯಕ್ತಿಯು ಶಾಪ ಹಾಕಿ ಹಣ ನೀಡುತ್ತಾರೆ. ನೊಂದ, ಬಡ ವ್ಯಕ್ತಿಯ ಶಾಪ ಮಾತ್ರ ನಮ್ಮನ್ನು ಹಾಗೂ ನಮ್ಮ ನಂತರದ ಕುಲವನ್ನೂ ಜರೂರಾಗಿ ಬಾಧಿಸಲಿದೆ. ಮಕ್ಕಳಿಗಾಗಿ ಆಸ್ತಿ, ಹಣ ಮಾಡಲು ಭ್ರಷ್ಟಾಚಾರದ ಮಾರ್ಗ ಹಿಡಿಯುವುದು ತರವಲ್ಲ ಎಂದರು.

ದುರ್ಮಾರ್ಗದಿಂದ ಗಳಿಸಿದ್ದು ಯಾವುದೂ ಶಾಶ್ವತವಲ್ಲ. ಹಾಗಾಗಿ ಇದರ ಬಗ್ಗೆ ಜಾಗೃತಿ ಇದ್ದರೆ ಭ್ರಷ್ಟಾಚಾರದ ತಡೆ ಕಾಯ್ದೆ ಹಾಗೂ ನ್ಯಾಯಾಲಯ, ನ್ಯಾಯಾಧೀಶರು ಬೇಕಾಗುವುದಿಲ್ಲ.ಆದರೆ ಪ್ರಸ್ತುತ ದಿನಗಳಲ್ಲಿ ಪ್ರತಿಯೊಂದು ವಿಚಾರಕ್ಕೂ ಕಾನೂನು ಮೊರೆ ಹೋಗುತ್ತಿರುವುದರಿಂದ ನ್ಯಾಯಾಲಯಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಸಣ್ಣ ಸಣ್ಣ ದೇಶಗಳು, ಸಂಪನ್ಮೂಲದ ಕೊರತೆ ಇರುವ ದೇಶಗಳು ಕೂಡ ಅಭಿವೃದ್ಧಿ ಹೊಂದಿರುವ ದೇಶಗಳಾಗಿವೆ. ಆದರೆ ನಮ್ಮ ದೇಶ ಇಷ್ಟೊಂದು ಸಂಪನ್ಮೂಲ ಭರಿತ ದೇಶವಾಗಿದ್ದರೂ ಕೂಡ ಈಗಲೂ ನಾವು ಅಭಿವೃದ್ಧಿಶೀಲ ದೇಶವಾಗಿದೆಯೇ ಹೊರತು, ಅಭಿವೃದ್ಧಿ ಹೊಂದಿರುವ ದೇಶ ಎನ್ನಲಾಗುತ್ತಿಲ್ಲ, ಇದಕ್ಕೆ ಕಾರಣ ನಮ್ಮಲ್ಲಿ ಹೆಚ್ಚಿರುವ ಭ್ರಷ್ಟಾಚಾರ ಎಂದರು.

ಅಧಿಕಾರಿಗಳು, ಸಿಬ್ಬಂದಿಗಳು ಪ್ರಾಮಾಣಿಕವಾಗಿ ಬದುಕುತ್ತೇನೆ ಎಂಬ ದೃಢ ನಿರ್ಧಾರ ಮಾಡಿದರೆ ಯಾವುದೇ ಕಾನೂನು ಹಾಗೂ ಮೇಲ್ವಿಚಾರಣೆಯೂ ಬೇಕಾಗುವುದಿಲ್ಲ. ಅಂತಹ ದಿನಗಳು ಬರಲಿ ಎಂದು ಆಶಯ ವ್ಯಕ್ತಪಡಿಸಿದ ಅವರು, ನಮ್ಮ ಮುಂದಿನ ಜನಾಂಗಕ್ಕೆ ಒಳ್ಳೆಯ ದೇಶ, ಸಂಸ್ಕೃತಿ, ಪರಿಸರವನ್ನು ಉಳಿಸಿ, ಬೆಳೆಸುವ ಕಾರ್ಯವಾಗಬೇಕು ಎಂದು ಸಲಹೆ ನೀಡಿದರು.

ನಮ್ಮ ಹಿರಿಯರು ಸ್ವಾತಂತ್ರ್ಯಕ್ಕಾಗಿ ಹೋರಾಡುವ ಸಂದರ್ಭದಲ್ಲಿ ಸಾಕಷ್ಟು ಮಂದಿ ಜೈಲಿಗೆ ಹೋಗಿದ್ದಾರೆ. ಆಗಿನ ಪರಿಸ್ಥಿತಿಯೇ ಬೇರೆ. ಇಂದಿನ ಪರಿಸ್ಥಿತಿಯೇ ಬೇರೆ . ಇಂದಿನ ದಿನಮಾನಗಳಲ್ಲಿ ವ್ಯಕ್ತಿ ಜೈಲಿನಿಂದ ಹೊರಗಡೆ ಬಂದಾಗ ಆತನ ಹೆಸರಿನಲ್ಲಿ ಉಘೇ ಉಘೇ ಎಂದು ಭುಜದ ಮೇಲೆ ಕೂರಿಸಿಕೊಂಡು ಪಟಾಕಿ ಸಿಡಿಸಿ ಸಂಭ್ರಮಿಸುವ ಮನಸ್ಥಿತಿಯನ್ನು ಜನರು ಬೆಳೆಸಿಕೊಂಡಿದ್ದಾರೆ ಎಂದು ವಿಷಾದ ವ್ಯಕ್ತಪಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಮಾತನಾಡಿ, ಅಧಿಕಾರಿಗಳು, ನೌಕರರು ಭ್ರಷ್ಟಾಚಾರದಲ್ಲಿ ಸಿಲುಕಿಕೊಂಡಾಗ ಅಂತಹ ಅಧಿಕಾರಿಗಳು, ನೌಕರರ ವಿರುದ್ಧ ಕ್ರಿಮಿನಲ್ ಪ್ರಕರಣ, ಲೋಕಾಯುಕ್ತ ವಿಚಾರಣೆ ಸೇರಿದಂತೆ ಅನೇಕ ಬಗೆಯ ತೊಂದರೆಗಳನ್ನು ಅನುಭವಿಸುತ್ತಾರೆ. ಪ್ರಕರಣಗಳ ವಿಚಾರಣೆ ಮುಕ್ತಾಯವಾಗದೇ ಮುಂಬಡ್ತಿಯಿಂದಲೂ ವಂಚಿತರಾಗುತ್ತಾರೆ. ಇದರಿಂದ ಅವರ ಕುಟುಂಬವು ಕೂಡ ಮುಜುಗರ ಹಾಗೂ ಅವಮಾನ ಎದುರಿಸಬೇಕಾಗಿ ಬರುತ್ತದೆ. ಹಾಗಾಗಿ ನೌಕರರು ಕಾನೂನುಬದ್ಧವಾಗಿ ಕೆಲಸ ಮಾಡಿ, ಯಾರಿಗೂ ಹೆದರಬೇಡಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್, ಉಪವಿಭಾಗಾಧಿಕಾರಿ ಮಹೆಬೂಬ್ ಜಿಲಾನಿ ಖುರೇಷಿ , ಕರ್ನಾಟಕ ಲೋಕಾಯುಕ್ತ ಡಿವೈಎಸ್‌ಪಿ ಮೃತ್ಯುಂಜಯ, ವಿಶೇಷ ಸಾರ್ವಜನಿಕ ಅಭಿಯೋಜಕ ಮಲ್ಲೇಶಪ್ಪ, ಚಿತ್ರದುರ್ಗ ಪೊಲೀಸ್ ಉಪಾಧೀಕ್ಷಕ ಪಿ.ಕೆ ದಿನಕರ್ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.